Advertisement

ದುಬಾರಿ ಕಾವೇರಿ!

11:38 AM Jun 23, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ಪೈಕಿ ಈಗಾಗಲೇ 17 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಜಲಮಂಡಳಿ ಸಿದ್ಧವಿದ್ದರೂ, ಜನ ಮಾತ್ರ ನೀವೂ ಬೇಡ, ನಿಮ್ಮ ನೀರಿನ ಸಂಪರ್ಕವೂ ಬೇಡ ಎಂದು ಮಾರು ದೂರ ಹಾರುತ್ತಿದ್ದಾರೆ.

Advertisement

ಇಷ್ಟು ದಿನ ಕಾವೇರಿ ನೀರಿನ ಸಂಪರ್ಕ ಕೊಡಿ ಎಂದು ಕಾಡಿ ಬೇಡಿದ ಜನ, ಈಗ ಕಾವೇರಿ ಬೇಡ ಎಂದು ನಿರಾಸಕ್ತಿ ತೋರಲು ಕಾರಣ, ಸಂಪರ್ಕ ಪಡೆಯಲು ಜಲಮಂಡಳಿಗೆ ಪಾವತಿಸಬೇಕಿರುವ ದುಬಾರಿ ಶುಲ್ಕ. 20ಗಿ30 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿದ ಮನೆಗೆ ಹೊಸ ಸಂಪರ್ಕ ಪಡೆಯಲು 12 ಸಾವಿರ ರೂ. ಪಾವತಿಸಬೇಕು. ಇದು ಜಲಮಂಡಳಿ ನಿಗದಿಪಡಿಸಿರುವ ಕನಿಷ್ಠ ಶುಲ್ಕ. ಮುಂದೆ ನಿವೇಶನದ ವಿಸ್ತೀರ್ಣ ದೊಡ್ಡದಾದಂತೆ ಶುಲ್ಕ ಕೂಡ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಗ್ರಾಮಸ್ಥರು ಈ ದುಬಾರಿ ನೀರಿನ ಗೊಡವೆಯೇ ಬೇಡ ಎನ್ನುತ್ತಿದ್ದಾರೆ.

ರಾಜಧಾನಿ ಹೊರವಲಯದ 110 ಹಳ್ಳಿಗಳನ್ನು 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ತಂದಿದ್ದ ರಾಜ್ಯ ಸರ್ಕಾರ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಆಸಕ್ತಿ ತೋರಿರಲಿಲ್ಲ. 2016ರಲ್ಲಿ 1886 ಕೋಟಿ ರೂ. ವೆಚ್ಚದಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಂಡ ಸರ್ಕಾರ, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನೂ ನೀಡಿತ್ತು.

ಮಹದೇವಪುರ, ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ಹಾಗೂ ದಾಸರಹಳ್ಳಿ ವಲಯಗಳ ವ್ಯಾಪ್ತಿಯ 110 ಹಳ್ಳಿಗಳನ್ನು ವಿಂಗಡಿಸಿ ಕಾಮಗಾರಿ ಆರಂಭಿಸಿದೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸದ್ಯ ಕಾಮಗಾರಿ ಪೂರ್ಣಗೊಂಡಿರುವ 17 ಹಳ್ಳಿಗಳಲ್ಲಿ ಮಾರ್ಚ್‌ನಿಂದಲೇ ನೀರು ಪೂರೈಕೆಗೆ ಜಲಮಂಡಳಿ ಮುಂದಾಗಿದೆ.

ಅದರಂತೆ 1,536 ಚದರ ಕಿಲೋ ಮೀಟರ್‌ ಉದ್ದದ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿದೆ. ಗುರುತ್ವಾಕರ್ಷಣೆ ಮೂಲಕ ನೀರು ಪೂರೈಸುವುದು ಮಂಡಳಿ ಉದ್ದೇಶ ಹೊಂದಿರುವ ಮಂಡಳಿ, ಕಾವೇರಿ ನೀರಿನ ಸಂಪರ್ಕ ಪಡೆಯ ಬಯಸುವ 17 ಹಳ್ಳಿಗಳ ಜನರಿಂದ ಅರ್ಜಿ ಆಹ್ವಾನಿಸಿತ್ತು. ಒಂದು ವಲಯದಿಂದ 500 ಮನೆಯವರು ಸಂಪರ್ಕ ಪಡೆಯುತ್ತಾರೆ ಎಂಬ ನಿರೀಕ್ಷೆ ಜಲಮಂಡಳಿಯದ್ದಾಗಿತ್ತು. ಆದರೆ ಆದರೆ, ಜೂನ್‌ನಿಂದ ಈವರೆಗೆ ವಲಯ ಒಂದರಲ್ಲಿ ಸಂಪರ್ಕ ಪಡೆದಿರುವುದು 40ರಿಂದ 50 ಮನೆಯವರಷ್ಟೇ!

Advertisement

ಸಂಪರ್ಕ ಪಡೆಯದಿರಲು ಕಾರಣವೇನು?: ಹೊಸ ಸಂಪರ್ಕಕ್ಕೆ ಅರ್ಜಿ, ಪರೀಶಿಲನೆ, ನೊಂದಣಿ ಹೀಗೆ ನಾನಾ ಬಗೆಯ ಶುಲ್ಕಗಳಿವೆ. ಅದರಂತೆ, 20ಗಿ30 ಚ.ಅಡಿ ನಿವೇಶನದ ಮನೆಗೆ ಸಂಪರ್ಕ ಪಡೆಯಲು 12 ಸಾವಿರ ರೂ. ಪಾವತಿಸಬೇಕು. ನಿವೇಶನದ ಅಳತೆ, ನಿರ್ಮಾಣ ಪ್ರದೇಶ ಹೆಚ್ಚಾದಂತೆ ಶುಲ್ಕವೂ ಏರುತ್ತದೆ. ಅಲ್ಲದೇ ಪ್ರತಿ ತಿಂಗಳು ತಾವು ಬಳಸುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಬಿಲ್‌ ಪಾವತಿಸಬೇಕು. ಹೀಗಾಗಿ ಕಾವೇರಿ ಸಂಪರ್ಕ ಬೇಡವೆನ್ನುತ್ತಿರುವ ಗ್ರಾಮಸ್ಥರು, ಸಾರ್ವಜನಿಕ ಕೊಳವೆಬಾವಿ ಹಾಗೂ ನಗರಸಭೆ, ಪುರಸಭೆಯಿಂದ ಕಲ್ಪಿಸಿರುವ ನೀರಿನ ಸೌಲಭ್ಯವನ್ನೇ ಬಳಸುತ್ತಿದ್ದಾರೆ.

ಅರ್ಜಿ ಹಾಕಿಯೂ, ಸಂಪರ್ಕ ಪಡೆದಿಲ್ಲ: 17 ಹಳ್ಳಿಗಳಲ್ಲಿ ನೀರಿನ ಸಂಪರ್ಕಕ್ಕಾಗಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅದರಂತೆ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅರ್ಜಿದಾರರ ಮನೆಯ ಅಳತೆ, ಕಟ್ಟಡ ನಿರ್ಮಾಣ ಪ್ರದೇಶ ಆಧರಿಸಿ ಇಂತಿಷ್ಟು ಶುಲ್ಕ ಪಾವತಿಸಿ ಸಂಪರ್ಕ ಪಡೆಯುವಂತೆ ರಸೀದಿ ನೀಡಿದ್ದರು. ಈ ರಸೀದಿ ನೋಡಿ ಗಾಬರಿಗೊಂಡ ಗ್ರಾಮಸ್ಥರು ಸಂಪರ್ಕವೇ ಬೇಡ ಎಂದಿದ್ದಾರೆ. ಹೀಗಾಗಿ 17 ಹಳ್ಳಿಗಳಲ್ಲಿ ಈವರೆಗೆ ಸಂಪರ್ಕ ಪಡೆದ ಕಟ್ಟಡಗಳ ಸಂಖ್ಯೆ ಕೇವಲ ಕೇವಲ 400 ಎಂದು ಮಂಡಳಿ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಎಂಜಿನಿಯರ್‌ಗಳಿಗೆ ಟಾರ್ಗೆಟ್‌: ನೀರಿನ ಸಂಪರ್ಕ ಪಡೆಯಲು ಹಳ್ಳಿಗಳ ಜನ ನಿರಾಸಕ್ತಿ ತೋರಿದ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಸ್ಥಳೀಯ ಎಂಜಿನಿಯರ್‌ಗಳಿಗೆ ತಿಂಗಳಿಗೆ ಇಂತಿಷ್ಟು ಸಂಪರ್ಕ ಕಲ್ಪಿಸಲು ಟಾರ್ಗೆಟ್‌ ನೀಡಿದ್ದಾರೆ. ಅದರಂತೆ ಜನರಿಗೆ ಕಾವೇರಿ ನೀರಿನ ಸಂಪರ್ಕದಿಂದ ಆಗುವ ಲಾಭಗಳ ಕುರಿತು ತಿಳಿಸುವಂತೆಯೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುತ್ವಾಕರ್ಷಣೆ ಮೂಲಕವೇ 17 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಅದರೆ ಸ್ಥಳೀಯರು ನೀರಿನ ಸಂಪರ್ಕ ಪಡೆಯಲು ಆಸಕ್ತಿ ತೋರುತ್ತಿಲ್ಲ. ಈ ಕುರಿತು ಜಾಗೃತಿ ಮೂಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗಿದೆ. ಅರಿವು ಮೂಡಿಸುವಂತೆ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ. 
-ಶಿವಪ್ರಸಾದ್‌, ಮುಖ್ಯ ಎಂಜಿನಿಯರ್‌ (ಯೋಜನೆ)

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next