Advertisement
ಸೋಮವಾರ ಹಾಗೂ ಮಂಗಳವಾರ ಗುಡ್ಡ ಕುಸಿತದಿಂದಾಗಿ ಅನೇಕ ಪ್ರಯಾಣಿಕರು ಕಷ್ಟ ಅನುಭವಿಸಿದರು. ಸ್ಥಳೀಯ ನಿವಾಸಿಗಳು, ಸಂಸ್ಥೆಗಳು, ಪೊಲೀಸರು ಸಹಾಯಕ್ಕಾಗಿ ಧಾವಿಸಿದರು. ದೇವಸ್ಥಾನದ ಆಸುಪಾಸಿನಲ್ಲಿ ಗುಡ್ಡ ಕುಸಿತ ಉಂಟಾಗದ ಕಾರಣ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಕಳೆದ 25 ವರ್ಷಗಳಲ್ಲಿ ಇಂತಹ ಘಟನೆಗೆ ಸಂಭವಿಸಿದ ನೆನಪು ನನಗಿಲ್ಲ ಎಂದರು. ಕೊಟ್ಟಿಗೆ ಹಾರದಲ್ಲಿ ನನ್ನ ಮನೆ. ನಾನು ವಾಹನದಲ್ಲಿ ದಿನನಿತ್ಯ ಹೋಗಿ ಬರುತ್ತೇನೆ. ಆ ಭಾಗದಲ್ಲಿ ಅಷ್ಟಾಗಿ ಗುಡ್ಡ ಕುಸಿತ ಇಲ್ಲದಿರುವುದರಿಂದ ನನ್ನ ಪ್ರಯಾಣಕ್ಕೆ ತೊಂದರೆಯಾಗಿಲ್ಲ. ಆದರೆ ನಾನು ದೇವಸ್ಥಾನಕ್ಕೆ ಪೂಜೆಗೆ ಬಂದರೆ ಮನೆಯವರಿಗೆ ಗಾಬರಿಯಾಗುತ್ತಿತ್ತು. ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ನಾನು ಪೂಜೆ ಮಾಡುವಾಗ ಈ ರಸ್ತೆಯಲ್ಲಿ ಹೋಗುವ ಯಾರಿಗೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಚಾರ್ಮಾಡಿಯ ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದೊಂದಿಗೆ ನಂಟು ಹೊಂದಿರುವ ಐತಿಹ್ಯವಿದೆ. ಧರ್ಮಸ್ಥಳದ ಅಣ್ಣಪ್ಪ ದೇವರು ತಿರುಗಾಟ ಮಾಡುತ್ತಿದ್ದಾಗ ಚಾರ್ಮಾಡಿಯಲ್ಲಿ ವಿಶ್ರಾಂತಿ ಪಡೆದಿದ್ದರು ಎಂಬ ನಂಬಿಕೆಯಿದ್ದು, ಈ ಹಿನ್ನಲೆಯಲ್ಲಿ ಆ ಜಾಗದಲ್ಲಿ ದೇವರ ಪಾದುಕೆಗೆ ದಿನನಿತ್ಯ ಪೂಜೆ ಮಾಡಲಾಗುತ್ತದೆ. ಭಟ್ ಅವರು ಇಲ್ಲಿ ಮುಂಜಾನೆ ದೇವರಿಗೆ ಪೂಜೆ ಮಾಡಿ ತೆರಳುತ್ತಾರೆ. ಬಳಿಕ ದಿನದ 24 ಗಂಟೆಯೂ ಈ ದೇಗುಲ ತೆರೆದಿರುತ್ತದೆ. ಘಾಟಿಯಲ್ಲಿ ಸಂಚರಿಸುವ ಪ್ರಯಾಣಿಕರು ಇಲ್ಲಿ ವಾಹನ ನಿಲ್ಲಿಸಿ ಕೈ ಮುಗಿದು ಹೋಗುತ್ತಾರೆ. ಸದ್ಯ ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತದಿಂದ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಮುಂಗಾರು ಪೂರ್ವ ಮಳೆ, ಘನ ವಾಹನ ಕಾರಣ
ನನ್ನ ಪ್ರಕಾರ ಮೊನ್ನೆ ನಡೆದ ಅವಘಡಗಳಿಗೆ ಮುಂಗಾರು ಪೂರ್ವ ಮಳೆ ಹಾಗೂ ಘಾಟಿಯಲ್ಲಿ ಘನವಾಹನಗಳ ಅತಿಯಾದ ಓಡಾಟ ಕಾರಣ ಎಂದು ಅನ್ನಿಸುತ್ತಿದೆ. ಹಿಂದೆ ಮಳೆ ಜಾಸ್ತಿ ಇತ್ತು, ಆದರೆ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ವಾಹನಗಳ ಸಂಖ್ಯೆ ಮಿತಿಮೀರಿದೆ. ಹಲವು ಘನ ವಾಹನಗಳು ದಿನನಿತ್ಯ ಸಂಚರಿಸುತ್ತವೆ.ಈ ಬಾರಿ ಮೇಯಲ್ಲೇ ಭಾರಿ ಮಳೆಯಾಗಿದೆ. ಇದರಿಂದ ಮಣ್ಣು ಮೆದುವಾಗಿತ್ತು. ಹಾಗಾಗಿ ಮಳೆಗೆ ಗುಡ್ಡಕುಸಿತ ಉಂಟಾಗಿದೆ. ಕಿರಿದಾಗಿದ್ದ ರಸ್ತೆಯನ್ನು ಅಗಲ ಮಾಡಲಾಯಿತು. ಇವೆಲ್ಲ ಕಾರಣದಿಂದ ಗುಡ್ಡಕುಸಿತ ಉಂಟಾಗಿರಬಹುದು ಎನ್ನುವುದು ಅವರ ಅಭಿಪ್ರಾಯ.
Related Articles
ಒಂದುವೇಳೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದಿರುವುದನ್ನು ಸರಿಪಡಿಸಿದರೂ ಈ ಬಾರಿಯ ಮಳೆಗಾಲ ಮುಗಿಯುವವರೆಗೆ ಸಂಚಾರ ಅಷ್ಟೊಂದು ಸುರಕ್ಷಿತವಲ್ಲ. ಮಳೆ ಈ ಬಾರಿ ಜಾಸ್ತಿ ಇರುವ ಕಾರಣ ಮುಂದಿನ ದಿನಗಳಲ್ಲಿ ಕೂಡ ಮಣ್ಣು ಮೃದುವಾಗಿ ಮತ್ತಷ್ಟು ಭೂಕುಸಿತವಾಗುವ ಅಪಾಯವಿದೆ. ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸುವುದು ಉತ್ತಮ. ಮಳೆಗಾಲ ಮುಗಿಯುವವರೆಗೆ ಚಾರ್ಮಾಡಿ ಘಾಟಿಯಲ್ಲಿ ಘನ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವುದು ಉತ್ತಮ ಎನ್ನುವುದು ಸುಬ್ರಹ್ಮಣ್ಯ ಅವರ ಸಲಹೆ.
Advertisement
— ಪ್ರಜ್ಞಾ ಶೆಟ್ಟಿ