Advertisement

ನೆರೆ ಸಂತ್ರಸ್ತರ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯಕ್ಕೆ ಚುರುಕು

11:03 AM Aug 25, 2019 | Suhan S |

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಾಣ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.

Advertisement

ಜಿಲ್ಲೆಯ ನಾಗನೂರು, ನಾಗೇಂದ್ರನಮಟ್ಟಿ, ಮೇಲ್ಮುರಿ, ಕುಣಿಮೆಳ್ಳಿಹಳ್ಳಿ ಗ್ರಾಮಗಳಲ್ಲಿ ಪ್ರತಿ ಕುಟುಂಬಕ್ಕೆ ತಾತ್ಕಾಲಿಕ 20×14 ಅಳತೆಯ ತಗಡಿನ ಶೆಡ್‌ಗಳನ್ನು ನಿರ್ಮಿಸಿಕೊಡಲು ಮುಂದಾಗಿದ್ದು, ನಿರ್ಮಿತಿ ಕೇಂದ್ರ ಶೆಡ್‌ಗಳ ನಿರ್ಮಾಣ ಹೊಣೆಹೊತ್ತಿದೆ.

ನಾಗನೂರಿನಲ್ಲಿ 20 ಶೆಡ್‌ಗಳು, ನಾಗೇಂದ್ರನಮಟ್ಟಿಯಲ್ಲಿ 28 ಶೆಡ್‌ಗಳು, ಮೇಲ್ಮುರಿಯಲ್ಲಿ 50 ಶೆಡ್‌ಗಳು, ಕುಣಿಮೆಳ್ಳಿಹಳ್ಳಿಯಲ್ಲಿ 15 ಶೆಡ್‌ಗಳು ಸೇರಿದಂತೆ 113 ತಗಡಿನ ಶೆಡ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಮೂರು ದಿನಗಳ ಒಳಗಾಗಿ ಶೆಡ್‌ ನಿರ್ಮಾಣಮಾಡಿ ಸಂತ್ರಸ್ತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುವುದು. ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಸೇರಿದಂತೆ ತಾತ್ಕಾಲಿಕವಾಗಿ ಮೂಲ ಸೌಕರ್ಯಗಳನ್ನು ಶೆಡ್‌ಗಳಲ್ಲಿ ಕಲ್ಪಿಸಿಕೊಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಚೇತರಿಕೆ ಕ್ರಮ:ಸಂತ್ರಸ್ತರಿಗೆ ತ್ವರಿತ ಪರಿಹಾರ ನೀಡುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಮನೆಹಾನಿ, ಬೆಳೆಹಾನಿ, ಮೂಲ ಸೌಕರ್ಯಗಳ ಹಾನಿ, ಜನ-ಜಾನುವಾರುಗಳ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಜಿಲ್ಲಾಡಳಿತ ವಿವಿಧ ತಂಡಗಳನ್ನು ರಚಿಸಿ ಸಮೀಕ್ಷೆ ಹಾಗೂ ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿದೆ.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನೇತೃತ್ವದಲ್ಲಿ ಸಂತ್ರಸ್ತರ ಪರಿಹಾರ ಸಮಿತಿ ರಚಿಸಲಾಗಿದ್ದು, ಡಿಆರ್‌ಡಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಆಯಾ ತಾಲೂಕಿನ ತಹಶೀಲ್ದಾರ್‌, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ.

Advertisement

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚೇತರಿಕೆ ಕಾರ್ಯಕ್ರಮ ಕುರಿತಂತೆ ಸರ್ಕಾರದ ವಿಪತ್ತು ನಿರ್ವಹಣಾ ಘಟಕ ಸುತ್ತೋಲೆಯನ್ನು ಹೊರಡಿಸಿದ್ದು, ಪ್ರವಾಹ ಬಾಧಿತ ಗ್ರಾಮಗಳಲ್ಲಿ ಜಿಪಂ, ಆರೋಗ್ಯ ಇಲಾಖೆ ಹಾಗೂ ಇತರ ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ತುರ್ತು ಕ್ರಮಗಳನ್ನು ಕೈಗೊಳ್ಳವ ಕುರಿತಂತೆ ಮಾರ್ಗಸೂಚಿಗಳನ್ನು ನೀಡಿದೆ.

ಪಡಿತರ ಹಂಚಿಕೆ ಮಾಡಿ: ಸಂತ್ರಸ್ತ ಗ್ರಾಮಗಳಲ್ಲಿ ತುರ್ತಾಗಿ ಸಮಾನ ಪಡಿತರ ಹಂಚಿಕೆ ಮಾಡಬೇಕು ಹಾಗೂ ಕುಡಿಯುವ ನೀರಿನ ಪೂರೈಕೆಮಾಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ವಯ ಪೂರಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಕ್ಷೀರ ಭಾಗ್ಯ ಇತ್ಯಾದಿ ಸೌಲಭ್ಯಗಳನ್ನು ಹೆಚ್ಚಿನ ಮುತುವರ್ಜಿಯಿಂದ ಕೈಗೊಳ್ಳಬೇಕು. ಸಮಗ್ರ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಕಲ್ಯಾಣ ಯೋಜನೆಯನ್ನು ಹೆಚ್ಚು ಜಾಗರೂಕತೆಯಿಂದ ಹಾಗೂ ಕಾಳಜಿಯಿಂದ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದೆ.

ತಾತ್ಕಾಲಿಕ ಶೌಚಾಲಯ ನಿರ್ಮಿಸಿ: ಸಮಗ್ರ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಕಲ್ಯಾಣ ಯೋಜನೆಯನ್ನು ಹೆಚ್ಚಿನ ಮುತುರ್ಜಿಯಿಂದ ಜಾಗರೂಕತೆಯಿಂದ ಅನುಷ್ಠಾನಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳ ಎಲ್ಲ ಶೌಚಾಲಯಗಳನ್ನು ಪುನರ್‌ ನಿರ್ಮಾಣ ಮಾಡಬೇಕು ಹಾಗೂ ಅಗತ್ಯವಿದ್ದಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ ಅಗತ್ಯ ನೀರಿನ ವ್ಯವಸ್ಥೆಮಾಡುವ ಮೂಲಕ ಬಯಲು ಶೌಚ ತಡೆಗಟ್ಟಬೇಕು. ಮಕ್ಕಳು ಮತ್ತು ಮಹಿಳೆಯರ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದಂತೆ ಸ್ನಾನಗೃಹ, ಶೌಚಾಲಯ ಮತ್ತು ಮಲಗುವ ಕೋಣೆ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಇಲಾಖೆಗಳು ಋತುಸ್ರಾವದ ಶುಚಿತ್ವದ ಬಗ್ಗೆ ಅರಿವು ಮತ್ತು ಅಭ್ಯಾಸವನ್ನು ರೂಢಿಸುವುದರ ಬಗ್ಗೆ ಮಾಹಿತಿ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದೆ.

ಶುಚಿತ್ವ ಜಾಗೃತಿ ಅಭಿಯಾನ: ಸ್ವಯಂ ಸೇವಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪಿನ ಸದಸ್ಯರು, ಸ್ವಚ್ಛ ಗ್ರಹಿಗಳು ಇತರರನ್ನು ನೈರ್ಮಲ್ಯ ಪ್ರವರ್ತಕರನ್ನಾಗಿ ನೇಮಿಸಿ ಶುಚಿತ್ವ ಜಾಗೃತಿ ಅಭಿಯಾನವನ್ನು ಆಯೋಜಿಸಲು ಸೂಚಿಸಲಾಗಿದೆ.

ಪರಿಹಾರ ಕಾರ್ಯದಲ್ಲಿ ತಾರತಮ್ಯ ಸಲ್ಲ: ಪರಿಹಾರ ಕೇಂದ್ರದಿಂದ ಮನೆಗೆ ತೆರಳುತ್ತಿರುವ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಆಹಾರ, ಪ್ರಥಮ ಚಿಕಿತ್ಸೆ ಮತ್ತು ನೈರ್ಮಲ್ಯದ ಕಿಟ್/ಪೊಟ್ಟಣವನ್ನು ಕಡ್ಡಾಯವಾಗಿ ಒದಗಿಸಬೇಕು. ಯಾವುದೇ ಕಳಂಕ ಮತ್ತು ತಾರತಮ್ಯವಿಲ್ಲದೆ ತುರ್ತು ಪರಿಹಾರ ಕಾರ್ಯಕೈಗೊಳ್ಳಬೇಕು. ಮಕ್ಕಳ ರಕ್ಷಣೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಸ್ವಯಂ ಸೇವಕರ ಸ್ವಯಂ ರಕ್ಷಣೆ ಮತ್ತು ಇತರ ಆಹಾರದ ವ್ಯವಸ್ಥೆಗೆ ಬೆಂಬಲ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ನಿರ್ದೇಶಕರಾದ ಪ್ರಿಯಾಂಕ ಮೇರಿ ಘ್ರಾನ್ಸಿಸ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next