Advertisement

ಪುತ್ತೂರು ಉಪನೋಂದಣಿ ಕಚೇರಿ ಕಟ್ಟಡ ವಿಸ್ತರಣೆ!

11:36 AM Jun 07, 2018 | Team Udayavani |

ಪುತ್ತೂರು : ಶಿಫ್ಟ್‌ ಮಾಡಬೇಕು- ಬೇಡ ಎಂಬ ಗೊಂದಲದಲ್ಲೇ ಮುಳುಗಿರುವ ಪುತ್ತೂರು ಉಪನೋಂದಣಿ ಕಚೇರಿ ಕಟ್ಟಡವನ್ನು ವಿಸ್ತರಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಉಪನೋಂದಣಿ ಕಚೇರಿ ಇಕ್ಕಟ್ಟಾಗಿದ್ದು, ವಿಸ್ತರಿಸುವ ಅಗತ್ಯವಿದೆ. ಒಂದು ವೇಳೆ ವಿಸ್ತರಿಸಿದ್ದೇ ಆದರೆ, ಕಚೇರಿ ಶಿಫ್ಟ್‌
ಆಗುವ ವಿಷಯ ಮೂಲೆ ಗುಂಪಾಗುತ್ತದೆ. ಉಪನೋಂದಣಿ ಕಚೇರಿ ಮಿನಿ ವಿಧಾನಸೌಧಕ್ಕೆ ಶಿಫ್ಟ್‌ ಆಗ ಬೇಕು ಎಂಬ ವಿಷಯದಲ್ಲಿ ಸಾಕಷ್ಟು ಚರ್ಚೆ ಚಾಲ್ತಿಯಲ್ಲಿದೆ. ಇದರ ನಡುವೆ ಕಚೇರಿ ವಿಸ್ತರಿಸುವ ವಿಷಯ ಮುನ್ನೆಲೆಗೆ ಬಂದಿರುವುದು, ಹೊಸ ಗೊಂದಲಕ್ಕೆ ಕಾರಣವಾಗಿದೆ.

Advertisement

ಈ ಹಿಂದೆಯೇ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿತ್ತು. ಆಗ ಉಪನೋಂದಣಿ ಕಚೇರಿಯ ಬದಿಯಿಂದ ಒಂದು ಹಾಲ್‌ ತೆಗೆದುಕೊಳ್ಳುವ ರೂಪುರೇಷೆ ತಯಾರಿ ಸಲಾಯಿತು. ಇದರ ನೀಲನಕಾಶೆಯನ್ನು ತಯಾರಿಸಲಾಯಿತು. ಈಗಿನ ಕಟ್ಟಡಕ್ಕೆ ಒಂದು ಬದಿಯಿಂದ ಹಾಲ್‌ ತೆಗೆದುಕೊಳ್ಳುವುದನ್ನು ನಕಾಶೆಯಲ್ಲಿ ತೋರಿಸಲಾಗಿದೆ. ಈ ಕಟ್ಟಡಕ್ಕೆ ಅಂದಾಜು 15.40 ಲಕ್ಷ ರೂ. ಅನುದಾನದ ಅಗತ್ಯವಿದೆ ಎನ್ನಲಾಗಿದೆ.

ಸದ್ಯ ಚೆಂಡು ರಾಜ್ಯ ಸರಕಾರದ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ. ಅಂದರೆ ಪುತ್ತೂರು ನೋಂದಣಿ ಕಚೇರಿಯಿಂದ ಕಳುಹಿಸಿದ ಪ್ರಸ್ತಾವನೆ ಜಿಲ್ಲಾ ನೋಂದಣಿ ಅಧಿಕಾರಿ ಮೂಲಕ ರಾಜ್ಯದ ನೋಂದಣಿ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ಕಳುಹಿಸಲಾಯಿತು. ಅವರು ಅನುದಾನ ಬಿಡುಗಡೆ ಮಾಡಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಕಟ್ಟಡ ನಿರ್ಮಾಣ ಕಷ್ಟ!
ಇಬ್ರಾಹಿಂ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಶಿಫ್ಟ್‌ ಮಾಡುವ ಪ್ರಕ್ರಿಯೆಗೆ ವೇಗ ಸಿಕ್ಕಿತು. ಇದರ ಮೊದಲ ಹಂತವಾಗಿ ಪಹಣಿ ತಿದ್ದುಪಡಿ ಮಾಡಲಾಯಿತು. ಆರ್‌ಟಿಸಿ ಕಲಂ 9ರಲ್ಲಿದ್ದ ಉಪನೋಂದಣಿ ಕಚೇರಿ ಹೆಸರನ್ನು ತೆಗೆದುಹಾಕಿ, ಸರಕಾರ
ಎಂದು ನಮೂದಿಸಲಾಯಿತು. ಕಲಂ 11ರಲ್ಲಿ ಸರಕಾರ ಎಂದೇ ಇತ್ತು. ಆದ್ದರಿಂದ ಉಪನೋಂದಣಿ ಕಚೇರಿಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ ಎಂದು ಪರಿಗಣಿಸಿ, ಸರಕಾರಕ್ಕೆ ಪುನಃ ಪಡೆದುಕೊಳ್ಳಲಾಯಿತು.

ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಅರ್ಜಿ ಆಹ್ವಾನಿಸಿ, ಈ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಯಿತು. ಅಂದರೆ ಈಗ ಉಪನೋಂದಣಿ ಕಚೇರಿ ಇರುವ ಜಾಗ ಆಸ್ಪತ್ರೆಯ ಹೆಸರಿನಲ್ಲಿದೆ. ಹಾಗಿರುವಾಗ, ಉಪನೋಂದಣಿ ಕಚೇರಿ ಕಟ್ಟಡವನ್ನು ವಿಸ್ತರಿಸುವುದು ಹೇಗೆ? ಇದಕ್ಕೆ ಅನುಮತಿ ಸಿಗುತ್ತದೆಯೇ? ಒಂದು ವೇಳೆ ಕಟ್ಟಡ ನಿರ್ಮಿಸಿದರೂ ಕಚೇರಿ ಶಿಫ್ಟ್‌ ಆದಾಗ ಕಟ್ಟಡ ಪಾಳು ಬೀಳುವುದಿಲ್ಲವೇ? ಆಸ್ಪತ್ರೆ ಈ ಜಾಗವನ್ನು ತನ್ನ ಸುಪರ್ದಿಗೆ
ತೆಗೆದು ಕೊಂಡರೂ ಕಟ್ಟಡ ಪ್ರಯೋಜನಕ್ಕೆ ಬರುತ್ತದೆಯೇ? ಈ ಎಲ್ಲ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Advertisement

ಕಚೇರಿ ಮಿನಿ ವಿಧಾನಸೌಧಕ್ಕೆ ಶಿಫ್ಟ್‌ ಆದರೆ ಸೂಕ್ತ ಜಾಗವಿಲ್ಲ, ಹಿರಿಯ ನಾಗರಿಕರಿಗೆ ಮೇಲಂತ ಸ್ತಿಗೆ ಕಷ್ಟ ಎನ್ನಲಾಯಿತು. ಈ ದೃಷ್ಟಿಯಿಂದ ಲಿಫ್ಟ್‌ ಕೂಡ ಅಳವಡಿಸಲಾಯಿತು. ಆದರೆ ಕಚೇರಿ ಶಿಫ್ಟ್‌ ಆಗಿಲ್ಲ.

ಶಿಫ್ಟ್‌ ಹಿಂದಿನ ಕಥೆ 
ಏಕಸೂರಿನಡಿ 27 ಇಲಾಖೆಗಳನ್ನು ತರಬೇಕು ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ ನಿರ್ಮಿಸಲಾಯಿತು. ಇದರಲ್ಲಿ ಒಂದೊಂದಾಗಿ ಇಲಾಖೆಗಳ ಪ್ರತಿಷ್ಠೆಯೂ ಆಯಿತು. ಆದರೆ ಉಪ ನೋಂದಣಿ ಕಚೇರಿ ಮಾತ್ರ ಶಿಫ್ಟ್‌ ಆಗಲು ಕೇಳುತ್ತಿಲ್ಲ. ಆಗಿನ ಜಿಲ್ಲಾಧಿಕಾರಿ, ಎಸಿ ಈ ಬಗ್ಗೆ ಪ್ರಯತ್ನ ಮುಂದುವರಿಸಿದಾಗ, ಒಂದಷ್ಟು ಮಂದಿ ಪ್ರತಿಭಟನೆಯನ್ನೂ ಮಾಡಿದರು. ಈ ನಡುವೆ ಇಲಾಖೆಗಳ ನಡುವೆ ಪತ್ರ ವ್ಯವಹಾರವೂ ನಡೆಯಿತು. ಡಿಸಿ, ಎಸಿಗೆ ವರ್ಗಾವಣೆ ಆಗುತ್ತಿದ್ದಂತೆ ಈ ವಿಚಾರವೇ ಮೂಲೆಗೆ ಬಿದ್ದಿತು. 

ವಿಸ್ತರಣೆ ಕಷ್ಟ ಸಾಧ್ಯ
ಉಪನೋಂದಣಿ ಕಚೇರಿ ಜಾಗವನ್ನು ಪುತ್ತೂರು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಗಿದೆ. ಆದ್ದರಿಂದ ಉಪನೋಂದಣಿ ಕಚೇರಿ ಕಟ್ಟಡದ ವಿಸ್ತರಣೆ ಕಷ್ಟ ಸಾಧ್ಯ.
 – ಶ್ರೀಧರ್‌ ಪಿ.,
ಉಪತಹಶೀಲ್ದಾರ್‌, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next