Advertisement

Big ಸ್ಟಾರ್ಸ್ ಸಿನಿಮಾ ನಿರೀಕ್ಷೆ

12:32 AM Jul 12, 2019 | Team Udayavani |
ಯಾವುದೇ ಚಿತ್ರರಂಗವಿರಲಿ, ಅಲ್ಲಿನ ಬಿಗ್‌ ಸ್ಟಾರ್‌ಗಳ ಸಿನಿಮಾ ರಿಲೀಸ್‌ ಆಗುತ್ತಿದೆ ಎಂದರೆ ಸಹಜವಾಗಿಯೇ ಅಭಿಮಾನಿಗಳ, ಚಿತ್ರರಂಗದ ಗಮನ ಆ ಚಿತ್ರಗಳ ಮೇಲೆ ನೆಟ್ಟಿರುತ್ತದೆ. ಅದರಲ್ಲೂ ವರ್ಷಕ್ಕೆ ತೀರಾ ಅಪರೂಪ ಎನ್ನುವಂತೆ ಒಂದೋ, ಎರಡೋ ಬಾರಿ ಇಂಥ ಸಂದರ್ಭಗಳು ಬಂದರಂತೂ ಕೇಳ್ಳೋದೇ ಬೇಡ. ಎಂದಿಗಿಂತಲೂ ಹೆಚ್ಚಾಗಿಯೇ ಅಭಿಮಾನಿಗಳಲ್ಲಿ, ಚಿತ್ರರಂಗದಲ್ಲಿ ನಿರೀಕ್ಷೆ-ಸಂಭ್ರಮ ಎರಡೂ ಒಟ್ಟಾಗಿಯೇ ಮನೆ ಮಾಡಿರುತ್ತದೆ. ಇನ್ನು ಒಂದೇ ತಿಂಗಳಲ್ಲಿ ಒಂದರ ಹಿಂದೊಂದು ಸ್ಟಾರ್‌ ಚಿತ್ರಗಳು ಬಂದರೆ ಚಿತ್ರರಂಗದ ವಾತಾವರಣ ಹೇಗಿರಬಹುದು? ಇಂಥದ್ದೊಂದು ವಾತಾವರಣ ಈಗ ಕನ್ನಡ ಚಿತ್ರರಂಗದಲ್ಲೂ ಸೃಷ್ಟಿಯಾಗುತ್ತಿದೆ.

ಹೌದು, ಕಳೆದ ವರ್ಷಾಂತ್ಯದಲ್ಲಿ ಬಂದ ‘ಕೆಜಿಎಫ್’ ಚಿತ್ರದ ಬಿಡುಗಡೆ ಸಂದರ್ಭ ನಿಮಗೆ ನೆನಪಿರಬಹುದು. ಬಹು ಸಮಯದ ನಂತರ, ಬಿಗ್‌ ಬಜೆಟ್‌ನಲ್ಲಿ ಬಂದ ಬಿಗ್‌ ಸ್ಟಾರ್‌ ಚಿತ್ರದ ಸ್ವಾಗತಕ್ಕೆ ಇಡೀ ಚಿತ್ರೋದ್ಯಮವೇ ಎರಡು-ಮೂರು ತಿಂಗಳಿನಿಂದ ಕಾದು ಕೂತು ಸ್ವೀಕರಿಸಿತ್ತು. ಬಳಿಕ ‘ಕೆಜಿಎಫ್’ ಬರೆದ ದಾಖಲೆ ಎಲ್ಲರಿಗೂ ಗೊತ್ತೇ ಇದೆ. ‘ಕೆಜಿಎಫ್’ ಚಿತ್ರದ ಬಳಿಕ ಈ ಆರು ತಿಂಗಳಲ್ಲಿ ಮತ್ತೆ ಅಂಥ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ. ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಮತ್ತೆ ಅಂಥದ್ದೇ ವಾತಾವರಣ ಇದೇ ಆಗಸ್ಟ್‌ ತಿಂಗಳಿನಲ್ಲಿ ಮರುಕಳಿಸುವ ಸಾಧ್ಯತೆ ಕಂಡುಬರುತ್ತಿದೆ. ಅದಕ್ಕೆ ಕಾರಣ ಮತ್ತದೆ ಬಿಗ್‌ ಸ್ಟಾರ್‌ಗಳ ಬಿಗ್‌ ಚಿತ್ರಗಳು!

Advertisement

ಆಗಸ್ಟ್‌ 2ರಂದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ ‘ಕುರುಕ್ಷೇತ್ರ’ ತೆರೆಗೆ ಬರುತ್ತಿದೆ. ನಟ ದರ್ಶನ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ ಹೀಗೆ ಕನ್ನಡ ಬಹುತೇಕ ಸ್ಟಾರ್‌ ಕಲಾವಿದರ ಸಮಾಗಮ ಈ ಚಿತ್ರದಲ್ಲಿದೆ. ಅಲ್ಲದೆ ಹಿರಿಯ ನಟ ರೆಬೆಲ್ಸ್ಟಾರ್‌ ಅಂಬರೀಶ್‌ ಅಭಿನಯಿಸಿರುವ ಕೊನೆಯ ಚಿತ್ರ ಕೂಡ ಇದಾಗಿರುವುದರಿಂದ ‘ಕುರುಕ್ಷೇತ್ರ’ ಚಿತ್ರದ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿಯೇ ಇದೆ. ಐದು ಭಾಷೆಗಳಲ್ಲಿ ಬರುತ್ತಿರುವ ‘ಕುರುಕ್ಷೇತ್ರ’ ಚಿತ್ರವನ್ನು ಏಕಕಾಲಕ್ಕೆ ಐದು ಭಾಷೆಗಳಲ್ಲೂ ರಿಲೀಸ್‌ ಮಾಡಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಅದಕ್ಕಾಗಿ ಭರ್ಜರಿ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ‘ಕುರುಕ್ಷೇತ್ರ’ದ ಸೌಂಡ್‌ ಜೋರಾಗುತ್ತಿದ್ದು, ಚಿತ್ರ ಕರ್ನಾಟಕದಲ್ಲಿ ಸುಮಾರು 400ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಇದರ ಬೆನ್ನಲ್ಲೇ ಸುಮಾರು ಎರಡು-ಮೂರು ವಾರಗಳ ಅಂತರದಲ್ಲಿ ಆಗಸ್ಟ್‌ ಕೊನೆವಾರ (ಆಗಸ್ಟ್‌ 29) ಕನ್ನಡದ ಮತ್ತೂಂದು ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್‌’ ಕೂಡ ತೆರೆಗೆ ಬರುತ್ತಿದೆ. ಬಹು ಸಮಯದ ನಂತರ ನಟ ಕಿಚ್ಚ ಸುದೀಪ್‌ ‘ಪೈಲ್ವಾನ್‌’ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವುದರಿಂದ, ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಮತ್ತು ಚಿತ್ರರಂಗಕ್ಕೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಕೂಡ ಏಕಕಾಲಕ್ಕೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದರಿಂದ ಸಹಜವಾಗಿಯೇ ‘ಪೈಲ್ವಾನ್‌’ ಹವಾ ಎಲ್ಲಾ ಚಿತ್ರರಂಗಕ್ಕೂ ಜೋರಾಗಿಯೇ ತಟ್ಟಲಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪೈಲ್ವಾನ್‌’ ಪೋಸ್ಟರ್‌, ಟೀಸರ್‌ ಎಲ್ಲದಕ್ಕೂ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿರುವುದರಿಂದ, ಎಲ್ಲರ ಚಿತ್ತ ‘ಪೈಲ್ವಾನ್‌’ನತ್ತ ನೆಟ್ಟಿರುವುದಂತೂ ಸುಳ್ಳಲ್ಲ.

ಇದಾಗುತ್ತಿದ್ದಂತೆಯೇ, ಕೆಲವೇ ವಾರಗಳ ಅಂತರ­ದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತೆರೆಗೆ ಬರುತ್ತಿದೆ. ‘ಕಿರಿಕ್‌ ಪಾರ್ಟಿ’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ನಟ ರಕ್ಷಿತ್‌ ಶೆಟ್ಟಿ ಕಂ ಬ್ಯಾಕ್‌ ಚಿತ್ರ ಎಂದೇ ಹೇಳಲಾಗುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಗ್‌ ಬಜೆಟ್‌ನಲ್ಲಿ ತಯಾರಾಗಿದ್ದು, ಈಗಾಗಲೇ ಬಿಡುಗಡೆಯಾಗಿ­ರುವ ಚಿತ್ರದ ಪೋಸ್ಟರ್‌, ಟೀಸರ್‌ ಎಲ್ಲವೂ ಸೂಪರ್‌ ಹಿಟ್ ಎನಿಸಿಕೊಂಡಿರುವುದರಿಂದ ನಾರಾಯಣನ ಮಹಿಮೆ ಮೇಲೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ.

ಒಟ್ಟಿನಲ್ಲಿ ಸುಮಾರು ನಾಲ್ಕೈದು ವಾರಗಳ ಅಂತರದಲ್ಲೇ ಕನ್ನಡ ಚಿತ್ರರಂಗದ ಈ ವರ್ಷದ ಮೂರು ಬಹುನಿರೀಕ್ಷಿತ ಬಿಗ್‌ ಬಜೆಟ್ ಮತ್ತು ಬಿಗ್‌ ಸ್ಟಾರ್ ಚಿತ್ರಗಳು ತೆರೆಗೆ ಬರುತ್ತಿರುವುದರಿಂದ, ಸೆಪ್ಟೆಂಬರ್‌ ಮೊದಲ ವಾರದಿಂದಲೇ ಚಂದನವನ ಗರಿಗೆದರಿ ನಿಲ್ಲುವುದಂತೂ ಗ್ಯಾರಂಟಿ. ಚಿತ್ರರಂಗದ ವ್ಯಾಪ್ತಿ-ವಿಸ್ತಾರದ ದೃಷ್ಟಿಯಿಂದ ನಿಯಮಿತವಾಗಿ ಸ್ಟಾರ್ ಚಿತ್ರಗಳು ಬರಬೇಕು ಎನ್ನುವುದು ಚಿತ್ರರಂಗ­ದಲ್ಲಿ ಎಲ್ಲರೂ ಒಪ್ಪುವಂತ ಮಾತು.

Advertisement

ಅಲ್ಲದೆ ಸ್ಟಾರ್ ಚಿತ್ರಗಳಿಗೆ ಬಿಗ್‌ ಓಪನಿಂಗ್ಸ್‌ ಸಿಗುವುದರಿಂದ, ಮಾರುಕಟ್ಟೆಯೂ ದೊಡ್ಡದಾಗಿರುವುದರಿಂದ ಚಿತ್ರರಂಗದ ವ್ಯಾಪಾರ – ವಹಿವಾಟಿನ ಮೇಲೂ ಇವುಗಳದ್ದು ದೊಡ್ಡ ಪರಿಣಾಮ ಎನ್ನಬಹುದು. ಹಾಗಾಗಿಯೇ ಪ್ರತಿ ಸ್ಟಾರ್‌ ನಟ ವರ್ಷಕ್ಕೆ ಕನಿಷ್ಟ ಎರಡೂ ಚಿತ್ರವಾದರೂ ಮಾಡಬೇಕು ಎನ್ನುವ ಮಾತು ಚಿತ್ರರಂಗದ ಪರಿಣಿತರ ಮಾತು. ಒಟ್ಟಾರೆ ಆಗಸ್ಟ್‌ ತಿಂಗಳಿನಲ್ಲಿ ಸ್ಟಾರ್ ಸಿನಿಮಾಗಳ ಧಮಾಕ ನೋಡಲು ನೋಡಲು ಫ್ಯಾನ್ಸ್‌ ತುದಿಗಾಲಿನಲ್ಲಿ ನಿಂತಿದ್ದರೆ, ಬಾಕ್ಸಾಫೀಸ್‌ನಲ್ಲಿ ಈ ಚಿತ್ರಗಳ ಕಮಾಲ್ ಹೇಗಿರಲಿದೆ ಎನ್ನುವ ಲೆಕ್ಕಾಚಾರದಲ್ಲಿ ಚಿತ್ರೋದ್ಯಮದ ಮಂದಿ ಇದ್ದಾರೆ.

ಉಳಿದ ಚಿತ್ರಗಳ ಪಾಡೇನು?
ಆಗಸ್ಟ್‌ ತಿಂಗಳಿನಲ್ಲಿ ಮೂರ್‍ನಾಲ್ಕು ಬಿಗ್‌ ಸ್ಟಾರ್ ಚಿತ್ರಗಳೇನೊ ತೆರೆಗೆ ಬರುತ್ತವೆ ಸರಿ. ಆದರೆ, ಸ್ಟಾರ್‌ಗಳಿಲ್ಲದ, ಬಿಗ್‌ ಬಜೆಟ್ ಇಲ್ಲದ ಹೊಸಬರ ಚಿತ್ರಗಳ ಕಥೆ ಏನು? ಎಂಬ ಪ್ರಶ್ನೆಯೂ ಇದೇ ವೇಳೆ ಎದುರಾಗುತ್ತಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಪರೀಕ್ಷೆಗಳು, ಚುನಾವಣೆ, ಐಪಿಎಲ್, ಕ್ರಿಕೆಟ್ ವಲ್ಡ್ರ್ ಕಪ್‌, ಥಿಯೇಟರ್‌ ಪ್ರಾಬ್ಲಿಂ, ಆಷಾಡ… ಹೀಗೆ ಹತ್ತು ಹಲವು ಕಾರಣಗಳಿಂದ ತಮ್ಮ ಬಿಡುಗಡೆಯನ್ನು ಮುಂದೂಡುತ್ತ ಬಂದಿರುವ ಚಿತ್ರಗಳ ಸಂಖ್ಯೆ ಬರೋಬ್ಬರಿ ಮೂವತ್ತಕ್ಕೂ ಹೆಚ್ಚಿದೆ. ಇನ್ನು ಈ ಎರಡು – ಮೂರು ತಿಂಗಳಿನಲ್ಲಿ ಸೆನ್ಸಾರ್‌ ಆಗಿ ತೆರೆಗೆ ಬರಲು ಸಿದ್ಧವಾಗುವ ಚಿತ್ರಗಳ ಸಂಖ್ಯೆಯನ್ನು ತೆಗೆದುಕೊಂಡರೆ ಅವುಗಳ ಒಟ್ಟು ಸಂಖ್ಯೆ ಐವತ್ತರ ಗಡಿ ದಾಟಲಿದೆ. ಕನ್ನಡದ ಮಟ್ಟಿಗೆ ಒಂದು ಸ್ಟಾರ್‌ ಚಿತ್ರ ಬಿಡುಗಡೆಯಾದರೆ, ಕನಿಷ್ಟ ಎರಡು-ಮೂರು ವಾರ ಅಲ್ಲಿ ಹೊಸಬರ ಚಿತ್ರಗಳಿಗೆ ಎಂಟ್ರಿ ಸಿಗೋದು ಕಷ್ಟ. ಹೀಗಿರುವಾಗ ಸಾಲು ಸಾಲು ಸ್ಟಾರ್ ಚಿತ್ರಗಳು ತೆರೆಗೆ ಬಂದು ಥಿಯೇಟರ್‌ ಬ್ಲಾಕ್‌ ಆದರೆ ನಾವೇನು ಮಾಡೋದು? ಅನ್ನೋದು ಹೊಸ ಚಿತ್ರಗಳ ನಿರ್ಮಾಪಕರ ಪ್ರಶ್ನೆ. ಒಟ್ಟಿನಲ್ಲಿ ಚಿತ್ರರಂಗದ ಎಲ್ಲಾ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ಅಲ್ಲೇ ಇರುವುದರಿಂದ, ಹಳಬರು ಮತ್ತು ಹೊಸಬರು ಜೊತೆಯಾಗಿ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಅನ್ನೋದು ಪ್ರೇಕ್ಷಕ ಪ್ರಭುಗಳ ಸಲಹೆ

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next