Advertisement

ಫ‌ಲಿತಾಂಶದ ಬಳಿಕ ಆಗುತ್ತಾ ಸಂಪುಟ ವಿಸ್ತರಣೆ?

06:10 AM Nov 04, 2018 | Team Udayavani |

ಬೆಂಗಳೂರು:ಉಪ ಚುನಾವಣೆ ಫ‌ಲಿತಾಂಶ ಹೊರಬೀಳುತ್ತಿದ್ದಂತೆ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆಯಿದ್ದು ಆಕಾಂಕ್ಷಿಗಳು ಈಗಿನಿಂದಲೇ ಲಾಬಿ ಶುರು ಮಾಡಿದ್ದಾರೆ.

Advertisement

ಇನ್ನೇನು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತದೆ ಎಂದು ಹೇಳಲಾಗಿತ್ತಾದರೂ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರಿಂದ ಮುಂದೂಡಲು ಸಬೂಬು ಸಿಕ್ಕಂತಾಗಿತ್ತು.

ಎಲ್ಲವೂ ಅಂದುಕೊಂಡಂತೆ ಆದರೆ ಉಪ ಚುನಾವಣೆ ಫ‌ಲಿತಾಂಶ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಪರ ಬಂದರೆ ನವೆಂಬರ್‌ 10 ಅಥವಾ 11 ರಂದು ಸಂಪುಟ ವಿಸ್ತರಣೆ ಸೂಸೂತ್ರವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ವಿಸ್ತರಣೆ ಮಾಡುವುದು ಸೂಕ್ತ ಎಂಬ ಮಾತುಗಳು ಇದೆ.  ಈಗ ಸಂಪುಟ ವಿಸ್ತರಣೆ ಆಗದಿದ್ದರೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಷ್ಟ ಎಂಬ ಸತ್ಯ ಅರಿತಿರುವ ಆಕಾಂಕ್ಷಿಗಳು ನವೆಂಬರ್‌ 6 ರ ಡೆಡ್‌ಲೈನ್‌ ನೀಡಿ ಕಾಯುತ್ತಿದ್ದಾರೆ.

ಕಾಂಗ್ರೆಸ್‌ ಕೋಟಾದಡಿ ಆರು ಸ್ಥಾನಗಳಿಗೆ ಎಂ.ಬಿ.ಪಾಟೀಲ್‌, ಬಿ.ಸಿ.ಪಾಟೀಲ್‌ , ಶ್ಯಾಮನೂರು ಶಿವಶಂಕರಪ್ಪ, ಶಿವಳ್ಳಿ, ಎಂ.ಟಿ.ಬಿ.ನಾಗರಾಜ್‌,ರಾಮಲಿಂಗಾರೆಡ್ಡಿ, ಎಚ್‌.ಕೆ.ಪಾಟೀಲ್‌, ರೋಷನ್‌ಬೇಗ್‌, ತನ್ವೀರ್‌ ಸೇs…, ರಹೀಂ ಖಾನ್‌, ಎಂ.ಕೃಷ್ಣಪ್ಪ, ಡಾ.ಸುಧಾಕರ್‌, ನಾಗೇಂದ್ರ, ತುಕಾರಾಂ, ರೂಪಾ ಶಶಿಧರ್‌, ಧರ್ಮಸೇನಾ ಆಕಾಂಕ್ಷಿಗಳಾಗಿದ್ದಾರೆ.

ಅದರಲ್ಲೂ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಸಹ ಬಿಜೆಪಿಯವರು ಉಪ ಮುಖ್ಯಮಂತ್ರಿ ಆಫ‌ರ್‌ ನೀಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾನೂ ಆಕಾಂಕ್ಷಿ ಎಂಬ ಬಯಕೆ ಹೊರ ಹಾಕಿದ್ದಾರೆ.
ಜೆಡಿಎಸ್‌ ಕೋಟಾದಡಿ ಎರಡು ಸ್ಥಾನಗಳಿದ್ದು ಸಿರಾ ಸತ್ಯನಾರಾಯಣ, ಶ್ರೀನಿವಾಸಗೌಡ, ಬಿ.ಎಂ.ಫ‌ರೂಕ್‌, ಬಸವರಾಜ ಹೊರಟ್ಟಿ, ಎಚ್‌.ವಿಶ್ವನಾಥ್‌, ಎಚ್‌.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ.
ಎನ್‌.ಮಹೇಶ್‌ ರಾಜೀನಾಮೆಯಿಂದ ತೆರವಾಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನದ ಮೇಲೆ ಬಸವರಾಜ ಹೊರಟ್ಟಿ ಹಾಗೂ ಎಚ್‌.ವಿಶ್ವನಾಥ್‌ ಕಣ್ಣಿಟ್ಟಿದ್ದಾರೆ.

Advertisement

ಈ ಮಧ್ಯೆ, ಶಿವಮೊಗ್ಗ ಉಪ ಚುನಾವಣೆ ಪ್ರಚಾರದ ವೇಳೆ ಹಿರಿಯ ನಾಯಕರ ಕಾಗೋಡು ತಿಮ್ಮಪ್ಪ ಅವರು ಒಪ್ಪಿದರೆ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವರಾಗಿ ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿರುವುದು ಜೆಡಿಎಸ್‌ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.  ಹೀಗಾಗಿ, ಯಾರಿಗೆಲ್ಲಾ ಅದೃಷ್ಟ ಖುಲಾಯಿಸಲಿದೆ ಕಾದು ನೋಡಬೇಕಾಗಿದೆ.

ಆಶ್ವಾಸನೆ
ಈ ನಡುವೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಕೆಲವರಿಗೆ ಸಚಿವಗಿರಿ ಭರವಸೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ಪರ ಫ‌ಲಿತಾಂಶ ಬಂದರೆ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಬೇಕಾಗುತ್ತದೆ. ಆಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲೂಬಹುದು. ತೀವ್ರ ಪೈಪೋಟಿ ಉಂಟಾದರೆ ಮತ್ತೆ ರಾಹುಲ್‌ಗಾಂಧಿ ಸಮ್ಮುಖದಲ್ಲೇ ಸಂಪುಟ ವಿಸ್ತರಣೆ ಇತ್ಯರ್ಥವಾಗಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ನಿಗಮ ಮಂಡಳಿ “ಅಸ್ತ್ರ’
ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನ ತಣಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ನಿಗಮ ಮಂಡಳಿ ಅಧ್ಯಕ್ಷರ ನೇಮಕ “ಅಸ್ತ್ರ’ ಸಹ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಸುಮಾರು 30 ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಲು ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್‌ಗೆ 20 ಹಾಗೂ ಜೆಡಿಎಸ್‌ಗೆ 10 ಸ್ಥಾನ ಸಿಗಲಿದ್ದು ಬಹುತೇಕ ಶಾಸಕರಿಗೆ ಬಂಪರ್‌ ಹೊಡೆಯುವ ಸಾಧ್ಯತೆಯಿದೆ. ನಿಗಮ ಮಂಡಳಿ ನೇಮಕದ ಜತೆಗೆ 10 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕದ ದಾರಿ ಸಹ ಹುಡುಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next