Advertisement

Trekking: ದುರ್ಗಮವಾದ ಒಂದು ಚಾರಣದ ಅನುಭವ; ಜಟಿಲ ಕಾನನದ ಕುಟಿಲ ಪಥಗಳಲಿ

03:28 PM Dec 17, 2023 | Team Udayavani |

ಚಾರಣಪ್ರಿಯರಿಗೆ ಅಮೆರಿಕ ಬಹಳ ವ್ಯವಸ್ಥಿತವಾದ ದೇಶ. ಇಲ್ಲಿ ನೂರಾರು ರಾಷ್ಟ್ರೀಯ ಉದ್ಯಾನಗಳಿವೆ. ಸಾವಿರಾರು ಎಕ್ರೆಗಟ್ಟಲೇ ಹಬ್ಬಿರುವ ಈ ಉದ್ಯಾನವನಗಳ ತುಂಬ ಚಾರಣಕ್ಕೆಂದೇ ನಿಗದಿ ಮಾಡಿದ ಸಹಸ್ರಾರು ತಾಣಗಳಿವೆ. ಸುಮ್ಮನೆ ಯಾವುದೋ ಬೆಟ್ಟದ ದಾರಿ ಹಿಡಿದು ಸಾಗುವುದಲ್ಲ. ಅದೆಂತಹ ದುರ್ಗಮ ಮಾರ್ಗವಿದ್ದರೂ ಚಾರಣಿಗರಿಗೆ ಅನುಕೂಲವಾಗುವಂತೆ ದಾರಿಯನ್ನು ಕೊರೆದು, ಅಲ್ಲಲ್ಲಿ ಮಾಹಿತಿ ಫ‌ಲಕಗಳನ್ನು ನೆಟ್ಟು ಎಂತಹ ದೊಡ್ಡ ಕಾಡಿನೊಳಗೆ ಹೊಕ್ಕರೂ ಸುಲಭವಾಗಿ ಹೊರ ಬರುವಂತೆ ಮಾರ್ಗದರ್ಶನವಿರುತ್ತದೆ.

Advertisement

ಪ್ರತೀ  ಉದ್ಯಾನವನಕ್ಕೂ ಸರಕಾರದವರು ವಿಸಿಟಿಂಗ್‌ ಸೆಂಟರ್‌ ಎಂಬ ಹೆಸರಿನ ಆಫೀಸನ್ನು ನಡೆಸುತ್ತಾರೆ. ಚಾರಣಕ್ಕೆ ಹೊರಡುವ ಮುನ್ನ ಇಲ್ಲಿಂದ ನಕ್ಷೆಗಳನ್ನು ಪಡೆಯಬಹುದು. ಇಡೀ ಕಾಡಿನ ನಕ್ಷೆಯ ಜತೆಗೆ ಚಾರಣಕ್ಕೆ ಹೋಗಬಹುದಾದಂತಹ ಮಾರ್ಗಗಳನ್ನು ಈ ನಕ್ಷೆಯಲ್ಲಿ ಗುರುತು ಹಾಕಿ ವಿವರಗಳನ್ನೆಲ್ಲ ಬರೆದಿರುತ್ತಾರಾದ್ದರಿಂದ ಕಾಡಿನೊಳಗೆ ಹೋದಾಗ ಮೊಬೈಲ್‌ ನೆಟವರ್ಕ್‌ ಇಲ್ಲದೇ ಇದ್ದರೂ ನಾವೆಲ್ಲಿದ್ದೇವೆ, ಹೊರ ಬರಲಿಕ್ಕೆ ದಾರಿ ಇತ್ಯಾದಿಗಳೆಲ್ಲ ಸ್ಪಷ್ಟವಾಗಿ ಗೊತ್ತಾಗಿ ಬಿಡುತ್ತದೆ.

ಜತೆಗೆ ಚಾರಣ ಪ್ರಿಯರಿಗೆಂದೇ ಮಾಡಿದ ಆ್ಯಪ್‌ನಲ್ಲಿ ಸರಳ, ಕಠಿನ ಮತ್ತು ದುರ್ಲಭ (Easy, Medium, Difficult) ಎಂದು ಗುರುತು ಮಾಡಿರುವ ಚಾರಣಗಳನ್ನು ನೋಡಿ ನಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಬಹುದು. ಈ ಆ್ಯಪ್‌ನಲ್ಲಿ ಆ ಜಾಗದಲ್ಲಿ ಇರುವ ಸೌಲಭ್ಯಗಳು, ಜನರ ಅಭಿಪ್ರಾಯಗಳು, ಮಾರ್ಗ ಮಧ್ಯದಲ್ಲಿ ಸಿಗಬಹುದಾದಂತಹ ನೋಡಬಹುದಾದ ತಾಣಗಳನ್ನೆಲ್ಲ ತಿಳಿಯಬಹುದಾದ್ದರಿಂದ ಪ್ರತಿಯೊಬ್ಬ ಚಾರಣಿಗನ ಫೋನಿನಲ್ಲಿ ಈ ಆ್ಯಪ್‌ ಇದ್ದೇ ಇರುತ್ತದೆ.

ಚಾರಣಕ್ಕೆ ಹೋದಾಗ ಅನೇಕ ತರಹದ ಜನರು ಕಾಣಸಿಗುತ್ತಾರೆ. ಕೆಲವರು ಯಾರಿಗೂ ಮುಖ ಕೊಟ್ಟು ಮಾತನಾಡಿಸದೇ ತಮ್ಮ ಪಾಡಿಗೆ ತಾವು ಹೋಗುತ್ತಿರುತ್ತಾರೆ. ಇನ್ನು ಕೆಲವರು ಎದುರಿಗೆ ಸಿಗುವ ಪ್ರತಿಯೊಬ್ಬರಿಗೂ ಹಾಯ್‌ ಎನ್ನುತ್ತ, ಮುಗುಳು ನಗುತ್ತ ಅದು ತಮ್ಮ ಕರ್ತವ್ಯವೇನೋ ಎಂಬಂತೆ ಒಬ್ಬರನ್ನು ಬಿಡದೇ ಪಾಲಿಸಿಕೊಂಡು ಹೋಗುತ್ತಾರೆ. ಮಾತಿಗೆ ಎಳೆಯುವ ಜಾಯಮಾನದವರು ನಡೆಯುತ್ತಲೋ ಏನೋ ಒಂದು ಹೇಳುತ್ತ ಸಾಗುತ್ತಾರೆ. ಮುಂದಿನ ದಾರಿ ತೀರಾ ಕಷ್ಟವಾಗಿದೆಯೆಂದೋ, ಮುಂದೆ ಹೋದರೆ ಸಿಗುವ ಜಲಪಾತ ಬಹಳ ಸುಂದರವಾಗಿದೆಯೆಂದೋ, ದಾರಿಯನ್ನು ಮುಚ್ಚಿದ್ದಾರೋ ಎಂದು ಹೇಳಿ ಎದುರಿಗಿರುವವರು ಸಹ ಅದಕ್ಕೆ ಪ್ರತಿಕ್ರಿಯಿಸಿದರೆ ಅರೆ ಹೊತ್ತು ನಿಂತು ಮಾತನಾಡಲಿಕ್ಕೆ ಅವರಿಗೆ ಯಾವ ತೊಂದರೆಯೂ ಇರುವುದಿಲ್ಲ.

ಈ ರೀತಿಯಾಗಿ ಸ್ವಲ್ಪ ವಿಶ್ರಾಂತಿಯೂ ಆಗುತ್ತದೆ ಎಂದೂ ಇರಬಹುದು. ಫೋಟೋ ಪ್ರಿಯರು ಹಲವರು. ಹೆಜ್ಜೆಹೆಜ್ಜೆಗೂ ಫೋಟೊ ತೆಗೆಯುತ್ತ, ವೀಡಿಯೋ ಮಾಡುತ್ತ ಸಾಗುತ್ತಾರೆ. ಉಸ್‌ ಉಸ್‌ ಎಂದು ತೇಗುತ್ತ ಬರುವವರನ್ನು ನೋಡಿದರೆ ಅರ್ಧ ದಾರಿಯಲ್ಲಿರುವ ನಮ್ಮ ಮುಂದಿನ ಪರಿಸ್ಥಿತಿ ನೆನೆದು ಭಯವಾಗುತ್ತದೆ. ಒಂದಷ್ಟು ಜನ ಚಾರಣಕ್ಕೆ ಸರ್ವ ಸನ್ನದ್ಧರಾಗಿ ಬಂದಿರುತ್ತಾರೆ.

Advertisement

ದೊಡ್ಡ ದೊಡ್ಡ ಬೂಟುಗಳು, ಕೈಯ್ಯಲ್ಲಿ ಚಾರಣಕ್ಕೆಂದೇ ಮೀಸಲಾದ ಊರುಗೋಲುಗಳು, ತಲೆಗೆ ಕತ್ತಿರುವ ಬ್ಯಾಟರಿ, ಹೆಗಲಿಗೇರಿಸಿರುವ ಚಾರಣದ ಬ್ಯಾಗು, ಟೊಪ್ಪಿ ಇತ್ಯಾದಿಗಳನ್ನು ನೋಡಿದರೆ ಅವರು ಎಂತೆಂತಹ ಚಾರಣಗಳನ್ನು ಮಾಡಿರಬಹುದು ಎಂದು ಅಚ್ಚರಿಯಾಗುತ್ತದೆ. ಇದಕ್ಕೆ ವಿರುದ್ಧ ಎಂಬಂತೆ ಕೆಲವರು ಯಾವ ತಯಾರಿಯೂ ಇಲ್ಲದೇ ಚಾರಣಕ್ಕೆ ಆರಮಾ ಎನ್ನಿಸುವಂತಹ ಬಟ್ಟೆಯೂ ಇಲ್ಲದೇ ಜೀನ್ಸ್‌, ಸ್ಕರ್ಟ್‌ ಇತ್ಯಾದಿಗಳನ್ನು ಧರಿಸಿ ಯಾವುದೋ ಸಿಟಿಯಲ್ಲಿ ರಾತ್ರಿಯ ಹೊತ್ತು ಓಡಾಡಲಿಕ್ಕೆ ಬಂದಿದ್ದೇವೆನೋ ಎಂಬಂತಿರುತ್ತಾರೆ.

ಇಡೀ ಕುಟುಂಬ ಸಮೇತವಾಗಿ ಬಂದಿರುವ ಜನರನ್ನು ನೋಡಿದಾಗಲಂತೂ ಭಾರಿ ಖುಷಿಯಾಗುತ್ತದೆ. ಇನ್ನೂ ವರ್ಷವೂ ದಾಟಿರದಂತಹ ಕೂಸುಗಳನ್ನು ಬ್ಯಾಗ್‌ಗಳಂತೆ ಹೆಗಲಿಗೇರಿಸಿಕೊಂಡು ಹೊರಟು ಬಿಡುತ್ತಾರೆ. ಅಂತಹವರಲ್ಲೇ ಮುಂದೆ ಹೆಜ್ಜೆಯಿಡಲಾರೆ ಎಂದು ಹಠ ಮಾಡುವ ಮಕ್ಕಳನ್ನು ರಮಿಸುತ್ತ, ಏನೇನೋ ಆಸೆ ತೋರಿಸುತ್ತ, ಓಡುತ್ತ ಬೆಟ್ಟವನ್ನು ಹತ್ತಿ ಮಕ್ಕಳಿಗೆ ಸ್ಫೂರ್ತಿ ತುಂಬಿಸಲಿಕ್ಕೆ ಯತ್ನಿಸುವ ಅಪ್ಪಂದಿರು ಅಮ್ಮಂದಿರು ಕಾಣಿಸುತ್ತಾರೆ.

ವಯಸ್ಸಾದ ಅಜ್ಜ ಅಜ್ಜಿಯರು ಸಹ ಕೋಲು ಹಿಡಿದು, ಹೈಕಿಂಗ್‌ ಶೂ ಧರಿಸಿ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ನಡೆಯುವುದನ್ನು ನೋಡಿದಾಗ ನಮಗೆ ಮತ್ತಷ್ಟು ಹುಮ್ಮಸ್ಸು! ಬೇಸಗೆಗಾಲದಲ್ಲಂತೂ ಜನ ಚಾರಣಕ್ಕೆ ಹೊರಡುವುದು ಇಲ್ಲಿ ಸರ್ವೇಸಾಮಾನ್ಯ. ಕೆಲವೊಂದು ಸಲ ಅದೆಷ್ಟು ಜನರಿರುತ್ತಾರೆಂದರೆ ಒಬ್ಬರೇ ಹಾದು ಹೋಗುವಂತಹ ಕಡಿದಾದ ಜಾಗಗಳಲ್ಲಿ ನಿಂತು ಅವರು ದಾಟಿ ಹೋಗಲಿಕ್ಕೆ ಅನುವು ಮಾಡಿ ಆಮೇಲೆ ತೆರಳಬೇಕಾಗುತ್ತದೆ.

ಯಾವುದಾದರೂ ರಾಷ್ಟ್ರೀಯ ಉದ್ಯಾನವನಕ್ಕೆ ಹೋದಾಗ ಅಲ್ಲಿರುವ ಚಾರಣಗಳಲ್ಲಿ ಒಂದೆರಡನ್ನಾದರೂ ಮಾಡಿ ಬರುವುದು ನಮ್ಮ ರೂಢಿ. ನಾವು ಹೋಗುವ ಬಹಳಷ್ಟು ತಾಣಗಳು ರಾಷ್ಟ್ರೀಯ ಉದ್ಯಾನವನಗಳೇ ಆಗಿರುವುದರಿಂದ ಎಲ್ಲ ಕಡೆಯೂ ಒಂದಾದರೂ ಚಾರಣ ಮಾಡಿ ಮುಗಿಸಿದ ಸಮಾಧಾನ ನಮಗಿದೆ.

ನಾನು ಮಾಡಿದ ಅತೀ ಕಷ್ಟವಾದ ಚಾರಣವೆಂದರೆ ಯೋಸೆಮಿಟಿ ರಾಷ್ಟ್ರೀಯ ಉದ್ಯಾನವನದಲ್ಲಿರುವ ಗ್ಲೇಸಿಯರ್‌ ಪಾಯಿಂಟ್‌ ಅನ್ನು ತಲುಪುವ ಫೋರ್‌ ಮೈಲ್‌ ಹೈಕ್‌. ಈ ಗ್ಲೇಸಿಯರ್‌ ಪಾಯಿಂಟ್‌ನಿಂದ ಯೋಸೆಮಿಟಿಯನ್ನು ನೋಡಿದರೆ ಎದುರಿಗೆ ಮಹಾದಾಕಾರದಲ್ಲಿ ಕಾಣಿಸುವ ಹಾಫ್ ಡೋಮ್, ಕಣ್ಣು ಹಿಂಜಿ ನೋಡಿದಷ್ಟೂ ಬೃಹತ್ತಾಗಿ ವ್ಯಾಪಿಸಿಕೊಂಡಿರುವ ಯೋಸೆಮಿಟಿ ಕಣಿವೆ ಕಾಣಿಸುತ್ತದೆ. ಇಲ್ಲಿಗೆ ಕಾರು ಅಥವಾ ಪಾರ್ಕ್‌ನವರೇ ನಡೆಸುವ ಬಸ್ಸುಗಳಲ್ಲಿ ಹೋಗಿಬರಬಹುದು. ‌

ಆದರೆ ಇವು ಕೊಡುವ ಅನುಭವಕ್ಕೆ ಮೀರಿದ ಅನುಭವವನ್ನು ನಮ್ಮದಾಗಿಸಿಕೊಳ್ಳಬೇಕೆಂದರೆ ಇಲ್ಲಿಗೆ ಚಾರಣದ ಮುಖೇನ ಹೋಗಬೇಕು. ಅದು ಅಷ್ಟು ಸುಲಭವಿಲ್ಲ. ಯಾಕೆಂದರೆ ಹೋಗುವ ಮತ್ತು ಬರುವ ದಾರಿ ಸೇರಿ ಒಟ್ಟು ಒಂಬತ್ತೂವರೆ ಮೈಲುಗಳು ಅಂದರೆ ಸುಮಾರು ಹದಿನಾರು ಕಿಲೋ ಮೀಟರುಗಳು! ಅದೂ ಬೆಟ್ಟವನ್ನು ಸುತ್ತಿ ಸಾಗುವ ಕಡಿದಾದ ಮಾರ್ಗ. ಎತ್ತರ ಹೆಚ್ಚಾಗುತ್ತ ಹೋಗಿ ಸಮುದ್ರ ಮಟ್ಟದಿಂದ 3200 fಠಿ ತಲುಪುತ್ತದೆ. ಬಹಳ ಕಷ್ಟವಾದ ಚಾರಣ ಎಂದು ಕರೆಸಿಕೊಳ್ಳುವ ಈ ದಾರಿಯನ್ನು ಕ್ರಮಿಸಲು ಬಹಳಷ್ಟು ಜನ ಹಿಂದೇಟು ಹಾಕಿ ಸುಲಭ ಮಾರ್ಗವಾಗಿರುವ ಕಾರಿನ ಪ್ರಯಾಣವನ್ನು ಆಯ್ದುಕೊಳ್ಳುತ್ತಾರೆ.

ಆದರೆ ಈ ಚಾರಣದ ದಾರಿ ಬಹಳ ಮನಮೋಹಕವಾಗಿದೆ. ಪ್ರತೀ ಹೆಜ್ಜೆಗೂ ಹೊಸದೊಂದು ದೃಶ್ಯ ಅನಾವರಣಗೊಳ್ಳುತ್ತದೆ. ಕತ್ತು ತಿರುಗಿಸಿ ನೋಡಿದಷ್ಟೂ ನಿಸರ್ಗ ಭಿನ್ನವಾಗಿ ಕಾಣಿಸುತ್ತ ತನ್ನೊಳಗಿರುವ ವಿಸ್ಮಯವನ್ನು ಹೊರಹಾಕುತ್ತದೆ. ಮಾರ್ಗ ಮಧ್ಯದಲ್ಲಿ ಯೋಸೆಮಿಟಿಯ ಅಪ್ಪರ್‌ ಮತ್ತು ಲೋವರ್‌ ಜಲಪಾತಗಳು ಮನಸ್ಸನ್ನು ಮುದಗೊಳಿಸುತ್ತವೆ. ಕೆಳಗೆ ನಿಂತಾಗ ತಲೆಯೆತ್ತಿ ನೋಡಬಹುದಾದ ದೈತ್ಯ ಎತ್ತರದ ಈ ಜಲಪಾತ ಚಾರಣದ ಮಾರ್ಗದಲ್ಲಿ ಸಾಗುತ್ತ ನಾವು ಎತ್ತರಕ್ಕೆ ಹೋದಂತೆಲ್ಲ ನಮ್ಮ ನೇರಕ್ಕೆ ಕೊನೆಗೆ ಜಲಪಾತದ ಉಗಮ ಸ್ಥಳ ಕಣ್ಣಿಗೆ ನೇರವಾಗಿ ಕಾಣಸಿಗುತ್ತದಲ್ಲ ಆ ಅನುಭವವನ್ನು ವರ್ಣಿಸುವುದು ಕಷ್ಟ.

ಅದನ್ನೊಮ್ಮೆ ಅನುಭವಿಸಿಯೇ ತೀರಬೇಕು. ಕಣಿವೆಯನ್ನು ಆವರಿಸಿರುವ ಎತ್ತರೆತ್ತರದ ಪೈನ್‌ ಮರಗಳು, ಬಿಸಿಲಿಗೆ ಥಳ ಥಳ ಹೊಳೆಯುವ ಹಾಫ್ ಡೋಮ್‌ ಎಂಬ ಮಾಯಾವಿ ಪರ್ವತ, ಒಂದು ಬದಿಗೆ ಆಳವಾದ ಕಣಿವೆ, ಎದುರಿಗೆ ಕಾಣಸಿಗುವ ಸಿಯಾರಾ ಪರ್ವತಗಳು ಎಲ್ಲವೂ ಸೇರಿ ಈ ಚಾರಣವನ್ನು ರಮಣೀಯವಾಗಿಸಿವೆ. ಹೋಗುವಾಗ ಬೆಟ್ಟವನ್ನು ಹತ್ತಬೇಕಾಗಿರುವುದರಿಂದ ಆ ತುದಿಯಲ್ಲಿರುವ ಗ್ಲೆàಸಿರ್ಯ ಪಾಯಿಂಟ್‌ ತಲುಪಲಿಕ್ಕೆ ಸುಮಾರು ನಾಲ್ಕು ಗಂಟೆಗಳೇ ಬೇಕು. ಬರುವಾಗ ಇಳಿಜಾರು ಸುಲಭವಾದರೂ ಎರಡು ಗಂಟೆಗಳ ಮೇಲೆ ಸಮಯ ಬೇಕಾಗುತ್ತದೆ.

ಹಾಗಾಗಿ ಇಲ್ಲಿಗೆ ಹೋಗಬೇಕೆಂದರೆ ಬೆಳಗ್ಗೆ ಬೇಗ ಎದ್ದು ಹೊರಡುವುದು ಉತ್ತಮ. ಕೆಲವರು ಸೂರ್ಯಾಸ್ತದ ಸಮಯಕ್ಕೆ ಗ್ಲೆàಸಿಯರ್‌ ಪಾಯಿಂಟ್‌ ತಲುಪಿದರೆ ಅಲ್ಲಿ ಮನಮೋಹಕವಾಗಿ ಕಾಣಿಸುವ ಸೂರ್ಯಾಸ್ತವನ್ನು ಆಸ್ವಾದಿಸಬಹುದು. ಆದರೆ ಅಲ್ಲಿಂದ ತಿರುಗಿ ಬರುವಾಗ ಕತ್ತಲೆಯಾಗಿ ದಾರಿ ಇನ್ನಷ್ಟು ಕಠಿನವಾಗುತ್ತಾದ್ದರಿಂದ ಇದು ನುರಿತ ಚಾರಣಿಗರಿಗೆ ಮಾತ್ರ ಸಾಧ್ಯವಾಗುವಂತಹದ್ದು.

ಹೀಗೆ ಅಮೆರಿಕದ ಅನೇಕ ರಾಷ್ಟ್ರೀಯ ಉದ್ಯಾನವನಗಳಲ್ಲಿ ಈ ತರಹದ ಬಹಳಷ್ಟು ಚಾರಣಗಳು ಪ್ರಕೃತಿಯ ಜತೆಗೆ ನೇರವಾದ ಸಂಪರ್ಕವನ್ನು ಕಲ್ಪಿಸುತ್ತವೆ. ಒಮ್ಮೆ ಕಾಡಿನೊಳಗೆ ಕಳೆದು ಹೋದರೆ ಯಾವ ಜಂಜಡಗಳು ಇಲ್ಲದೇ ನಮ್ಮನ್ನೇ ನಾವು ಮರೆತು ಹೋಗುವಷ್ಟು ಸುಂದರವಾಗಿ ಪ್ರಕೃತಿ ನಮ್ಮನ್ನು ಆಕರ್ಷಿಸುತ್ತದೆ. ಪ್ರಾಣಿ ಪಕ್ಷಿಗಳ ಹಾಗೆ ಯಾವ ಚಿಂತೆಯೂ ಇಲ್ಲದೇ ಬದುಕುವುದನ್ನು ಬಿಟ್ಟು ನಾವು ಮನುಷ್ಯರೇ ಇಲ್ಲದ ತಾಪತ್ರಯಗಳನ್ನು ಮೈ ಮೇಲೆ ಎಳೆದುಕೊಂಡು ಅನುಭವಿಸುತ್ತೆವೇನೋ ಎಂದೆನ್ನಿಸುತ್ತದೆ. ಚಾರಣ ಮುಗಿಸಿ ಬಂದಾಗ ಆಯಾಸದಿಂದ ಮೈ ಭಾರವಾಗಿದ್ದರೂ ಮನಸ್ಸು ಹಗುರವಾಗಿರುತ್ತದೆ.

-ಸಂಜೋತಾ ಪುರೋಹಿತ್‌

ಸ್ಯಾನ್‌ ಫ್ರಾನ್ಸಿಸ್ಕೋ

Advertisement

Udayavani is now on Telegram. Click here to join our channel and stay updated with the latest news.

Next