Advertisement

ಸಮಗ್ರ ಕೃಷಿಯಲ್ಲಿನ ಅನುಭಾವ ನಮ್ಮ ಅಸ್ತಿತ್ವಕ್ಕೆ ಮೂಲಾಧಾರ

06:09 PM Feb 18, 2021 | Nagendra Trasi |

ಮುದ್ದೇಬಿಹಾಳ: ಬದುಕು ಸುಂದರಗೊಳಿಸುವ ಸಮಗ್ರ ಕೃಷಿಯಲ್ಲಿನ ಅನುಭಾವ ನಮ್ಮ ಅಸ್ತಿತ್ವಕ್ಕೆ ಮೂಲಾಧಾರ ಎನ್ನುವ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕು ಎಂದು ಶ್ರೇಷ್ಠ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ರಶ್ಮಿ ಕೊಪ್ಪ ಹೇಳಿದರು.

Advertisement

ಬಸರಕೋಡ ಗ್ರಾಮದಲ್ಲಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಮನೋಹರ ಮುಕ್ಕಣ್ಣಪ್ಪ ಕೋರಿ ರೈತ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಮುದ್ದೇಬಿಹಾಳದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಜ್ಞಾನವಿಕಾಸ ಅಧ್ಯಯನ ಪ್ರವಾಸ ನಿಮಿತ್ತ ಏರ್ಪಡಿಸಿದ್ದ ಸಮಗ್ರ ಕೃಷಿ-ಸುಸ್ಥಿರ ಕುಟುಂಬ ವಿಷಯಾಧಾರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಮ ರಹಿತ ಒಕ್ಕಲುತನದ ಬಗೆಗಿನ ಒಲವು ಮತ್ತು ಆಸಕ್ತಿಗಳು ಹೆಚ್ಚಿದಂತೆ ಕೌಟುಂಬಿಕ ತಾಪತ್ರಯಗಳೂ ಹೆಚ್ಚಾಗಿ ರೈತ ಸಾಮಾಜಿಕ ಸಮಸ್ಯೆಯಾಗಿ ರೂಪಗೊಳ್ಳುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾವಲಂಬಿಯಾಗಿದ್ದ ರೈತ ಎಂದೆಂದಿಗೂ ಹಾಗೆಯೇ ಇರಬೇಕು ಎನ್ನುವ ಆಶಯ ಈಡೇರಲು ಸಮಗ್ರ ಕೃಷಿಯೊಂದೇ ಪರಿಹಾರವಾಗಿದೆ. ಆ ಬಗ್ಗೆ ಸರ್ಕಾರ ಕಟ್ಟಕಡೆಯ ರೈತನಿಗೂ ಸೌಲಭ್ಯಗಳು ದೊರೆತು ಕೃಷಿಯಲ್ಲಿ ಸುಸ್ಥಿರತೆ ಕಾಣಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ಕೃಷಿ ವಿಜ್ಞಾನ ಪರಿಷತ್‌ ಅಧ್ಯಕ್ಷ ಗುರುಪಾದಪ್ಪ ಯಡವಣ್ಣವರ ಮಾತನಾಡಿ, ಸರಳ ಜೀವನ ಉನ್ನತ ವಿಚಾರ ಎಂಬಂತಿದ್ದ ರೈತನ ಬದುಕು ಆಧುನಿಕ ಹೊಡೆತಕ್ಕೆ ಸಿಲುಕಿ ನಲಗುವಂತಾಗಿದೆ. ಸಮಾಜದ ಸಹಜ ಆಕರ್ಷಣೆಗೆ ಮಾರು ಹೋಗುತ್ತಿರುವ ರೈತ ದನ, ಕೋಳಿ, ಕುರಿ ಸಾಕಾಣಿಕೆಯಿಂದ ವಿಮುಖನಾಗುತ್ತಿದ್ದಾನೆ. ಇದರಿಂದಾಗಿ ಆತ ಅಸಹಜ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ. ಸಮಸ್ಯೆಗಳ ಒಳಸುಳಿಯಲ್ಲಿ ಬೇಯುತ್ತಿರುವ ರೈತ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮ ಸಂಘಟಕಿ ಜ್ಞಾನವಿಕಾಸ ಯೋಜನೆಯ ಸಂಚಾಲಕಿ ಸುಧಾ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಕೃಷಿಯ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೃಷಿ ಅಧ್ಯಯನ ಪ್ರವಾಸ ಸಹಕಾರಿಯಾಗಿದೆ. ವಿಶೇಷವಾಗಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದಲ್ಲಿನ ಅನುಭವ ರೈತ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಿ ಸುಸ್ಥಿರ ಬದುಕಿಗೆ ಅನುಕೂಲ ಮಾಡಿಕೊಡುವಂತಿದೆ. ಇಲ್ಲಿ ಸಿಕ್ಕ ಸಮಗ್ರ ಕೃಷಿಯ ಅನುಭವ ಸಾರವನ್ನು ತಮ್ಮ ಕ್ಷೇತ್ರದಲ್ಲಿ
ಅಳವಡಿಸಿದಾಗ ಮಾತ್ರ ಅಧ್ಯಯನ ಪ್ರವಾಸದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

Advertisement

ವಿಶೇಷ ಉಪನ್ಯಾಸ ನೀಡಿದ ತಾಳಿಕೋಟೆಯ ಯುವ ರೈತ ವೀರೇಶ ಕೋರಿ, ಪ್ರತಿ ಉದ್ಯೋಗಗಳಂತೆ ಕೃಷಿಯಲ್ಲಿಯೂ ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ
ಕಾಯಕ ನಿಷ್ಠತೆ ಬೆಳೆಸಿಕೊಂಡಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ. ದೃಷ್ಟಿ ಮತ್ತು ಸೃಷ್ಟಿಯಲ್ಲಿ ಸಾಮ್ಯತೆ ಸಾಧಿಸುವ ಪ್ರತಿ ರೈತ ಅದ್ಭುತ ಸಾಧಕನಾಗುತ್ತಾನೆ. ರೈತರಾದವರು ಕಲಿಕಾಸಕ್ತಿ ಮತ್ತು ಪ್ರಯೋಗಶೀಲತೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ, ದಾಸೋಹಿ ಸಮಗ್ರ ಕೃಷಿಕರ ಆತ್ಮ ಗುಂಪಿನ ಅಧ್ಯಕ್ಷ ಚನ್ನಬಸಪ್ಪ ಯಾಳವಾರ, ಉಪಾಧ್ಯಕ್ಷ ರಾಚಪ್ಪ ಕೋಣವರ ವೇದಿಕೆಯಲ್ಲಿದ್ದರು. ವಿಜಯಲಕ್ಷ್ಮೀ ಸೂಳಿಭಾವಿ ಸ್ವಾಗತಿಸಿದರು. ಮುತ್ತಪ್ಪ ಮೆಣಸಿನಕಾಯಿ ನಿರೂಪಿಸಿದರು. ಅಂಬರೀಶ ಮೆಣಸಿನಕಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next