Advertisement
ವ್ಯಾಪಾರ ಉದ್ದೇಶಕ್ಕಾಗಿ ಬ್ರಿಟಿಷರು ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕುದುರೆಗಾಡಿ ಹೋಗಲು ತಕ್ಕುದಾದ ಸೇತುವೆಯನ್ನು ನಿರ್ಮಿಸಿದ್ದರು. ಆದರೆ ಇದೇ ಸೇತುವೆಯು ಮಂಗಳೂರಿನಿಂದ ಕಾರ್ಕಳಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-169ಕ್ಕೂ ಬಳಕೆಗೊಂಡು ಇಂದು ಶಿಥಿಲಾವಸ್ಥೆಯನ್ನು ತಲುಪಿದೆ. ಇತ್ತೀಚೆಗೆ ಮೂಲರಪಟ್ಣ ಸೇತುವೆ ಕುಸಿದ ಕಾರಣ ಇದೇ ಗತಿ ಗುರುಪುರ ಸೇತುವೆಗೂ ಬರಬಹುದು ಎಂಬ ಆತಂಕದಲ್ಲಿ ತಂತ್ರಜ್ಞರು ಆಧುನಿಕ ಉಪಕರಣಗಳನ್ನು ಬಳಸಿ ಸಮಗ್ರ ಪರಿಶೀಲನೆ ನಡೆಸಿದ್ದು ವರದಿ ತಯಾರಿಸಲಿದೆ.
ಸಮಗ್ರ ಪರೀಕ್ಷೆ, ಪರಿಶೀಲನೆ
ಇದೇ ಸಮಯದಲ್ಲಿ ಬೆಂಗಳೂರಿನ ಸೇತುವೆ ಪರಿಶೀಲನೆ ಏಜೆನ್ಸಿಯ ಸೇತುವೆ ತಜ್ಞರಾಗಿರುವ ಜೈಪ್ರಸಾದ್ ಅವರನ್ನೊಳಗೊಂಡ ವಿಶೇಷ ತಂಡವು ಕ್ರೇನ್ ಬಳಸಿಕೊಂಡು ಸೇತುವೆಯ ಅಡಿಭಾಗ, ಮೇಲ್ಭಾಗ ಸೇರಿ ಸೇತುವೆಯ ಎಲ್ಲ ಭಾಗಗಳನ್ನು ಪರಿಶೀಲನೆ ನಡೆಸಿತು. ಕಬ್ಬಿಣದ ಸ್ಲಾéಬುಗಳಿಗೆ ತುಕ್ಕು ಹಿಡಿದ ಭಾಗಗಳ ಹಲವು ಫೊಟೊಗಳನ್ನು ಸೆರೆಹಿಡಿಯಲಾಗಿದೆ. ಇದಾದ ಅನಂತರ ತಂತ್ರಜ್ಞರ ತಂಡವು ನದಿ ಭಾಗಕ್ಕಿಳಿದು ಕ್ರೇನ್ ಮೂಲಕ ಒಟ್ಟು ಮೂರು ಕಂಬಗಳ ಸಮಾನಾಂತರದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿತು. ಬೆಳಗ್ಗೆ ಆರಕ್ಕೆ ಆರಂಭವಾದ ಪರೀಕ್ಷೆಯು 9.30ಕ್ಕೆ ಮುಕ್ತಾಯಗೊಂಡಿತು. ಪರೀಕ್ಷೆಯ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಗುರುಪುರ ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸಿ, ಹತ್ತರ ಅನಂತರ ಮತ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಾಹನಗಳೆಲ್ಲ ಪರ್ಯಾಯ ರಸ್ತೆಯಲ್ಲಿ ಸಂಚರಿಸಿದವು.
Related Articles
ಸಂಚಾರ ಬದಲಾವಣೆ
ಮಂಗಳೂರಿನಿಂದ ಮೂಡಬಿದಿರೆ ಕಾರ್ಕಳಕ್ಕೆ ತೆರಳುವ ಬಸ್‌ಗಳು ಕಾವೂರು ಮುಖಾಂತರ ಬಜ್ಪೆಗೆ ಆಗಮಿಸಿ ಕೈಕಂಬದಿಂದ ಹಾದುಹೋದವು. ಕಾರ್ಕಳ ಮೂಡಬಿದಿರೆಯಿಂದ ಆಗಮಿಸಿದ ಬಸ್ ಗಳು ಕೈಕಂಬದಿಂದ ಬಜ್ಪೆ ಮುಖಾಂತರ ಮಂಗಳೂರಿಗೆ ಸಂಚರಿಸಿತು. ಸ್ಥಳೀಯ ಶಾಲಾ ಮಕ್ಕಳು ಅಘೋಷಿತ ರಜೆ ಹಾಕಿದರು. ಬೆಳ್ಳಂಬೆಳಗ್ಗೆ ಏಕಾಏಕಿ ರಸ್ತೆ ಬಂದ್ ಮಾಡಿರುವುದನ್ನು ಕಂಡು ಸೇತುವೆ ಕುಸಿದಿದೆ ಎಂಬ ವದಂತಿ ಹಬ್ಬಿ ಹಲವಾರು ಮಂದಿ ಸೇತುವೆಯತ್ತ ಧಾವಿಸಿ ಬಂದಿದ್ದರು. ಸ್ಥಳದಲ್ಲಿ ಪೊಲೀಸರಿಂದ ಬಂದೋಬಸ್ತು ಏರ್ಪಡಿಸಲಾಗಿತ್ತು.
Advertisement
ರಂಧ್ರ ಕೊರೆದು ಪರಿಶೀಲನೆ ಸೇತುವೆಯಲ್ಲಿ ರಂಧ್ರಕೊರೆದು ಪರಿಶೀಲನೆ ನಡೆಸಲಾಗಿದೆ. ಸೇತುವೆಯ ತಡೆಗೋಡೆ, ತುಕ್ಕು ಹಿಡಿದ ಭಾಗ, ಸೇತುವೆ ಅಡಿಭಾಗ ಮುಖ್ಯವಾಗಿ ಬೇರಿಂಗ್, ಡೆಸ್ಕ್ ಲ್ಯಾಬ್, ಕುಸಿದ ಸ್ಥಳ, ಇತ್ಯಾದಿಗಳನ್ನು ಪರಿಶೀಲಿಸಿತು. ಸೇತುವೆ ಮೇಲ್ಭಾಗದ ಟ್ರಸ್ ಉತ್ತಮವಾಗಿದೆ ಎಂದಷ್ಟೇ ಹೇಳಿದ ತಂಡವು ಉಳಿದಂತೆ ಪರೀಕ್ಷೆಯ ಯಾವ ಮಾಹಿತಿಯನ್ನೂ ಬಿಟ್ಟುಕೊಡಲು ನಿರಾಕರಿಸಿದೆ.