Advertisement

ಹುಸಿಯಾದ ಅವಿರೋಧ ಆಯ್ಕೆಯ ನಿರೀಕ್ಷೆ

05:56 PM Nov 27, 2021 | Team Udayavani |

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವಿ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಲಾ ಒಂದೊಂದು ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಅವಿರೋಧ ಆಯ್ಕೆ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಹಲವರಿಗೆ ನಿರಾಶೆಯಾಗಿದೆ. ಚುನಾವಣೆ ನಡೆಯುವುದು ಪಕ್ಕಾ ಆಗಿದ್ದು, ತ್ರಿಕೋನ ಸ್ಪರ್ಧೆ ಕೂಡ ಏರ್ಪಟ್ಟಿದೆ.

Advertisement

ಹೌದು, ಈ ಹಿಂದೆ ಇದೇ ಕ್ಷೇತ್ರದಿಂದ ಅವಿರೋಧ ಆಯ್ಕೆ ನಡೆದಿತ್ತು. ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರು ಈ ಖ್ಯಾತಿಗೆ ಒಳಗಾಗಿದ್ದರು. ಹಲವು ವರ್ಷಗಳ ಬಳಿಕ ದ್ವಿ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಲಿದೆ ಎಂಬ ಮಾತು ಪ್ರಬಲವಾಗಿ ಕೇಳಿ ಬಂದಿತ್ತು. ಇದಕ್ಕಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಪ್ರಯತ್ನ ಕೂಡ ನಡೆಸಿದ್ದರು. ಆದರೆ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಹಲವರಲ್ಲಿ ಕೆಲವರು ಮಾತ್ರ ನಾಮಪತ್ರ ಹಿಂದಕ್ಕೆ ಪಡೆದಿದ್ದು, ಕೆಲವರು ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಅವಿರೋಧ ಆಯ್ಕೆ ನಿರೀಕ್ಷೆ ಹುಸಿಯಾಗಿದೆ.

ತ್ರಿಕೋನ ಸ್ಪರ್ಧೆಯೊಡ್ಡಿದ ಲೋಣಿ !: ಕಳೆದ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದ ವಿಜಯಪುರ ಜಿಪಂ ಮಾಜಿ ಉಪಾಧ್ಯಕ್ಷ, ಅಹಿಂದ ಮುಖಂಡ ಮಲ್ಲಿಕಾರ್ಜುನ ಲೋಣಿ, ಈ ಬಾರಿ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ. ಕಳೆದ ಬಾರಿಯೂ ಅವರು ನಾಮಪತ್ರ ಸಲ್ಲಿಸಿದ್ದರಾದರೂ ಹಿರಿಯರ ಮನವೊಲಿಕೆಯಿಂದ ಹಿಂದಕ್ಕೆ ಸರಿದಿದ್ದರು. ಮುಂದಿನ ಬಾರಿ ನಿಮ್ಮನ್ನು ಪರಿಗಣಿಸುವ ಭರವಸೆ ನೀಡಲಾಗಿತ್ತು. ಆದರೆ, ಈ ಬಾರಿಯೂ ಟಿಕೆಟ್‌ ಸಿಗದ ಕಾರಣ ಚುನಾವಣೆ ಕಣಕ್ಕೆ ಧುಮುಕಿದ್ದಾರೆ.

ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಮಲ್ಲು ಲೋಣಿ ಎಂದೇ ಪರಿಚಿತ. ಜಿಪಂ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎಲ್ಲ ಪಕ್ಷದ ರಾಜಕೀಯ ಹಿರಿಯ ನಾಯಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ಅವರು ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ಕೇಳುತ್ತಿದ್ದರು. ಭರವಸೆ ಸಿಕ್ಕಿತ್ತೇ ಹೊರತು ಟಿಕೆಟ್‌ ಸಿಕ್ಕಿರಲಿಲ್ಲ. ಇದೀಗ ಅವರು ಚುನಾವಣೆ ಕಣದಲ್ಲಿ ಉಳಿದಿರುವುದು ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ, ತ್ರಿಕೋನ ಸ್ಪರ್ಧೆಯ ಕಣ ಸೃಷ್ಟಿಸಿದ್ದಾರೆ.

ಸ್ವ ಪಕ್ಷದ ನಾಯಕರ ಬಲವೇ ಅನುಮಾನ:
ಬಿಜೆಪಿಯಿಂದ ಮಾಜಿ ಶಾಸಕ ಪಿ.ಎಚ್‌. ಪೂಜಾರ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎರಡೂ ಜಿಲ್ಲೆಯಲ್ಲಿ ಪೂಜಾರ ಅವರಿಗೆ ಉತ್ತಮ ಹೆಸರಿದ್ದು, ಅದು ಮತವಾಗಿ ಪರಿವರ್ತನೆಯಾಗಬೇಕಷ್ಟೇ. ಹೀಗಾಗಿ ಅವರ ಗೆಲುವಿಗೆ ಅಷ್ಟೊಂದು ಅಡೆತಡೆಗಳು ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಗೆದ್ದ ಸುನೀಲಗೌಡ ಪಾಟೀಲರು, ಈ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದು, ಸಾಕಷ್ಟು ಕೆಲಸ ಕೂಡ ಮಾಡಿದ್ದಾರೆ. ಆದರೆ, ಟಿಕೆಟ್‌ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಉಂಟಾದ ಅಸಮಾಧಾನ, ಗೊಂದಲ ಚುನಾವಣೆಯಲ್ಲಿ ಪರಿಣಾಮ ಬೀರಬಹುದೇ ಎಂಬ ಆತಂಕ ಕೊಂಚಮಟ್ಟದಲ್ಲಿದೆ.

Advertisement

ಕಾಂಗ್ರೆಸ್‌ನಿಂದ ಟಿಕೆಟ್‌ ಹಂಚಿಕೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಅಲ್ಲದೇ ಈ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಪ್ರತಿನಿಧಿಸಿದ್ದ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ಸಿಕ್ಕಿಲ್ಲ. ಪಕ್ಷದ ಹಿರಿಯ ನಾಯಕರಾಗಿರುವ ಎಸ್‌. ಆರ್‌. ಪಾಟೀಲರ ಮನಸ್ಸಿಗೆ ಘಾಸಿಯಾಗಿದ್ದರೂ ಮೇಲ್ನೋಟಕ್ಕೆ ಪಕ್ಷ ನಿಷ್ಠೆ ತೋರಿಸಿದ್ದಾರೆ. ಪಕ್ಷದ ಶಿಸ್ತಿನ ಕಾರ್ಯಕರ್ತ, ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುವೆ. ಆದರೆ, ಟಿಕೆಟ್‌ ಯಾಕೆ ನೀಡಿಲ್ಲ ಎಂಬುದು ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಸ್‌. ಆರ್‌. ಪಾಟೀಲ ಅವರಿಗಿಂತ ಅವರ ಬೆಂಬಲಿಗರಿಗೇ ಅತಿಹೆಚ್ಚು ನೋವು-ಅಸಮಾಧಾನ ಉಂಟಾಗಿದ್ದು, ಇದು ವ್ಯತಿರಿಕ್ತ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಈ ಬಾರಿ ಅವಿರೋಧ ಆಯ್ಕೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನವಾಗಿದ್ದ ಶುಕ್ರವಾರ, ಇನ್ನೂ ಹಲವರು ಕಣದಲ್ಲಿ ಉಳಿದಿದ್ದು, ಚುನಾವಣೆ ನಡೆಯುವುದು ನಿಖರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next