ಬೆಳಗಾವಿ: ರಾಜ್ಯದಲ್ಲಿ ಶೇ. 40 ರಷ್ಟು ಕಮಿಷನ್ ಬಿರುಗಾಳಿ ಇನ್ನೂ ಇದೆ. ವಿವಿಧ ರಾಜ್ಯಗಳು ಸೇರಿದಂತೆ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದಾಗ ಕಮಿಷನ್ ಸ್ವಾಗತ ಎಂದು ಬರಮಾಡಿಕೊಳ್ಳಲಾಗಿದೆ.
ಹೀಗಾಗಿ, ಬಿಜೆಪಿ ಭ್ರಷ್ಟಾಚಾರದ ಗಿನ್ನಿಸ್ ದಾಖಲೆ ಸೇರುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗವಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 40 ಪರ್ಸಂಟ್ ಕಮಿಷನ್ ತಾಂಡವವಾಡುತ್ತಿದೆ. ಇದಕ್ಕೆ ಓರ್ವ ಗುತ್ತಿಗೆದಾರ ಬಲಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಎಲ್ಲ ಕಡೆ ಪ್ರಚಾರವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ 40 ಪರ್ಸಂಟ್ ಕಮಿಷನ್ ಸಿಎಂ ಸರ್ಕಾರ ಎಂಬ ಸ್ವಾಗತ ಸಿಗುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ದೇಶವನ್ನು ಕಟ್ಟಿದವರು ಕಾಂಗ್ರೆಸ್‌ನವರು. ನಾವು ಒಡೆದಿಲ್ಲ, ಬಿಜೆಪಿಗರು ಇತಿಹಾಸ ಅರಿತು ಮಾತನಾಡಬೇಕು. ಪಾಕಿಸ್ತಾನ -ಬಾಂಗ್ಲಾ ಒಗ್ಗಟ್ಟಿರುವ ವೇಳೆ ಮುಸ್ಲಿಂ ಸಮುದಾಯದ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆದಿವೆ. ಹೀಗಾಗಿ ಮಹಿಳೆಯರಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಆಗಿನ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿಯವರು ಪಾಕ್ -ಬಾಂಗ್ಲಾ ವಿಭಜನೆ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿಗರು ಇತಿಹಾಸ ತಿರುಚುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶವನ್ನು ಮತ್ತೆ ಕಟ್ಟುವ ಸಲುವಾಗಿ ಭಾರತ ಜೊಡೋ ಯಾತ್ರೆ ಮಾಡುತ್ತಿದೆ ಎಂದರು.
ಚಿಕ್ಕೋಡಿ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಅವರು ಪ್ರಭಾವಿ ನಾಯಕರು. ಅವರ ಜತೆ ಚರ್ಚಿಸಿ ಕಾಂಗ್ರೆಸ್ ಚುನಾವಣಾ ಪ್ರಚಾರದ ಬಗ್ಗೆ ಹೆಜ್ಜೆ ಇಡಲಾಗುವುದು ಎಂದ ಅವರು, ನಮ್ಮಲ್ಲಿ ಯಾವುದೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲಗಳಿಲ್ಲ. ನಮ್ಮದು ಏನೇ ಇದ್ದರೂ ಕೊನೆಯ ದಿನದ ಆಟ ಎಂದು ಮಾರ್ಮಿಕವಾಗಿ ಹೇಳಿದರು.