Advertisement

29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಂಧನ !

05:29 PM Nov 07, 2022 | Team Udayavani |

ಜಮ್‌ಶೆಡ್‌ಪುರ: ದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಟಾಟಾನಗರ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಆಕೆಯ ಬಳಿಯಿದ್ದ ವಿಷಕಾರಿ ಹಾವುಗಳು, ಹಲ್ಲಿಗಳು ಮತ್ತು ವಿದೇಶಿ ತಳಿಗಳ ಕೀಟಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಭಾನುವಾರ ರಾತ್ರಿ ದೆಹಲಿಗೆ ತೆರಳುವ ನೀಲಾಂಚಲ್ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಆರ್‌ಪಿಎಫ್ ಸಿಬಂದಿ ಶೋಧ ನಡೆಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಹಾವುಗಳು, ಹಲ್ಲಿಗಳು ಮತ್ತು ಕೀಟಗಳನ್ನು ವಶಪಡಿಸಿಕೊಂಡರು.

ವಿದೇಶಿ ತಳಿಯ 29 ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳಲ್ಲಿ ಮೂರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲಾ 25 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಗೂಗಲ್ ಸರ್ಚ್‌ನಿಂದ ತಿಳಿದುಬಂದಿದೆ. ವಶಪಡಿಸಿಕೊಂಡ ಹಲ್ಲಿಗಳ ಬೆಲೆ 10,000 ರಿಂದ 20,000 ರೂ.ಆಗಿದೆ.

ಪುಣೆ ಮೂಲದ 52 ವರ್ಷದ ಮಹಿಳೆ ನಾಗಾಲ್ಯಾಂಡ್‌ನಿಂದ ಸರೀಸೃಪಗಳು, ಹಲ್ಲಿಗಳು ಮತ್ತು ಕೀಟಗಳನ್ನು ಸಂಗ್ರಹಿಸಿದ್ದಾಳೆ ಎಂದು ಹೇಳಿದ್ದು. ನಂತರ ಆಕೆ ದಿಮಾಪುರ್‌ಗೆ ಪ್ರಯಾಣ ಬೆಳೆಸಿ ಅಲ್ಲಿಂದ ದೆಹಲಿಗೆ ರೈಲು ಹಿಡಿಯಲು ಖರಗ್‌ಪುರ ಬಳಿಯ ಹಿಜ್ಲಿ ತಲುಪಿದಳು ಎಂದು ಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.

ಹಾವುಗಳು ವಿಷಕಾರಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಉರಗ ತಜ್ಞರನ್ನು ಕರೆಸಲಾಗಿದ್ದು, ದೃಢೀಕರಣದ ಮೇರೆಗೆ ಅವೆಲ್ಲವನ್ನೂ ಹಲ್ಲಿಗಳೊಂದಿಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next