Advertisement

ಚುರುಕುಗೊಂಡ ಮಳೆ: ವಿವಿಧೆಡೆ ಕೃಷಿ, ಮನೆಗೆ ಹಾನಿ

12:04 AM Jun 13, 2020 | Sriram |

ಬೆಳ್ತಂಗಡಿ: ಮುಂಗಾರು ಆಗಮನಕ್ಕೂ ಮುನ್ನವೇ ಗಾಳಿ ಮಳೆಯಾಗುತ್ತಿರುವ ಪರಿಣಾಮ ತಾಲೂಕಿನ ಕೆಲವೆಡೆ ಗುರುವಾರ ಸಂಜೆ ಮನೆ, ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿವೆ.

Advertisement

ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಮುಂಡಾಜೆ: ಕೆಸರುಮಯ ರಸ್ತೆ
ಬೆಳ್ತಂಗಡಿ ತಾ| ನ ಮಿತ್ತಬಾಗಿಲು ಹಾಗೂ ಮಲವಂತಿಗೆ ಗ್ರಾ.ಪಂ.ವ್ಯಾಪ್ತಿಯ ಕೊಲ್ಲಿ-ಬೊಳ್ಳಾಜೆ -ಗಂಪದ ಕೊಡಿ- ಪರಾರಿಗುಡ್ಡೆ-ಪಣಿಕ್ಕಲ್ಲು ಕೂಡು ರಸ್ತೆಯು ಮಳೆಗೆ ಅಲ್ಲಲ್ಲಿ ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರಕ್ಕೆ ದುಸ್ತರವೆನಿಸಿದೆ. ಇತ್ತೀಚೆಗೆ ಮೊದಲ ಮಳೆಗೆ ಹಾಳಾಗಿದ್ದ ಈ ರಸ್ತೆಯನ್ನು ಶ್ರಮದಾನದ ಮೂಲಕ ಸ್ಥಳೀಯರು ದುರಸ್ತಿ ಪಡಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದ್ದರು. ಈಗ ಮತ್ತೆ ಮಳೆಗೆ ಹಾಳಾಗಿದೆ. ಬೊಳ್ಳಾಜೆ ಎಂಬಲ್ಲಿ ಮೋರಿಯಲ್ಲಿ ಕಸ ಕಡ್ಡಿ ಸಿಲುಕುವುದರಿಂದ ಆಗಾಗ ಮೋರಿ ತುಂಬಿ ರಸ್ತೆ ಮೇಲೆಯೇ ನೀರು ಹರಿಯುತ್ತದೆ ಎಂದು ಸ್ಥಳೀಯ ವೀರಪ್ಪ ಗೌಡ ತಿಳಿಸಿದ್ದಾರೆ.

ಬಂಟ್ವಾಳ: ಗಾಳಿ ಮಳೆಗೆ ಹಾನಿ
ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ಸುರಿದ ಗಾಳಿ ಮಳೆಯ ಹಿನ್ನೆಲೆಯಲ್ಲಿ ವಿವಿಧೆಡೆ ಸಣ್ಣಪುಟ್ಟ ಹಾನಿ ಸಂಭವಿಸಿದೆ.

ಪಂಜಿಕಲ್ಲು ಗ್ರಾಮದ ಜಯ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ. ಕಾವಳಪಡೂರು ಗ್ರಾಮದ ಕಮಲ ಸುಂದರ ಹಾಗೂ ಕಮಲ ತನಿಯಪ್ಪ, ಭೋಜ ಪೂಜಾರಿ ಅವರ ಭಾಗಶಃ ಹಾನಿಯಾಗಿದೆ. ಕಾರಿಂಜಕ್ರಾಸ್‌ ಬಳಿ ಟ್ರಾನ್ಸ್‌ಫಾರ್ಮರ್‌ ಬಿದ್ದು ಹಾನಿಯಾಗಿದೆ.

Advertisement

ಅರಂತೋಡು ಗಾಳಿ ಮಳೆ
ಅರಂತೋಡು: ಇಲ್ಲಿನ ಪೇಟೆಯ ತೆಕ್ಕಿಲ್‌ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಮರ ಗಾಳಿಗೆ ಉರುಳಿದೆ. ಗಾಳಿ ಬರುವ ಸ್ವಲ್ಪ ಸಮಯದ ಮೊದಲು ಉದ್ಯಮಿ ನವಾಜ್‌ ಅವರು ಕಾರನ್ನು ಆ ಪ್ರದೇಶದಿಂದ ತೆಗೆದರು. ಹಾಗಾಗಿ ಯಾವುದೇ ಹಾನಿ ಸಂಭವಿಸಿಲ್ಲ.

ಶುಕ್ರವಾರವೂ ಮಳೆ ಮುಂದುವರಿದಿದೆ. ಗುರುವಾರ ಸಂಜೆಯ ವೇಳೆಗೆ ಮಳೆಯಾದ್ದರಿಂದ ಅಲ್ಲಲ್ಲಿ ವಿದ್ಯುತ್‌ ಪೂರೈಕೆ ಕಡಿತಗೊಂಡಿತ್ತು. ಕೆಲವೊಂದೆಡೆ ನೀರಿನ ಚರಂಡಿಗಳು ಮುಚ್ಚಿ ನೀರು ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯಗಳು ಕೂಡ ಕಂಡುಬಂದಿದೆ.

ಪುತ್ತೂರು- ಸುಳ್ಯಸಾಧಾರಣ ಮಳೆ
ಪುತ್ತೂರು: ಪುತ್ತೂರು-ಸುಳ್ಯ ತಾಲೂಕಿನಲ್ಲಿ ಜೂ. 11ರಂದು ರಾತ್ರಿ ಹಾಗೂ ಜೂ. 12ರಂದು ಸಾಧಾರಣ ಮಳೆ ಸುರಿದಿದೆ.

ಕಡಬ: ಇಲ್ಲಿನ‌ ಅಂಗಡಿಮನೆ ಕಾಲನಿಯಲ್ಲಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದ ವೇಳೆ ಸುರೇಶ್‌ ಅವರ ಮನೆಯ ಮೇಲೆ ಮರವೊಂದು ಮುರಿದುಬಿದ್ದ ಮನೆಯ ಛಾವಣಿಗೆ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next