Advertisement

ಬೆಂಗಳೂರು ನಗರ ವಿವಿ ನಿರ್ಮಾಣಕ್ಕೆ ತಜ್ಞರ ಸಲಹೆ

12:02 PM Jan 10, 2018 | |

ಬೆಂಗಳೂರು: ಸೆಂಟ್ರಲ್‌ ಕಾಲೇಜು ಐತಿಹಾಸಿಕ ಕಟ್ಟಡಗಳನ್ನು ಉಳಿಸಿಕೊಂಡು, ಬೆಂಗಳೂರು ನಗರ ಕೇಂದ್ರಿತ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು. ಬೆಂವಿವಿಯಿಂದ ಬೇರ್ಪಟ್ಟು ಹೊಸದಾಗಿ ಹುಟ್ಟಿಕೊಂಡ ಎರಡು ವಿವಿಗೆ ಸರ್ಕಾರದಿಂದ ತಲಾ 100 ಕೋಟಿ ರೂ. ಅನುದಾನ ಹಾಗೂ ಸ್ವಾಯತ್ತ ಸ್ಥಾನಮಾನ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Advertisement

ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆಯಿಂದ ಹುಟ್ಟಿಕೊಂಡ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಬೆಂಗಳೂರು ನಗರದ ವಿಶ್ವವಿದ್ಯಾಲಯವಾಗಿ ನಿರ್ಮಿಸುವ ಹಾಗೂ ವಿಸ್ತರಿಸುವ ಸಂಬಂಧ ಸಲಹಾ ಮತ್ತು ಜ್ಞಾನ ಮಂಡಳಿಯ ಮೊದಲ ಸಭೆ ಮಂಗಳವಾರ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ನಡೆದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ರಾಜ್ಯ ವಿಶ್ವವಿದ್ಯಾಲಯಗಳ ಸಮಗ್ರ ಮಸೂದೆಯಲ್ಲಿ ಕುಲಪತಿಗಳ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಕಾಲೇಜುಗಳಿಗೆ ಸ್ವಾಯತ್ತತೆ ನೀಡುವುದರಿಂದ ವಿವಿಗಳ ನಿಯಂತ್ರಣ ತಪ್ಪುತ್ತದೆ. ಕಾಲೇಜುಗಳೇ ಇಷ್ಟ ಬಂದಂತೆ ಪಠ್ಯಕ್ರಮ ರೂಪಿಸಿಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಭಾಷಾ ವಿಷಯದ ಮೇಲೆ ಪೆಟ್ಟು ಬೀಳಲಿದೆ ಎಂದರು.

ವಿಶ್ರಾಂತ ಕುಲಪತಿ ಡಾ.ಎನ್‌.ಪ್ರಭುದೇವ್‌ ಮಾತನಾಡಿ, ಬೆಂವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಶೇ.51ರಷ್ಟು ಹುದ್ದೆ ಖಾಲಿ ಇದೆ. ಇದನ್ನು ಮೂರು ವಿವಿಗಳಿಗೆ ಹಂಚಿಕೆ ಮಾಡುವುದರಿಂದ ಶೇ.14 ಪ್ರತಿ ವಿವಿಗೆ ಸಿಗಲಿದೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಕೆ.ಮರುಳ ಸಿದ್ದಪ್ಪ , ಇತಿಹಾಸ ತಜ್ಞ ಡಾ.ಸುರೇಶ್‌ ಮೂನ ಮಾತನಾಡಿದರು. ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಎಚ್‌.ಎಸ್‌.ಶಿವಪ್ರಕಾಶ್‌, ಮಾಜಿ ಶಿಕ್ಷಣ ಸಚಿವ ಬಿ.ಕೆ.ಚಂದ್ರಶೇಖರ್‌, ನ್ಯಾಕ್‌ ನಿವೃತ್ತ ನಿರ್ದೇಶಕ ಎಚ್‌.ಎ. ರಂಗನಾಥ್‌, ವಿಜ್ಞಾನಿ ನಾಗೇಶ್‌ ಹೆಗಡೆ, ಸಂಗೀತ ನಿರ್ದೇಶಕ ಹಂಸಲೇಖ,

Advertisement

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪತ್ರಕರ್ತೆ ವಿಜಯಮ್ಮ, ರಂಗಭೂಮಿ ಕಲಾವಿದರಾದ ಕೆ.ವೈ.ನಾರಾಯಣಸ್ವಾಮಿ, ನಾಗರಾಜಮೂರ್ತಿ, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಎಸ್‌.ಜಾಫೆಟ್‌ ಮತ್ತು ಕುಲಸಚಿವ ಪ್ರೊ.ಎಂ.ರಾಮಚಂದ್ರಗೌಡ ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚುವರಿ ಭೂಮಿ ಬಳಕೆ ಆರೋಪ: ಸೆಂಟ್ರಲ್‌ ಕಾಲೇಜು ಆವರಣದ  ಪ್ರಸನ್ನ ಬ್ಲಾಕ್‌ನಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ 100*100 ಚದರ ಅಡಿ ಸ್ಥಳ ನೀಡಲಾಗಿತ್ತು. ಕಟ್ಟಡ ನಿರ್ಮಾಣ ಮಾಡುವ ನೀಲಿ ನಕ್ಷೆಯಲ್ಲೂ ಇಷ್ಟೇ ಸ್ಥಳ ಬಳಸಿಕೊಂಡಿದ್ದರು. ಆದರೆ, ಕಾಮಗಾರಿ ಹಂತದಲ್ಲಿ  144*156 ಚದರ ಅಡಿಗೆ ಕಾಪೌಂಡ್‌ ಹಾಕಿಕೊಂಡಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿವಿ ಅಧಿಕಾರಿಗಳು ಆರೋಪಿಸಿದ್ದಾರೆ.

ಪ್ರಸನ್ನ ಬ್ಲಾಕ್‌ನಲ್ಲಿ ಹೆಚ್ಚುವರಿ ಸ್ಥಳ ಆಕ್ರಮಿಸಿಕೊಂಡಿರುವುದರಿಂದ ಬೆಂಗಳೂರು ಕೇಂದ್ರ ವಿವಿಯ ವಿಸ್ತರಣೆಗೆ ತೊಡಕಾಗಲಿದೆ. ಮುಂದೆ ಯಾವುದೇ ಕಾರಣಕ್ಕೂ ವಿವಿಗೆ ಸಂಬಂಧಪಟ್ಟ ಸ್ಥಳವನ್ನು ಬೇರೆ ಉದ್ದೇಶಕ್ಕೆ ನೀಡಬಾರದು ಎಂದು ಬೆಂಗಳೂರು ಕೇಂದ್ರ ವಿವಿ ಕುಲಸಚಿವ ಪ್ರೊ.ಎಂ.ರಾಮಚಂದ್ರಗೌಡ ಅವರು ಉನ್ನತ ಪರಿಷತ್ತಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next