Advertisement

ಮಹತ್ವದ ಖಾತೆಗಳಿಂದ ರಾಜ್ಯಕ್ಕೆ ಅನುಕೂಲ ನಿರೀಕ್ಷೆ

05:13 AM Jun 01, 2019 | Lakshmi GovindaRaj |

ಬೆಂಗಳೂರು: ಕೇಂದ್ರ ಹಣಕಾಸು ಖಾತೆ, ಗಣಿ ಮತ್ತು ಕಲ್ಲಿದ್ದಲು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ರೈಲ್ವೆ ಇಲಾಖೆ ರಾಜ್ಯ ಖಾತೆ ಈ ಬಾರಿ ರಾಜ್ಯ ಸಂಸದರ ಪಾಲಾಗಿದ್ದು, ರಾಜ್ಯದ ಅಭಿವೃದ್ಧಿಗೆ ಒತ್ತು ಸಿಗುವ ಜತೆಗೆ ಹೆಚ್ಚಿನ ಆರ್ಥಿಕ ನೆರವು ಸಿಗುವ ನಿರೀಕ್ಷೆ ಮೂಡಿದೆ.

Advertisement

ಹಿಂದಿನ ಕೇಂದ್ರ ಸರ್ಕಾರಕ್ಕೆ ಹೋಲಿಸಿದರೆ ಈ ಬಾರಿಯೂ ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ದೊರಕಿದ್ದರೂ ಹಂಚಿಕೆ ಮಾಡಿರುವ ಖಾತೆಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆ ಇದೆ. ಜತೆಗೆ ರಾಜ್ಯದ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸ ಮೂಡಿದೆ.

ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಹಣಕಾಸು ಖಾತೆಯನ್ನು ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಹಿಸಲಾಗಿದೆ. ಜು. 5ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ಪ್ರತಿನಿಧಿಸುವ ರಾಜ್ಯಕ್ಕೂ ಹೆಚ್ಚಿನ ಯೋಜನೆಗಳು, ವಿಶೇಷ ಅನುದಾನ ಹಂಚಿಕೆಯಾಗುವ ನಿರೀಕ್ಷೆ ಇದೆ.

ಪ್ರಹ್ಲಾದ್‌ ಜೋಶಿ ಅವರು ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿರುವುದು ರಾಜ್ಯಕ್ಕೆ ವರದಾನವಾಗಿ ಪರಿಣಮಿಸಿದಂತಿದೆ. ಏಕೆಂದರೆ ರಾಜ್ಯದ ರಾಯಚೂರು, ಬಳ್ಳಾರಿಯ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಭಾರೀ ವ್ಯತ್ಯಯದಿಂದಾಗಿ ವರ್ಷದ ಬಹುಪಾಲು ಸಂದರ್ಭದಲ್ಲಿ ಕೊರತೆ ಎದುರಿಸುತ್ತಿರುತ್ತವೆ. ಕಲ್ಲಿದ್ದಲು ಪೂರೈಕೆ ಒಡಂಬಡಿಕೆ ಮಾಡಿಕೊಂಡ ಸಂಸ್ಥೆಗಳು ನಿಯಮಿತವಾಗಿ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸದ ಕಾರಣ ವಿದ್ಯುತ್‌ ಉತ್ಪಾದನೆಯಲ್ಲೂ ನಿರಂತರ ಏರಿಳಿತವಾಗುತ್ತಿತ್ತು.

ಕಳೆದ ಮಳೆಗಾಲದಲ್ಲಿ ಕಲ್ಲಿದ್ದಲು ತೀವ್ರ ಅಭಾವ ತಲೆದೋರಿದ್ದರಿಂದ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಕಲ್ಲಿದ್ದಲು ಪೂರೈಕೆ ಸುಧಾರಿಸಿದ್ದರಿಂದ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಯತ್ನ ತಡೆಹಿಡಿಯಲಾಯಿತು.

Advertisement

ಹೀಗೆ ವರ್ಷ ಪೂರ್ತಿ ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ರಾಜ್ಯದ ಸಂಸದರೇ ಕಲ್ಲಿದ್ದಲು ಸಚಿವರಾಗಿರುವುದರಿಂದ ಕಲ್ಲಿದ್ದಲು ಪೂರೈಕೆ ಉತ್ತಮವಾಗುವ ನಿರೀಕ್ಷೆ ಇದೆ. ಜತೆಗೆ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಕುಖ್ಯಾತಿ ಗಳಿಸಿದ್ದ ರಾಜ್ಯದಲ್ಲಿ ಗಣಿ ಗುತ್ತಿಗೆಯನ್ನು ನಿಯಮಾನುಸಾರ ಕೈಗೊಂಡು ಅಭಿವೃದ್ಧಿ ಜತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡುವ ಕಾರ್ಯಕ್ಕೆ ಅನುಕೂಲವಾಗುವ ಭರವಸೆ ಮೂಡಿದೆ.

ಈ ಹಿಂದೆ ಜನರಿಕ್‌ ಔಷಧ ಮಳಿಗೆ ಸ್ಥಾಪನೆ, ಆಯ್ದ ವೈದ್ಯಕೀಯ ಉಪಕರಣಗಳ ದರ ಇಳಿಕೆ, ಬೇವು ಲೇಪಿತ ಗೊಬ್ಬರ ಪೂರೈಕೆ ಮೂಲಕ ದೇಶದ ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಮತ್ತೆ ಡಿ.ವಿ.ಸದಾನಂದಗೌಡರಿಗೆ ದೊರಕಿದ್ದು, ಈ ಕ್ಷೇತ್ರದಲ್ಲಿ ಇನ್ನಷ್ಟು ಅನುಕೂಲಗಳಾಗುವ ನಿರೀಕ್ಷೆಗಳಿವೆ.

ಸುರೇಶ್‌ ಅಂಗಡಿಯವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ದೊರಕಿದ್ದು, ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮತ್ತೆ ಮರು ಜೀವ ದೊರೆತು ಸಂಪರ್ಕ ಜಾಲ ಇನ್ನಷ್ಟು ಅಭಿವೃದ್ಧಿಯಾಗುವ ಭರವಸೆ ಇದೆ. ಜತೆಗೆ ಬೆಂಗಳೂರಿನ ಸಬ್‌ ಅರ್ಬನ್‌ ರೈಲು ಯೋಜನೆಗೂ ವಿಶೇಷ ಆದ್ಯತೆ ನೀಡುವ ವಿಶ್ವಾಸವಿದೆ.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಉತ್ತಮ ಸಚಿವ ಖಾತೆಗಳನ್ನು ನೀಡಿದ್ದು ಸಂತೋಷವಾಗಿದೆ. ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಇನ್ನೂ ಎರಡು ಸ್ಥಾನ ಸಿಗುವ ನಿರೀಕ್ಷೆ ಇದೆ. ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಸಿಕ್ಕಿರುವ ಪ್ರಾತಿನಿಧ್ಯದ ಬಗ್ಗೆ ತೃಪ್ತಿ ಇದೆ.
-ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next