Advertisement

ವಾರದ ಸಂತೆಯಲ್ಲಿಯೂ ತುಟ್ಟಿಯಾದ ತರಕಾರಿ

10:48 PM Nov 20, 2021 | Team Udayavani |

ಕುಂದಾಪುರ  /   ಉಡುಪಿ/ಮಂಗಳೂರು: ರಾಜ್ಯದೆಲ್ಲೆಡೆ ನಿರಂತರ ಧಾರಾಕಾರ ಮಳೆಯಿಂದಾಗಿ ಹೊಲದಲ್ಲೇ ತರಕಾರಿ ಕೊಳೆಯುತ್ತಿದೆ. ಬೇಡಿಕೆಯಷ್ಟು ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗದಿರುವ ಕಾರಣ ಬೆಲೆ ಗಗನಕ್ಕೇರುತ್ತಿದೆ.

Advertisement

ಟೊಮೇಟೊ, ತೊಂಡೆಕಾಯಿ, ಶುಂಠಿ, ಬೀನ್ಸ್‌, ಬದನೆ, ಬೆಂಡೆಕಾಯಿ, ಸೌತೆಕಾಯಿ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಳೆಯಿಂದಾಗಿ ಬಹುತೇಕ ತರಕಾರಿ ಬೆಳೆಗೆ ಹಾನಿಯಾಗಿದ್ದು, ಬಹು ಬೇಡಿಕೆಯ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ.

ಶತಕದ ಬಾರಿಸಿದ ಟೊಮೇಟೊ:

4-5 ದಿನಗಳ ಹಿಂದೆ 60-70ರ ಆಸುಪಾಸಿನಲ್ಲಿದ್ದ ಒಂದು ಕೆಜಿ ಟೊಮೇಟೊ ದರ ಈಗ ಶತಕದ ಗಡಿ ದಾಟಿದೆ. ಶನಿವಾರ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯೆಲ್ಲೆಡೆ ಕಿಲೋಗೆ 100 ರೂ.ಗಳಂತೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಟೊಮೇಟೊ ಅಭಾವ ಕಂಡು ಬಂತು. ಕುಂದಾಪುರ ಸಂತೆಯಲ್ಲಿ ಸ್ವಲ್ಪ ಮಟ್ಟಿಗೆ ಹಾನಿಗೀಡಾಗಿರುವ ಟೊಮೆಟೋ ಹಣ್ಣುಗಳನ್ನು ಕೆಲವರು ಕೆಜಿಗೆ 50 ರೂ.ಗಳಂತೆ ಮಾರುತ್ತಿದ್ದರು. 40 ಇದ್ದ ತೊಂಡೆಗೆ 120 ರೂ.!

ತಿಂಗಳ ಹಿಂದೆ ಕೇವಲ 40 ರೂ. ಇದ್ದ ತೊಂಡೆಕಾಯಿಗೆ ಈಗ 100ರಿಂದ 120 ರೂ. ವರೆಗೆ ಬೇಡಿಕೆ ಬಂದಿದೆ. ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ; ಬೆಲೆ ಮಾತ್ರ ಏರುಗತಿಯಲ್ಲಿ ಸಾಗಿದೆ. ಇನ್ನು ಬೀನ್ಸ್‌, ಅಲಸಂಡೆ, ಕ್ಯಾರೆಟ್‌ ಬೆಲೆ 80 ರೂ. ಆಸುಪಾಸಿನಲ್ಲಿವೆ. ತೊಂಡೆಕಾಯಿ 120 ರೂ., ನುಗ್ಗೆ 120 ರೂ., ಅಲಸಂಡೆ 100 ರೂ., ಕೊತ್ತಂಬರಿ ಸೊಪ್ಪು 120 ರೂ. ಇದೆ ಎಂದು ಉಡುಪಿಯ ತರಕಾರಿ ವ್ಯಾಪಾರಿ ಶಫೀಕ್‌ ತಿಳಿಸಿದ್ದಾರೆ.

Advertisement

ಚಿಕ್ಕಮಗಳೂರು, ಕಡೂರು, ಬೆಳಗಾವಿ, ಹಾಸನ ಮತ್ತು ಬೆಂಗಳೂರಿನಿಂದ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಜತೆಗೆ ಡೀಸೆಲ್‌ ದರವೂ ದುಬಾರಿಯಾಗಿರುವುದು ದಿನೇ ದಿನೆ ತರಕಾರಿ ಬೆಲೆ ಏರಲು ಕಾರಣ ಎಂದು ಹೆಮ್ಮಾಡಿಯ ತರಕಾರಿ ವ್ಯಾಪಾರಿ ವಿದ್ಯಾಕರ ಪೂಜಾರಿ ತಿಳಿಸಿದ್ದಾರೆ.

ಶುಭ ಸಮಾರಂಭಕ್ಕೂ ಹೊರೆ :

ದಸರಾ, ದೀಪಾವಳಿ ಮುಗಿದಿದ್ದು ಬಹುತೇಕ ಕಡೆಗಳಲ್ಲಿ ಮದುವೆ, ಗೃಹ ಪ್ರವೇಶ, ಪೂಜೆ ಸಹಿತ ಹತ್ತಾರು ಶುಭ ಸಮಾರಂಭಗಳು ನಡೆಯುತ್ತಿವೆ. ಅದಕ್ಕೆಂದು ಕೆಲವರು ಸಂತೆಗೆಂದು ತರಕಾರಿ ಖರೀದಿಗೆ ಬಂದಿದ್ದರೆ, ಅಲ್ಲಿ ಅಗತ್ಯದಷ್ಟು ಸಿಗದೆ ನಿರಾಶೆ ಅನುಭವಿಸಿದ್ದು ಕಂಡುಬಂತು.

ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ 50-60 ರ ಆಸುಪಾಸಿನಲ್ಲಿದ್ದ ತರಕಾರಿಗಳ ಬೆಲೆ ಈಗ 70-80ರ ಗಡಿ ದಾಟಿದೆ. ಮಳೆಯಿಂದಾಗಿ ಅಂಗಡಿಗಳಿಗೆ ತರಕಾರಿ ಸರಬರಾಜು ಶೇ. 10ರಿಂದ 15ರಷ್ಟು ಕಡಿಮೆಯಾಗಿದೆ. – ರವಿಚಂದ್ರ ಶೆಟ್ಟಿ ಮಂಗಳೂರು ಹಾಪ್‌ಕಾಮ್ಸ್‌ ವ್ಯವಸ್ಥಾಪಕ 

Advertisement

Udayavani is now on Telegram. Click here to join our channel and stay updated with the latest news.

Next