ಬೆಂಗಳೂರು: ಆಗಾಗ್ಗೆ ಭೂಕುಸಿತ, ಲಘು ಭೂಕಂಪ ಸಂಭವಿಸುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಪ್ರದೇಶಗಳಿಗೆ ಹೈದರಾಬಾದ್‌ನಿಂದ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ತಿಳಿಯಲು ಹೈದರಾಬಾದ್‌ನ ರಾಷ್ಟ್ರೀಯ ಭೂಗರ್ಭ ಸಂಶೋಧನೆ ಸಂಸ್ಥೆಯ ತಂಡವನ್ನು ಕರೆಸಲಾಗುತ್ತಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸಮಸ್ಯೆ ತಲೆದೋರಿದ ಸ್ಥಳಗಳಿಗೆ ನಾನೂ ಭೇಟಿ ನೀಡಲಿದ್ದೇನೆ. ಜತೆಗೆ, ರಿಕ್ಟರ್ ಮಾಪನದ ತೀವ್ರತೆ ದಾಖಲಿಸುವ ಜತೆಗೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಭೂಮಿಯ ಆಳದಲ್ಲಿ ಸುಣ್ಣದ ಕಲ್ಲಿನ ಸಂಗ್ರಹವಿರುವ ಭಾಗದಲ್ಲಿ ಮಳೆ ನೀರು ಹರಿದು ಒತ್ತಡ ಸೃಷ್ಟಿಯಾಗುತ್ತದೆ. ಹೀಗಾಗಿ, ಕಂಪನ ಸಂಭವಿಸುತ್ತದೆ ಎಂದು ಹೇಳಲಾಗಿದ್ದು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಭೂಪರಿವರ್ತನೆಗೆ ನಿರ್ಬಂಧ
ಕೊಡಗು ಭಾಗದಲ್ಲಿ ಅತಿಯಾದ ವಾಣಿಜ್ಯ ಚಟು ವಟಿಕೆಗಳು ಸಹಿತ ಇತರ ಕಾರಣಗಳಿಂದಾಗಿ ಭೂಗರ್ಭದಲ್ಲಿ ಒತ್ತಡ ಸೃಷ್ಟಿಯಾಗುವುದು ಕೂಡ ಸಮಸ್ಯೆಗೆ ಕಾರಣ ಎಂದು ತಜ್ಞರು ವರದಿ ನೀಡಿದ್ದರು. ಹಾಗಾಗಿ ವಾಣಿಜ್ಯ ಚಟುವಟಿಕೆ ಉದ್ದೇಶಕ್ಕೆ ಭೂ ಪರಿವರ್ತನೆಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದರು.