Advertisement

ಆಧಾರ್‌ ಲಿಂಕ್‌ ಗಡುವು ಮಾರ್ಚ್‌ಗೆ ವಿಸ್ತರಣೆ 

06:00 AM Oct 26, 2017 | Team Udayavani |

ಹೊಸದಿಲ್ಲಿ/ಕೋಲ್ಕತಾ: ಸರಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್‌ ಲಿಂಕ್‌ ಮಾಡಲು 2018ರ ಮಾ.31ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಒಂದು ವೇಳೆ ಸೌಲಭ್ಯ ಹೊಂದಿಲ್ಲದೇ ಇದ್ದರೆ ಅರ್ಹರಿಗೆ ಲಾಭ ನೀಡದಂಥ ಕ್ರಮ ಅನುಸರಿಸುವುದಿಲ್ಲ. ಹೀಗೆಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಬುಧವಾರ ಅರಿಕೆ ಮಾಡಿಕೊಂಡಿದೆ. ಈ ಗಡುವು ವಿಸ್ತರಣೆ ಈವರೆಗೆ ಆಧಾರ್‌ ಕಾರ್ಡ್‌ ಹೊಂದಿಲ್ಲದವರಿಗೆ ಮಾತ್ರ ಅನ್ವಯಿಸಲಿದ್ದು, ಆಧಾರ್‌ ಹೊಂದಿಲ್ಲ ದವರು ಹೊಸದಾಗಿ ಅರ್ಜಿ ಸಲ್ಲಿಸಿ ಆಧಾರ್‌ ಪಡೆದು ಆನಂತರ ಅದನ್ನು ಯೋಜನೆಗಳಿಗೆ ಜೋಡಿಸಿಕೊಳ್ಳಲು ಅನುಕೂಲವಾಗಲೆಂದು ಈ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. 

Advertisement

ಸರಕಾರದ ನಾನಾ ಯೋಜನೆಗಳಿಗೆ, ಬ್ಯಾಂಕ್‌ ಖಾತೆಗಳಿಗೆ, ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ನೀಡ ಬೇಕೆಂಬ ನಿಯಮವನ್ನು ಜಾರಿ ಮಾಡಿರುವ ಕೇಂದ್ರ ಸರಕಾರದ ನಡೆಯನ್ನು ಪ್ರಶ್ನಿಸಿ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖ ಲಾಗಿವೆ. ಬುಧವಾರ ನಡೆದ ಈ ಅರ್ಜಿಗಳ ವಿಚಾರಣೆಯಲ್ಲಿ, ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಬುಧವಾರ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರುಳ್ಳ ಪೀಠಕ್ಕೆ ಗಡುವು ವಿಸ್ತರಣೆ ಕುರಿತ ಸ್ಪಷ್ಟನೆ ನೀಡಿದ್ದಾರೆ. 

ಸೋಮವಾರ ಸ್ಪಷ್ಟನೆ: ಈ ನಡುವೆ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡಬೇಕು ಎಂಬ ವಿಚಾರದ ಬಗ್ಗೆ ನ್ಯಾಯಪೀಠ ಅಟಾರ್ನಿ ಜನರಲ್‌ ಅವರನ್ನು ಪ್ರಶ್ನಿಸಿದಾಗ “ಈ ಬಗ್ಗೆ ಕೇಂದ್ರದ ಜತೆ ನಾನು ಚರ್ಚಿಸಿ ಸೋಮವಾರ ವಿವರಣೆ ನೀಡುವೆ’ ಎಂದು ಹೇಳಿದ್ದಾರೆ. 

“ಆಧಾರ್‌ ಕಾರ್ಡ್‌ ಇಲ್ಲದವರ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳದು. ಆದರೆ, ಎಲ್ಲಾ ಸರ್ಕಾರಿ ಯೋಜನೆ ಫ‌ಲಾನು ಭವಿಗಳು ತಮ್ಮ ಯೋಜನೆಗಳಿಗೆ ಆಧಾರ್‌ ಕಾರ್ಡ್‌ ಜೋಡಿಸುವುದನ್ನು ಕೇಂದ್ರ ಬಯಸುತ್ತದೆ. ಆಧಾರ್‌ ಇಲ್ಲದ ಫ‌ಲಾನುಭವಿಗಳು ಇತರ ಸರ್ಕಾರಿ ಗುರುತಿನ ಚೀಟಿ ಕೊಟ್ಟರೂ ಸಾಕು. ಅಂಥವರಿಗೆ ಯಾವುದೇ ಸರ್ಕಾರಿ ಸವಲತ್ತು ತಪ್ಪದಂತೆ ನೋಡಿಕೊಳ್ಳಲಾಗುವುದು’ ಎಂದರು. 

ಮರು ದೃಢೀಕರಣ ಸರಳ
ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಜೋಡಣೆಯ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಸರಳಗೊಳಿಸಿದೆ. ದೇಶದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಕಂಪನಿಗಳಿಗೆ ಈಗಾಗಲೇ ಸೂಚನೆ ನೀಡಿರುವ ಕೇಂದ್ರ ಸರಕಾರ, ಹಾಲಿ ಗ್ರಾಹಕರ ವಿಳಾಸದ ಪುನರ್‌ ಪರಿಶೀಲನೆ ನಡೆಸುವಂತೆ ಸೂಚಿಸಿದೆ.  ಇದಲ್ಲದೆ, ಆಧಾರ್‌ ಕಾರ್ಡ್‌ ನೊಂದಾವಣಿ ವೇಳೆ “ನೊಂದಾಯಿತ ಮೊಬೈಲ್‌ ಸಂಖ್ಯೆ’ಗೆ “ಒಟಿಪಿ’ (ಒನ್‌ ಟೈಮ್‌ ಪಾಸ್‌ವರ್ಡ್‌) ಕಳುಹಿಸುವ ಮೂಲಕ ಗ್ರಾಹಕರ ದೃಢೀಕರಣ ಪಡೆಯುಂಥ ಸೇವೆಗಳಿಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. 

Advertisement

ಮಮತಾ ಕಿಡಿ
ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಿಸಬೇಕೆಂದು ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಕೋಲ್ಕತಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “”ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಕಡ್ಡಾಯ ಮಾಡುವ ಆದೇಶದ ಮೂಲಕ ಕೇಂದ್ರ ಸರಕಾರ ಸಾರ್ವಜನಿಕರ ಖಾಸಗಿತನಕ್ಕೆ ಹಾಗೂ ನಾಗರಿಕರ ಹಕ್ಕುಗಳಿಗೆ ಚ್ಯುತಿ ತಂದಿದೆ” ಎಂದು ಟೀಕಿಸಿದರಲ್ಲದೆ, “”ನಾನಂತೂ ನನ್ನ ಮೊಬೈಲ್‌ಗೆ ಆಧಾರ್‌ ಲಿಂಕ್‌ ಮಾಡುವುದಿಲ್ಲ” ಎಂದು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next