Advertisement

ರಾ.ಹೆ.ಯಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಿರೀಕ್ಷೆ

10:00 PM Jan 05, 2021 | Team Udayavani |

ಮಹಾನಗರ: ಕೈಗಾರಿಕ ವ್ಯಾಪ್ತಿಯನ್ನು ಹೊಂದಿರುವ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಸರಕು ವಾಹನಗಳ ಓಡಾಟಕ್ಕೆ ಪ್ರತ್ಯೇಕ ರಸ್ತೆ ಆವಶ್ಯಕವಿರುವ ಕಾರಣ ಪ್ರಯಾಣಿಕ ವಾಹನಗಳಿಗೆ ಅನುಕೂಲವಾಗುವಂತೆ ಫ್ಲೈಓವರ್‌ ನಿರ್ಮಾಣಕ್ಕೆ ಒಲವು ವ್ಯಕ್ತವಾಗಿದೆ.

Advertisement

ಈ ವಿಚಾರದ ಬಗ್ಗೆ ಈಗಾಗಲೇ ನವ ಮಂಗಳೂರು ಬಂದರು ಮಂಡಳಿಯು ಆಸಕ್ತಿ ತೋರಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಗಮನಸೆಳೆಯುವ ನಿರೀಕ್ಷೆಯಿದೆ. ಜತೆಗೆ ವಿವಿಧ ಕೈಗಾರಿಕ ಸಂಸ್ಥೆಗಳು ಕೂಡ ವಾಹನ ಒತ್ತಡ ಕಡಿಮೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಆಗ್ರಹಿಸಿದೆ.

ಕೂಳೂರು ಸೇತುವೆಯ ಸನಿಹದ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಕೆಐಓಸಿಎಲ್‌, ಎನ್‌ಎಂಪಿಟಿ, ಎಂಸಿಎಫ್‌, ಟೋಟಲ್‌ ಗ್ಯಾಸ್‌, ಚೆಟ್ಟಿನಾಡ್‌ ಸಿಮೆಂಟ್‌, ಗೈಲ್‌ ಸಹಿತ ಹಲವು ಕೈಗಾರಿಕ ಸಂಬಂಧಿತ ಸಂಸ್ಥೆಗಳಿವೆ. ಬೈಕಂಪಾಡಿ ಕೈಗಾರಿಕಾ ಪ್ರದೇಶ, ಎಸ್‌ಇಝಡ್‌, ಎಂಆರ್‌ಪಿಎಲ್‌ ಸಹಿತ ವಿವಿಧ ಕೈಗಾರಿಕ ಪ್ರದೇಶಕ್ಕೆ ಸಂಪರ್ಕಕ್ಕೆ ಇದೇ ರಸ್ತೆ ಅಗತ್ಯ ಆಗಿರುವುದರಿಂದ ಇಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸರಕು ತುಂಬಿದ ವಾಹನಗಳೇ ಸಂಚರಿಸುತ್ತಿವೆ. ಜತೆಗೆ ಹಲವು ಘನ ವಾಹನಗಳು ಈ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ನಿಂತಿರುವುದರಿಂದ ಖಾಸಗಿ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ಹಾಗಾಗಿ ಇಲ್ಲಿ ಫ್ಲೈಓವರ್‌ ನಿರ್ಮಾಣ ಅಗತ್ಯ ಎಂದು ಉಲ್ಲೇಖೀಸಲಾಗುತ್ತಿದೆ.

ಕೈಗಾರಿಕಾ ತಜ್ಞರ ಪ್ರಕಾರ, “ಇಲ್ಲಿನ ಕೈಗಾರಿಕೆಗಳಿಗೆ ತೆರಳುವ ವಾಹನ, ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ ವಾಹನ ದಟ್ಟನೆ ಕಡಿಮೆ ಮಾಡಬಹುದು. ಅದಕ್ಕಿಂತಲೂ ಬೈಕಂಪಾಡಿ ರೈಲ್ವೇ ಓವರ್‌ಬ್ರಿಡ್ಜ್ ಹೊಸದಾಗಿ ಆಗಬೇಕಿದೆ. ಇಲ್ಲಿ ಉಡುಪಿ- ಮಂಗಳೂರು ಭಾಗದಿಂದ ಬರುವ ವಾಹನಗಳು, ಸರ್ವೀಸ್‌ ರಸ್ತೆ, ಬೈಕಂಪಾಡಿ ಸಹಿತ ಹಲವು ಭಾಗದಿಂದ ವಾಹನಗಳು ಬರುವುದರಿಂದ ವಾಹನ ಒತ್ತಡ ಎದುರಾಗುತ್ತಿದೆ’ ಎನ್ನುತ್ತಾರೆ.

ಸರಕು ಸಾಗಾಟಕ್ಕೆ ಅನುಕೂಲ
69 ಕೋಟಿ ರೂ. ವೆಚ್ಚದ ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಜತೆಗೆ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳೂ ಮುಂದಿನ ಹಂತದಲ್ಲಿ ಪೂರ್ಣಗೊಳ್ಳುವ ಕಾರಣದಿಂದ ಮಂಗಳೂರಿಗೆ ಸರಕು ಸಾಗಾಟ ವಾಹನಗಳ ಆಗಮನಕ್ಕೆ ಉಪಕಾರವಾಗಲಿದೆ. ಹೀಗಿರುವಾಗ ಮಂಗಳೂರಿನ ಕೈಗಾರಿಕ ಕೇಂದ್ರದ ಭಾಗದಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸಲು ಫ್ಲೈಓವರ್‌ ಅಗತ್ಯವಾಗಿದೆ ಎಂಬುದು ಎನ್‌ಎಂಪಿಟಿ ಅಭಿಪ್ರಾಯ.

Advertisement

ಷಟ್ಪಥ ಪ್ರಸ್ತಾವದಲ್ಲೇ ಬಾಕಿ!
ಬಿ.ಸಿ. ರೋಡ್‌ ಹಾಗೂ ಸುರತ್ಕಲ್‌ ಮಧ್ಯೆ ಷಟ್ಪಥ ಹೆದ್ದಾರಿ ನಿರ್ಮಾಣದ ಭಾರತ್‌ ಮಾಲಾ ಯೋಜನೆ ಪ್ರಸ್ತಾವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದಿಂದ ಕೇಂದ್ರ ಸಚಿವಾಲಯಕ್ಕೆ ಸಲ್ಲಿಸಿ ಮೂರು ವರ್ಷಗಳಾಗುತ್ತಿದ್ದರೂ ಅನುಮೋದನೆ ಮಾತ್ರ ದೊರಕಿಲ್ಲ. 9 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು (ಈಗ 30-35 ಮೀ. ಅಗಲ) ಸೇರಿಸಿಕೊಂಡು ಷಟ³ಥ ರಸ್ತೆ ನಿರ್ಮಾಣದ ಯೋಜನೆ ಇದಾಗಿತ್ತು. 3,924 ಕೋ.ರೂ. ಮೊತ್ತದ ಈ ಯೋಜನೆಗೆ ಶಿಲಾನ್ಯಾಸವೂ ನಡೆದಿತ್ತು. ಇದು ಸಾಧ್ಯವಾಗಿದ್ದರೆ ಎನ್‌ಎಂಪಿಟಿ ಮುಂಭಾಗದ ರಸ್ತೆ ಇನ್ನೂ ಅಗಲ/ಫ್ಲೈಓವರ್‌ ಕಾಣುವ ಸಾಧ್ಯತೆಯಿತ್ತು.

ಫ್ಲೈಓವರ್‌ ಆಗಬೇಕಿದೆ
ಮುಂದಿನ ಹಂತದಲ್ಲಿ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ ಕೈಗಾರಿಕ ಮತ್ತು ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ ವಾಹನ ದಟ್ಟಣೆಯೊಂದಿಗೆ ಅಪಘಾತಗಳನ್ನೂ ತಪ್ಪಿಸಬಹುದು. ಈ ಕುರಿತಾದ ಚಿಂತನೆ ಸದ್ಯ ಇದೆ.
-ವೆಂಕಟರಮಣ ಅಕ್ಕರಾಜು, ಅಧ್ಯಕ್ಷರು, ನವಮಂಗಳೂರು ಬಂದರು ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next