Advertisement

ದುಬಾರಿ ಶುಲ್ಕದ ಬರೆ ಎಳೆದ ವಿವಿ ವಿಶೇಷಾಧಿಕಾರಿ

05:22 PM Sep 24, 2019 | Suhan S |

ಮಂಡ್ಯ: ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ನೇಮಕಾತಿ ವಿವಾದ ಇನ್ನೂ ಜೀವಂತವಾಗಿರುವ ಬೆನ್ನಲ್ಲೇ ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮಹದೇವ ನಾಯ್ಕ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ಮೈಸೂರು ವಿವಿ ಹಾಗೂ ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ) ಗಳಿಗಿಂತಲೂ ದುಪ್ಪಟ್ಟು ಶುಲ್ಕ ವಿಧಿಸಿ ಬಡ ವಿದ್ಯಾರ್ಥಿಗಳಿಗೆ ಶುಲ್ಕ ಬರೆ ಹಾಕಿದ್ದಾರೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿವೆ. 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 5870 ರೂ. ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 6910 ರೂ. ಇತ್ತು. 2019-20ನೇ ಸಾಲಿನಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 7085 ರೂ. ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 15885 ರೂ. ಶುಲ್ಕ ನೀತಿ ಜಾರಿಗೊಳಿಸಿದ್ದಾರೆ.

ಶುಲ್ಕ ಏರಿಕೆ ಸಂಬಂಧ ರಾಜ್ಯ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ವಿಶೇಷಾಧಿಕಾರಿ ತಮ್ಮ ವಿವೇಚನಾನುಸಾರ ದುಪ್ಪಟ್ಟುಗೊಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲೇ ಇಲ್ಲದ ಶುಲ್ಕ ವ್ಯವಸ್ಥೆ ಮಂಡ್ಯ ವಿವಿಯಲ್ಲಿರುವುದನ್ನು ಕಂಡು ವಿದ್ಯಾರ್ಥಿಗಳು ಹೌಹಾರಿದ್ದಾರೆ.

ದುಬಾರಿ ಶುಲ್ಕವೇಕೆ?: ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿ (ಸ್ವಾಯತ್ತ) ನಲ್ಲಿ 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 5870 ರೂ., ಸಾಮಾನ್ಯ ವರ್ಗದವರಿಗೆ 6910 ರೂ. ಇತ್ತು. 2019-20ನೇ ಸಾಲಿನಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 6465 ರೂ., ಸಾಮಾನ್ಯ ವರ್ಗಕ್ಕೆ 7465 ರೂ. ನಿಗದಿಪಡಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯದಲ್ಲೂ ಇದೇ ಮಾದರಿ ಶುಲ್ಕ ವ್ಯವಸ್ಥೆ ಇದೆ. ಆದರೆ, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮಾತ್ರ ದುಬಾರಿ ಶುಲ್ಕ ಜಾರಿಗೊಳಿಸಿರುವುದೇಕೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ. ಮಂಡ್ಯ ವಿವಿ ವಿಶೇಷಾಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಅತಿಥಿ ಉಪನ್ಯಾಸಕರು, ಬೋಧಕ- ಬೋಧಕೇತರ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡಿ ದ್ದಾರೆ ಎಂಬ ಆರೋಪ ಕೇಳಿಬರುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ವಿಧಿಸುವ ಶುಲ್ಕದಲ್ಲೂ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.

ಅನುಮತಿ ಇಲ್ಲ: ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ವಿಶೇಷಾಧಿಕಾರಿ ಪ್ರೊ.ಮಹದೇವ ನಾಯ್ಕ ಪ್ರಥಮ ಕುಲಪತಿ ನೇಮಕವಾಗುವವರೆಗೆ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಹಾಗೂ ಮಂಡ್ಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಕ್ಕಷ್ಟೇ ಅಧಿಕಾರವಿದೆ. ಇದನ್ನು ಮೀರಿ ಏನಾದರೂ ಕ್ರಮ ಕೈಗೊಳ್ಳಬೇಕಾದರೆ ಸರ್ಕಾರದ ಅನುಮತಿ ಅಗತ್ಯ. ಇದನ್ನು ಮೀರಿ ಶುಲ್ಕ ವಿಧಿಸಿರುವುದು ಮಾತ್ರವಲ್ಲದೆ ಅತಿಥಿ ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆಯೂ ದೂರು ಕೇಳಿಬಂದಿವೆ.

Advertisement

ಅತಿಥಿ ಉಪನ್ಯಾಸಕರ ನೇಮಕಾತಿ ಸಮಯದಲ್ಲೇ ಶಾಸಕ ಎಂ.ಶ್ರೀನಿವಾಸ್‌ ಅವರು ವಿಶೇಷಾಧಿಕಾರಿಗೆ ಇರುವ ಅಧಿಕಾರ ವ್ಯಾಪ್ತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಇದೀಗ ದುಬಾರಿ ಶುಲ್ಕ ವಿಧಿಸಿರುವ ಸಂಬಂಧ ನೊಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಡಾ.ಎನ್‌.ಅಶ್ವತ್ಥನಾರಾಯಣ ಅವರಿಗೂ ದೂರು ನೀಡಿದ್ದಾರೆ. ಅಲ್ಲದೆ, ಪ್ರಥಮ ವರ್ಷದ ಪ್ರವೇಶಾತಿಗೆ ಮೊದಲ ಪಟ್ಟಿ ಪ್ರಕಟಿಸಿದ್ದು, ದ್ವಿತೀಯ ಪಟ್ಟಿ ಪ್ರಕಟಿಸದೆ ತಮಗೆ ಬೇಕಾದವರನ್ನು ಪ್ರವೇಶ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ವಿಶೇಷಾಧಿಕಾರಿಯನ್ನು ಪ್ರಶ್ನಿಸಿದರೆ ಸಬೂಬು ಹೇಳುತ್ತಿದ್ದಾರೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಅಸಮಾಧಾನ: ಇನ್ನು ಮೊದಲನೇ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಸಿದ್ಧತೆ ನಡೆಯಬೇಕಿರುವುದರಿಂದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಯೋಗಾ ನರಸಿಂಹಚಾರಿ ಅವರನ್ನು ಪ್ರಭಾರ ಕುಲಸಚಿವರು (ಮೌಲ್ಯಮಾಪನ), ಕನ್ನಡ ಸಹ ಪ್ರಾಧ್ಯಾಪಕ ಡಾ.ಜಿ.ಶಿವಣ್ಣರನ್ನು ಪ್ರಭಾರ ಕುಲಸಚಿವರು (ಆಡಳಿತ) ಎಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ಹುದ್ದೆಗಳಿಗೆ ಪ್ರೊಫೆಸರ್‌ಗಳನ್ನು ನೇಮಿಸಬೇಕು ಎನ್ನುವುದು ನಿಯಮ. ಆದರೆ, ನೇಮಕ ಮಾಡಿಕೊಂಡಿರುವವರಲ್ಲಿ ಯಾರೊ ಬ್ಬರೂ ಪ್ರೊಫೆಸರ್‌ಗಳಲ್ಲ ಎಂದು ಹೇಳಲಾಗಿದ್ದು, ವಿಶೇಷಾಧಿಕಾರಿ ಪ್ರೊ.ಮಹದೇವ ನಾಯ್ಕ ಕ್ರಮಗಳ ಬಗ್ಗೆ ಕಾಲೇಜು ವಲಯದಲ್ಲೇ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.

 

-ಮಂಡ್ಯ ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next