ಪುತ್ತೂರು: ರಾಜ್ಯದ ವಸತಿಯುತ ಶಾಲೆಗಳಲ್ಲಿ 6 ನೇ ತರಗತಿ ಯಿಂದ ಉನ್ನತ ಶಿಕ್ಷಣದ ತನಕದ ವಿದ್ಯಾ ರ್ಥಿನಿಯರಿಗೂ ಕರಾಟೆ ಕಲಿಕೆ ಯನ್ನು ವಿಸ್ತರಿಸುವ ಚಿಂತನೆ ಮಾಡಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿ.ಪಂ., ತಾ.ಪಂ. ಆಶ್ರಯದಲ್ಲಿ ಸಾಲ್ಮರದಲ್ಲಿ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಿ.ದೇವರಾಜ ಅರಸು ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಮಕ್ಕಳ ಸ್ವ-ರಕ್ಷಣೆಗೆ ಕರಾಟೆ ಕಲಿಕೆ ಪ್ರಯೋಜನ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಇದನ್ನು ವಿಸ್ತರಿಸುವ ಯೋಚನೆ ಮಾಡಲಾಗಿದೆ. ಇದಕ್ಕಾಗಿ 1,000 ಕರಾಟೆ ಶಿಕ್ಷಕರನ್ನು ನಿಯೋಜಿಸುವ ಚಿಂತನೆಯು ಇದೆ ಎಂದರು.
ಕನಕದಾಸರ ಹೆಸರಿನಲ್ಲಿ 50 ವಸತಿ ನಿಲಯ
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಸತಿ ನಿಲಯಗಳಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪ್ರಸ್ತುತ 1.2 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಹೀಗಾಗಿ ಸರಕಾರವು ವಿವಿಧ ಮಹಾತ್ಮರ ಹೆಸರಿನಲ್ಲಿ ವಸತಿ ನಿಲಯ ನೀಡಲು ಮುಂದಾಗಿದ್ದು ಕನಕದಾಸರ ಹೆಸರಿನಲ್ಲಿ 50 ವಸತಿ ನಿಲಯ ಮಂಜೂರು ಮಾಡಿದೆ. 4 ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ ಮಂಜೂರುಗೊಳಿಸಿದೆ ಎಂದು ಹೇಳಿದರು.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಾಧನೆಗಾಗಿ ಕಾವ್ಯಶ್ರೀ, ಪ್ರತೀಕ್ಷಾ, ಶ್ರದ್ಧಾ ರೈ ಅವರನ್ನು ಸಚಿವರು ಸಮ್ಮಾನಿಸಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾ ಧ್ಯಕ್ಷೆ ವಿದ್ಯಾ ಆರ್. ಗೌರಿ, ಸದಸ್ಯ ಪದ್ಮನಾಭ ನಾಯ್ಕ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ತಹಶೀಲ್ದಾರ್ ಟಿ.ರಮೇಶ್ ಬಾಬು, ತಾ. ಪಂ. ಇಒ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ದ.ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲಾºವಿ ಉಪಸ್ಥಿತರಿದ್ದರು. ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್. ಸ್ವಾಗತಿಸಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜ್‌ಗೋಪಾಲ್ ಎನ್. ಎನ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರೂಪಿಸಿದರು.
ಪುತ್ತೂರಿಗೆ ಅಂಬೇಡ್ಕರ್ ವಸತಿ ಶಾಲೆ ಮಂಜೂರು
ಶಾಸಕ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಪುತ್ತೂರಿಗೆ 29 ಕೋ.ರೂ.ವೆಚ್ಚದ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದರು. ಡಿ.ದೇವರಾಜ ಅರಸು ಭವನದ ನೂತನ ಕಟ್ಟಡದ ಮೇಲಂತಸ್ತಿಗೆ ಶೀಟ್ ಅಳವಡಿಕೆಯ ಛಾವಣಿ ನಿರ್ಮಿಸುವ ಬೇಡಿಕೆ ಇದ್ದು ಇದಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ದೀನ ದಯಾಳ್ ಉಪಾಧ್ಯಾಯ ವಸತಿಯುತ ಶಾಲೆ
ರಾಜ್ಯ ಸರಕಾರವು ಈ ಬಾರಿ ದೀನ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ 1,000 ವಿದ್ಯಾರ್ಥಿಗಳ ಸಾಮರ್ಥ್ಯದ ಐದು ವಸತಿಯುತ ಶಾಲೆ ತೆರೆಯಲಿದೆ. ಇಲ್ಲಿ ಎಲ್ಲ ಜಾತಿ, ಮತ, ಧರ್ಮದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಹಿಂದೆ ಅಲ್ಪಸಂಖ್ಯಾಕರು, ಬಹು ಸಂಖ್ಯಾಕರು ಎಂದು ಪ್ರತ್ಯೇಕಗೊಳಿಸಿದ್ದರಿಂದ ಈಗ ಅದರ ಸವಾಲು ಎದುರಾಗಿದೆ. ಹಾಗಾಗಿ ಎಲ್ಲ ವರ್ಗದವರಿಗೂ ಇಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.