ಚಿತ್ರದುರ್ಗ: ಸಮಾಜಮುಖೀ ಚಿಂತನೆ ಜತೆಯಲ್ಲಿ ಕರ್ತವ್ಯ ಮಾಡಿ ಭೋಗ ಅನುಭವಿಸಬೇಕು. ಅನುಭವಿಸುವ ಭೋಗದಲ್ಲಿ ಇತಿ ಮಿತಿ ಇರಲಿ. ಕರ್ತವ್ಯವನ್ನೇ ಮಾಡದೆ ಭೋಗದಲ್ಲಿ ಮುಳಗಬೇಡಿ ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶ್ರೀ ಹರಿವಾಯುಗುರು ಸೇವಾ ಸಂಘದಿಂದ ಎಂಟು ದಿನಗಳ ಕಾಲ ಆಯೋಜಿಸಿರುವ ಹರಿದಾಸ ಹಬ್ಬ 2019, ಶ್ರೀ ಹರಿವಾಯುಸ್ತುತಿ ಪಾರಾಯಣದ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದಾಸಸುಜ್ಞಾನ ದೀಪ ಉದ್ಘಾಟಿಸಿ ಅವರು ಮಾತನಾಡಿದರು.
ಅತಿ ಭೋಗ ಒಳ್ಳೆಯದಲ್ಲ. ಅತಿ ಭೋಗ ಹಲವು ಸಮಸ್ಯೆ, ತೊಂದರೆ ತಂದು ಹಾಕಲಿದೆ. ಕೆಲವರು ಕೆಟ್ಟ ಪದಾರ್ಥ ತಿನ್ನುವ ಆಸಕ್ತಿ ಹೊಂದಿದ್ದಾರೆ. ಕರ್ಮ ಮಾಡುವಾಗ ಮಾಡಬಾರದ ಕಾರ್ಯಗಳನ್ನ, ಭ್ರಷ್ಟಾಚಾರ ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಹಾಗಾಗಿ ಮೋಸ, ವಂಚನೆ, ಭ್ರಷ್ಟಾಚಾರ ಮಾಡಬಾರದು. ಭಗವಂತನ ಜತೆ ಗಟ್ಟಿಯಾದ ಸಂಬಂಧ ಬೆಳೆಸಬೇಕು. ಆಗ ಉತ್ತಮ ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.
ಶುದ್ಧ ಮನಸ್ಸಿಂದ ಭಗವಂತನ ಸ್ಮರಣೆ ಮಾಡಬೇಕು. ಆ ಮೂಲಕ ಭಗವಂತನಿಗೆ ಹತ್ತಿರ ಆಗಬೇಕು. ಭಗವಂತನಿಗೆ ಹತ್ತಿರವಾದಾಗ ಯಾರಿಗೂ ಅಪಾಯವಾಗುವುದಿಲ್ಲ. ಆತನಿಂದ ದೂರ ಹೋದಷ್ಟು ಅಪಾಯ ಹೆಚ್ಚು ಎಂದು ಎಚ್ಚರಿಸಿದರು.
ಸಂಸಾರ ಎನ್ನುವುದು ಬೀಸುವ ಕಲ್ಲು ಇದ್ದಂತೆ. ಸಂಸಾರದಲ್ಲಿ ಏಳುವ ಘರ್ಷಣೆಯಲ್ಲಿ ನಾವು ಪುಡಿ ಪುಡಿ ಆಗುತ್ತಿದ್ದೇವೆ. ಬೀಸುವ ಕಲ್ಲಿನ ಗೂಟದಿಂದ ದೂರ ಉಳಿದ ಧಾನ್ಯ ಪುಡಿ ಪುಡಿ ಆಗಲಿದೆ. ಆದರೆ ಗೂಟಕ್ಕೆ ಅಂಟಿಕೊಂಡ ಧಾನ್ಯಕ್ಕೆ ಏನೂ ಆಗುವುದಿಲ್ಲ, ಹಾಗಾಗಿ ಸಂಸಾರವೆಂಬ ಬೀಸುವ ಕಲ್ಲಿನಲ್ಲಿ ಗೂಟಕ್ಕೆ ಅಂಟಿಕೊಂಡ ಧಾನ್ಯದಂತೆ ನಾವು ಆಗಬೇಕು ಎಂದರು. ಚಿತ್ರದುರ್ಗದಲ್ಲಿ ಹರಿದಾಸ ಹಬ್ಬ ಮಾಡುವ ಮೂಲಕ ಎಲ್ಲರ ಹೃದಯದ ಮೈದಾನದಲ್ಲಿ ಜ್ಞಾನ, ಭಕ್ತಿ ಗಂಗೆ ಹರಿಯುವಂತೆ ಮಾಡುತ್ತಿದ್ದಾರೆ. ಜ್ಞಾನ ಗಂಗೆ, ಭಕ್ತಿ ಗಂಗೆ ಶಾಸ್ತ್ರದ ಜತೆಯಲ್ಲಿ ಬಂತವಾಗಿದೆ. ಇವುಗಳನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ ಎಂದರು.
ಉಡುಪಿ ಪೇಜಾವರ ಅಧೋಕ್ಷಜ ಮಠ ಕಿರಿಯ ಪಟ್ಟ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಮಾತನಾಡಿ, ಪ್ರತಿಯೊಬ್ಬರೂ ಭಗವಂತನನ್ನು ಸ್ಮರಿಸಬೇಕು. ಭಗವಂತನ ಸ್ಮರಣೆ, ದರ್ಶನ ಸಿಕ್ಕರೆ ಅದೇ ನಿಜವಾದ ದೊಡ್ಡ ಹಬ್ಬ. ನಿರಂತರ ಹರಿಭಜನೆ ಮಾಡಬೇಕು. ಅಂತಹ ಕೆಲಸವನ್ನು ಹರಿವಾಯುಗುರು ಸೇವಾ ಸಂಘದವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಪೇಜಾವರ ಶ್ರೀಗಳು ಮಾರ್ಗದರ್ಶನದಲ್ಲಿ ದೇಶದ ಹಲವಾರು ಸಮಸ್ಯೆಗಳು ನಿವಾರಣೆ ಆಗುತ್ತಿವೆ. ರಾಮಮಂದಿರ ಕಟ್ಟಬೇಕು ಎಂಬುದು ಬಹುತೇಕರ ಅಭಿಲಾಷೆ. ಈ ವಿಚಾರದಲ್ಲಿ ಏನೆ ರಾಜಕೀಯ ತಿರುವು ಪಡೆದುಕೊಂಡಿದ್ದರೂ ರಾಮಮಂದಿರ ಕಟ್ಟುವ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಬೆಂಗಳೂರಿನ ಶ್ರೀ ವ್ಯಾಸರಾಜ ಮಠದ ದಿವಾನರಾದ ಎಲ್.ಎಸ್. ಬ್ರಹ್ಮಣ್ಯತೀರ್ಥಾಚಾರ್ಯರು, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಪಿ.ಎಲ್. ಸುರೇಶ್ ರಾಜು, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶ್ರೇಷ್ಠಿ, ಕರಾವಳಿ ಸ್ನೇಹಕೂಟ ಅಧ್ಯಕ್ಷ ವೇದವ್ಯಾಸ ಮತ್ತಿತರರು ಇದ್ದರು.