ಬೆಂಗಳೂರು: ರಾಷ್ಟ್ರಗಳ ನಡುವಿನ ಸಂಬಂಧ ಬೆಸೆಯುವ ಕೆಲಸ ಮಾಡುತ್ತಿರುವ “ಏರೋ ಇಂಡಿಯಾ ಶೋ’ದ ಅತಿ ಹೆಚ್ಚು ಲಾಭ ಕರ್ನಾಟಕಕ್ಕೆ ಆಗಲಿದ್ದು, ಅತ್ಯಧಿಕ ಬಂಡವಾಳ ಕೂಡ ಇಲ್ಲಿಗೆ ಹರಿದು ಬರಲಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಏರೋ ಇಂಡಿಯಾ ಶೋದಿಂದ ಅವಕಾಶಗಳ ಹೆಬ್ಟಾಗಿಲು ತೆರೆದು ಕೊಳ್ಳಲಿದ್ದು, ಕರ್ನಾಟಕದ ಯುವಕ ರಿಗೆ ಭವಿಷ್ಯದಲ್ಲಿ ದೊಡ್ಡ ಲಾಭವಾಗ ಲಿದೆ. ಪ್ರದರ್ಶನದಲ್ಲಿ ಆಗುವ ಒಡಂ ಬಡಿಕೆಗಳು ಸಹಿತ ಈ ವೇದಿಕೆ ಮೂಲಕ ಆಗುವ ಬಂಡವಾಳ ಹೂಡಿಕೆ ಯಲ್ಲಿ ಹೆಚ್ಚಿನ ಪಾಲು ಕರ್ನಾಟಕದ್ದಾಗಲಿದೆ ಎಂದು ರವಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಒಟ್ಟಾರೆ ರಕ್ಷಣ ಕ್ಷೇತ್ರದ ರಫ್ತು ಪ್ರಮಾಣ 13 ಸಾವಿರ ಕೋಟಿ ರೂ. ಆಗಿದ್ದು, 2024ರ ವೇಳೆಗೆ ಇದು ಹೆಚ್ಚು-ಕಡಿಮೆ ದುಪ್ಪಟ್ಟು ಅಂದರೆ 25 ಸಾವಿರ ಕೋಟಿ ಆಗಲಿದೆ. ಪ್ರದರ್ಶನದ ಪ್ರಮುಖ ಉದ್ದೇಶ ಭಾರತವು ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿರುವುದನ್ನು ಪ್ರದರ್ಶಿಸುವುದಾಗಿದ್ದು, ವಿದೇಶಿ ರಕ್ಷಣ ಸಚಿವರು ಹಾಗೂ ದಿಗ್ಗಜ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೊಂದಿಗೆ ನಡೆಯುವ ದುಂಡು ಮೇಜಿನ ಸಭೆಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಈ ಸಭೆಗಳಲ್ಲಿ ರಫ್ತು (ವಿಶೇಷವಾಗಿ ತೇಜಸ್) ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಪ್ರಸ್ತುತ ಒಟ್ಟಾರೆ ರಕ್ಷಣ ಉಪಕರಣ ತಯಾರಿಯಲ್ಲಿ ಶೇ. 67ರಷ್ಟು ಕರ್ನಾಟಕ ಪಾಲು ಹೊಂದಿದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ವಿಸ್ತರಣೆ ಆಗಲಿದ್ದು, ಬೆಂಗಳೂರಿನಲ್ಲೇ ಸಂಪೂರ್ಣ ದೇಶೀಯವಾಗಿ ಯುದ್ಧವಿಮಾನ ನಿರ್ಮಿಸುವ ಕನಸು ನಮ್ಮದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಏರೊಸ್ಪೇಸ್ ನೀತಿ ಹಾಗೂ ರಕ್ಷಣ ಪಾರ್ಕ್‌ನ ಮೊದಲ ಹಂತ ಪೂರ್ಣಗೊಂಡಿದೆ. 2ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರೋ ಶೋ ನಡೆಸಲು ಅತ್ಯಂತ ಸೂಕ್ತ ಸ್ಥಳವಾಗಿದ್ದು, ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು ಎಂದ ಅವರು, ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಯಶಸ್ವಿ ಯಾಗಿ ರಕ್ಷಣ ಹಾಗೂ ಏರೋ ಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ ಎಂದರು.
ಕೇಂದ್ರ ರಕ್ಷಣ ಇಲಾಖೆ ರಾಜ್ಯ ಸಚಿವ ಅಜಯ್ ಭಟ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗಿರಿಧರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಇ.ವಿ. ರಮಣ ರೆಡ್ಡಿ, ಗೌರವ್ ಗುಪ್ತ ಮತ್ತಿತರರಿದ್ದರು.
ಬೆಂಗಳೂರಿಗೆ ಬಂದಿಳಿದ ಪ್ರಧಾನಿ
“ಏರೋ ಇಂಡಿಯಾ ಶೋ’ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಬೆಂಗಳೂರಿಗೆ ಬಂದಿಳಿದರು. ಸಂಜೆ ನಗರದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು. ಅಲ್ಲಿಂದ ಪ್ರಧಾನಿ ರಾಜಭವನಕ್ಕೆ ತೆರಳಿದರು. ಸೋಮವಾರ ಬೆಳಗ್ಗೆ 9.30ಕ್ಕೆ ಏರೋ ಶೋಗೆ ಚಾಲನೆ ನೀಡಲಿದ್ದು, ಮಧ್ಯಾಹ್ನ ದಿಲ್ಲಿಗೆ ಮರಳಲಿದ್ದಾರೆ.