Advertisement

ನಗರದಲ್ಲಿ ನಾಮಪತ್ರಗಳ ಮಹಾಪೂರ

03:46 PM Apr 24, 2018 | Team Udayavani |

ವಿಧಾನ ಸಭಾ ಚುನಾವಣೆ ಹಿನ್ನೆಲೆ ಬಿ ಫಾರಂ ಪಡೆದ ಸಾಕಷ್ಟು ಅಭ್ಯರ್ಥಿಗಳು ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯದಿನವಾಗಿದ್ದು, ಕೆಲ ಅಭ್ಯರ್ಥಿಗಳು ಇಂದು ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆಯಿದೆ.

Advertisement

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಸೋಮವಾರ ನಾಮಪತ್ರಗಳ ಮಹಾಪೂರ ಹರಿದು ಬಂದಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸರ್ವಜ್ಞನಗರ , ವಸತಿ ಸಚಿವ ಎಂ.ಕೃಷ್ಣಪ್ಪ ವಿಜಯನಗರ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಶಿವಾಜಿನಗರ, ಕೃಷ್ಣ ಬೈರೇಗೌಡ ಬ್ಯಾಟರಾಯನಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮಹದೇವಪುರ ಕ್ಷೇತ್ರದಿಂದ, ವಿ.ಸೋಮಣ್ಣ ಗೋವಿಂದರಾಜನಗರದಿಂದ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಗಳಾಗಿ ಹಾಲಿ ಶಾಸಕರಾದ ಅಶ್ವಥ್‌ನಾರಾಯಣ ಮಲ್ಲೇಶ್ವರಂನಿಂದ, ಸಪ್ತಗಿರಿಗೌಡ ಗಾಂಧಿನಗರದಿಂದ, ಲಕ್ಷ್ಮಿನಾರಾಯಣ ಚಾಮರಾಜಪೇಟೆಯಿಂದ, ಎಚ್‌.ರವೀಂದ್ರ ವಿಜಯನಗರದಿಂದ , ತುಳಸೀ ಮುನಿರಾಜುಗೌಡ ರಾಜರಾಜೇಶ್ವರಿನಗರದಿಂದ, ಎಂ.ಎನ್‌.ರೆಡ್ಡಿ ಸರ್ವಜ್ಞನಗರದಿಂದ ನಾಮಪತ್ರ ಸಲ್ಲಿಸಿದರು. ಸಿ.ವಿ.ರಾಮನ್‌ನಗರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಪಿ.ರಮೇಶ್‌, ದಾಸರಹಳ್ಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಿ.ಎನ್‌.ಕೃಷ್ಣಮೂರ್ತಿ,ಹೆಬ್ಟಾಳ ಅಭ್ಯರ್ಥಿಯಾಗಿ ಬೈರತಿ ಸುರೇಶ್‌ ನಾಮಪತ್ರ ಸಲ್ಲಿಸಿದರು.

ಜಾರ್ಜ್‌ ವಿಶ್ವಾಸ: ಸರ್ವಜ್ಞನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಜೆ.ಜಾರ್ಜ್‌ , ಕ್ಷೇತ್ರಪುನರ್‌ವಿಂಗಡಣೆ ನಂತರ ಎರಡು ಬಾರಿ ಈ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಎಲ್ಲ ವರ್ಗದ ಜನರ ನಿರೀಕ್ಷೆಗಳಿಗೆ ಸ್ಪಂದಿಸಿದ್ದೆನೆ.

Advertisement

ಈ ಬಾರಿಯೂ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.ಬ್ಯಾಟರಾಯನಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೃಷ್ಣಬೈರೇಗೌಡರು, ಕ್ಷೇತ್ರದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಮತ್ತೂಮ್ಮೆ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಶಕ್ತಿ ಮೀರಿ ಕೆಲಸ: ಮಹದೇವಪುರ ಬಿಜೆಪಿ ಅಭ್ಯರ್ಥಿಯಾಗಿ ಕೆ.ಆರ್‌.ಪುರದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಅರವಿಂದ ಲಿಂಬಾವಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಮಂಜುಳ, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಪಾಲಿಕೆ ಸದಸ್ಯರು, ಕ್ಷೇತರದ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜ್ಯೋತಿಪುರದ ಜ್ಯೋತಿಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರೋಡ್‌ ಶೋ ನಡೆಸಿದರು.

 ನಾಮಪತ್ರ ಸಲ್ಲಿಸಿ ಮಾತನಾಡಿದ ಲಿಂಬಾವಳಿ, ಮಹದೇವಪುರ ಕ್ಷೇತ್ರದ ಶಾಸಕನಾಗಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರಕ್ಕೆ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ತೋರಿದರೂ, ಶಕ್ತಿ ಮೀರಿ ಕೆಲಸ ಮಾಡಿದ್ದು, ಅದನ್ನು ಮುಂದಿಟ್ಟುಕೊಂಡು ಮತಯಾಚಿಸಲಾಗುವುದು ಎಂದು ಹೇಳಿದರು.

ಅಶ್ವಥ್‌ನಾರಾಯಣ್‌ಗೆ ಡಿವಿಎಸ್‌ ಸಾಥ್‌:  ಮಲ್ಲೇಶ್ವರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ. ಸಿ.ಎನ್‌. ಅಶ್ವಥನಾರಾಯಣ ಅದಕ್ಕೂ ಮುನ್ನ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಸರ್ಕಲ್‌ ಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ನಡೆಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಾಥ್‌ ನೀಡಿದರು. 

ಅಶ್ವಥ್‌ನಾರಾಯಣ ಮಾತನಾಡಿ, ಹತ್ತು ವರ್ಷಗಳಲ್ಲಿ ಕ್ಷೇತ್ರದ ಜನತೆಯ ಕೆಲಸ ಮಾಡಿದ್ದೇನೆ. ಮತ್ತೂಮ್ಮೆ ಅವರ ಆಶೀರ್ವಾದ ಕೋರುತ್ತಿದ್ದೇನೆ ಎಂದು ಹೇಳಿದರು. ಸದಾನಂದಗೌಡರು ಮಾತನಾಡಿ ಯುವಕರಾಗಿರುವ ಮುನಿರಾಜುಗೌಡ ಅವರನ್ನು ಈ ಬಾರಿ ಗೆಲ್ಲಿಸುವ ಮೂಲಕ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ತುಳಸಿ ಮುನಿರಾಜುಗೌಡ ಆಸ್ತಿ ವಿವರ
ರಾಜರಾಜೇಶ್ವರಿ ನಗರದ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ತುಳಸಿ ಮುನಿರಾಜುಗೌಡ ಅವರ ಒಟ್ಟು ಆಸ್ತಿ ಮೌಲ್ಯ 68.47 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.

ಪತ್ನಿ ಭವ್ಯ ಅವರ ಹೆಸರಿನಲ್ಲಿ 51.20 ಲಕ್ಷ ರೂ. ಚರಾಸ್ತಿ ಹಾಗೂ 3.71ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಹಾಗೆಯೇ ಮಕ್ಕಳ ಹೆಸರಿನಲ್ಲಿ 11.84 ಲಕ್ಷ ರೂ. ಚರಾಸ್ತಿಯಿದೆ. ಆಡಿ, ಸ್ಕಾರ್ಪಿಯೋ, ಬುಲೆರೋ ಪಿಕ್‌ಅಪ್‌, ಹ್ಯೂಂಡೈ ಕ್ರೆಟಾ ಹಾಗೂ ಟೋಯೊಟಾ ಇನ್ನೋವಾ ಮತ್ತು 560 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಪತ್ನಿ ಹೆಸರಿನಲ್ಲಿ 1500 ಗ್ರಾಂ ಚಿನ್ನ ಹಾಗೂ 10 ಕೆ.ಜಿ.ಬೆಳ್ಳಿ ಇದೆ. ಕೆಂಚನಕುಪ್ಪೆ, ಗೊಲ್ಲಹಳ್ಳ ಇತರೆಡೆ ಕಡೆಗಳಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿ ಹೊಂದಿದ್ದಾರೆ.

ಒಟ್ಟು ಆಸ್ತಿ ಮೌಲ್ಯ: 68.47 ಕೋಟಿ ರೂ.
ನಗದು: 1.50ಲಕ್ಷ ರೂ.
ಚಿನ್ನಾಭರಣ: 2ಕೆ.ಜಿ.
ಬೆಳ್ಳಿ: 10 ಕೆ.ಜಿ
ಚರಾಸ್ತಿ: 12.72 ಕೋಟಿ ರೂ.
ಸ್ಥಿರಾಸ್ತಿ: 55.72 ಕೋಟಿ ರೂ.
ಒಟ್ಟು ಸಾಲ: 7.97 ಕೋಟಿ ರೂ.

ರೋಷನ್‌ ಬೇಗ್‌ ಆಸ್ತಿ ವಿವರ
ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಸಚಿವ ಆರ್‌.ರೋಷನ್‌ ಬೇಗ್‌ ಅವರ ಒಟ್ಟು ಆಸ್ತಿ ಮೌಲ್ಯ 36.23 ಕೋಟಿ ರೂ. ಎಚ್‌ಬಿಆರ್‌ ಲೇಔಟ್‌, ಫ್ರೆಜರ್‌ಟೌನ್‌ನಲ್ಲಿ ಕೃಷಿಯೇತರ ಭೂಮಿ, ಎಲೆಕ್ಟ್ರಾನಿಕ್‌ ಸಿಟಿ, ರೆಸಿಡೆನ್ಸಿ ರಸ್ತೆಯಲ್ಲಿ ವಾಣಿಜ್ಯ ಜಾಗವನ್ನು ರೋಷನ್‌ ಬೇಗ್‌ ಹೊಂದಿದ್ದಾರೆ. 
ಫ್ರೆಜರ್‌ಟೌನ್‌ನಲ್ಲಿ ಎರಡು ವಸತಿ ಕಟ್ಟಡಗಳಿವೆ. ಪತ್ನಿ ಹೆಸರಿನಲ್ಲಿ ಫ್ರೆಜರ್‌ಟೌನ್‌ನಲ್ಲಿ ಕೃಷಿಯೇತರ ಭೂಮಿ ಇದೆ. ಆದರೆ ಅವರ ಬಳಿ ವಾಹನ, ಚಿನ್ನಾಭರಣವಿಲ್ಲ ಎಂದು ಉಲ್ಲೇಖೀಸಲಾಗಿದೆ. ರೋಷನ್‌ ಬೇಗ್‌ ಅವರು 22.78 ಲಕ್ಷ ರೂ. ಸೇವಾ ತೆರಿಗೆ, 6.88 ಲಕ್ಷ ರೂ. ಜಿಎಸ್‌ಟಿ ಬಾಕಿ ಸೇರಿದಂತೆ 29.67 ಲಕ್ಷ ರೂ. ಸರ್ಕಾರಿ ಬಾಕಿ ಉಳಿಸಿಕೊಂಡಿದ್ದಾರೆ.

ಒಟ್ಟು ಆಸ್ತಿ ಮೌಲ್ಯ- 36,23,28,889
ನಗದು- 25,059
ಚಿನ್ನಾಭರಣ- 960 ಗ್ರಾಂ ಚಿನ್ನ, 32 ಕೆ.ಜಿ. ಬೆಳ್ಳಿ (42.40 ಲಕ್ಷ ರೂ.)
ಚರಾಸ್ತಿ- 7,62,92,245
ಸ್ಥಿರಾಸ್ತಿ- 25,30,73,500
ಒಟ್ಟು ಸಾಲ- 17,58,03,600

ಸಪ್ತಗಿರಿ ಗೌಡ ಆಸ್ತಿ ವಿವರ
ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಪ್ತಗಿರಿ ಗೌಡ ಒಟ್ಟು ಆಸ್ತಿ 16 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಸಪ್ತಗಿರಿ ಗೌಡ 15 ಕೋಟಿ ರೂ. ಹಾಗೂ ಅವರ ಪತ್ನಿ ಎಸ್‌. ಶ್ರೀಯಾ ಹೆಸರಿನಲ್ಲಿ 89 ಕೋಟಿ ರೂ. ಆಸ್ತಿ ಇದೆ. ಪುತ್ರಿ ಹೆಸರಿನಲ್ಲಿ 10.42 ಲಕ್ಷ ರೂ. ಚರಾಸ್ತಿ ಇದೆ. ಟೋಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಹುಂಡೈ ಕ್ರೇಟಾ ಕಾರುಗಳನ್ನು ಸಪ್ತಗಿರಿ ಗೌಡ ಹೊಂದಿದ್ದಾರೆ. 5 ಕೋಟಿ ರೂ. ಸಾಲವೂ ಅವರ ಮೇಲಿದೆ.

ಒಟ್ಟು ಆಸ್ತಿ 16 ಕೋಟಿ ರೂ.
ನಗದು- 7.94 ಲಕ್ಷ ರೂ.
ಚಿನ್ನಾಭರಣ- 1.632 ಗ್ರಾಂ. (ಮೌಲ್ಯ 46.56 ಲಕ್ಷ)
ಬೆಳ್ಳಿ- 4 ಕೆಜಿ
ಸ್ಥಿರಾಸ್ತಿ- 10.47 ಕೋಟಿ ರೂ.
ಚರಾಸ್ತಿ- 5.58 ಕೋಟಿ ರೂ.
ಒಟ್ಟು ಸಾಲ-5 ಕೋಟಿ ರೂ.

ಲಿಂಬಾವಳಿ ಆಸ್ತಿ ವಿವರ
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅರವಿಂದ ಲಿಂಬಾವಳಿ ಅವರು ಒಟ್ಟು 8.52 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಜತೆಗೆ ಲಿಂಬಾವಳಿ ಅವರ ಪತ್ನಿ ಅವರು 93.95 ಲಕ್ಷ ರೂ. ಚಿರಾಸ್ತಿ, 7.04 ಕೋಟಿ ರೂ. ಸ್ಥಿರಾಸ್ತಿ, 15 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ, 83,400 ರೂ. ಮೌಲ್ಯದ 2 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಇನ್ನು ಪುತ್ರ ಮಯೂರ ಹೆಸರಿನಲ್ಲಿ 25.75 ಲಕ್ಷ ರೂ. ಹಾಗೂ ಪುತ್ರಿ ರೇಣುಕಾ ಹೆಸರಿನಲ್ಲಿ 25.42ಲಕ್ಷ ರೂ. ಚಿರಾಸ್ತಿಯಿದೆ. 

ಒಟ್ಟು ಆಸ್ತಿ ಮೌಲ್ಯ: 8.52 ಕೋಟಿ ರೂ.
ಚಿನ್ನಾಭರಣ: 3.60 ಲಕ್ಷ ರೂ. (120 ಗ್ರಾಂ)
ಬೆಳ್ಳಿ: ಇಲ್ಲ
ಸ್ಥಿರಾಸ್ತಿ: 4,15,00,775
ಚರಾಸ್ತಿ: 4,37,82,484
ಸಾಲ: 2,66,21,951

ಕೆ.ಜೆ.ಜಾರ್ಜ್‌
ಸರ್ವಜ್ಞ ನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಕೆ.ಜೆ.ಜಾರ್ಜ್‌ ಅವರ ಒಟ್ಟು ಆಸ್ತಿ ಮೌಲ್ಯ 89.71 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಪತ್ನಿ ಸುಜಾ ಜಾರ್ಜ್‌ ಹೆಸರಿನಲ್ಲಿ 23.55 ಕೋಟಿ ರೂ. ಚರಾಸ್ತಿ ಹಾಗೂ 12.15 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಯಾವುದೇ ವಾಹನವಿಲ್ಲ ಎಂದು ನಮೂಸಿದ್ದಾರೆ. 46 ಕೋಟಿ ರೂ.ಗಳ ಸಾಲದಲ್ಲಿ 21 ಕೋಟಿ ಸಾಲ ಪತ್ನಿ ಹೆಸರಿನಲ್ಲಿದೆ. ಚಾರ್ಜ್‌ ಬಳಿ 49 ಲಕ್ಷ ಮೌಲ್ಯದಷ್ಟು ವಾಚ್‌ ಇದೆ.  ಪತ್ನಿ ಹೆಸರಿನಲ್ಲಿ 45 ಲಕ್ಷ ಮೌಲ್ಯದಷ್ಟು ಚಿನ್ನಾಭರಣ ಇದೆ.  ಕೇರಳದ ಇಡುಕ್ಕಿ, ಕೊಟ್ಟಾಯಂ ಮೊದಲಾದ ಕಡೆಗಳಲ್ಲಿ ಕೃಷಿ ಭೂಮಿ ಹಾಗೂ ಬೆಂಗಳೂರಿನ ಇಂದಿರಾನಗರ, ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

ಒಟ್ಟು ಆಸ್ತಿ ಮೌಲ್ಯ: 89.71 ಕೋಟಿ ರೂ.
ಮೌಲ್ಯಯುತ ವಾಚ್‌ಗಳು: 49 ಲಕ್ಷ ರೂ.
ನಗದು : 4.30 ಲಕ್ಷ ರೂ ರೂ.
ಚರಾಸ್ತಿ: 64.13 ಕೋಟಿ. ರೂ.
ಸ್ಥಿರಾಸ್ತಿ :25.53 ಕೋಟಿ ರೂ.
ಒಟ್ಟು ಸಾಲ :46.08 ಕೋಟಿ. ರೂ.

Advertisement

Udayavani is now on Telegram. Click here to join our channel and stay updated with the latest news.

Next