Advertisement

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

01:44 AM Oct 06, 2024 | Team Udayavani |

ಹೊಸದಿಲ್ಲಿ: ಹರಿಯಾಣ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಗಳು ಪ್ರಕಟವಾಗಿದ್ದು, ಸಮೀಕ್ಷೆ ಪ್ರಕಟಿಸಿದ ಎಲ್ಲ ಸಂಸ್ಥೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿವೆ.

Advertisement

ಚುನಾವಣೆ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು. ದಶಕಗಳಿಂದ ಆಡಳಿತದಲ್ಲಿದ್ದ ಬಿಜೆಪಿಯನ್ನು ಮಣಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಲಿದೆ ಎಂದು ಈ ಸಮೀಕ್ಷೆಗಳು ಹೇಳಿವೆ.

ಸಮೀಕ್ಷೆ ಪ್ರಕಟಿಸಿರುವ ಮ್ಯಾಟ್ರೈಸ್‌, ಬಿಜೆಪಿ 18-24, ಕಾಂಗ್ರೆಸ್‌ 55-62 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಉಳಿದಂತೆ ಸಿ ವೋಟರ್‌ ಬಿಜೆಪಿ 20-28, ಕಾಂಗ್ರೆಸ್‌ 50-58, ದೈನಿಕ್‌ ಭಾಸ್ಕರ್‌ ಬಿಜೆಪಿ 19-29, ಕಾಂಗ್ರೆಸ್‌ 44-54, ಪಿ ಮಾರ್ಕ್‌ ಬಿಜೆಪಿ 31, ಕಾಂಗ್ರೆಸ್‌ 56 ಮತ್ತು ಪೀಪಲ್ಸ್‌ ಪಲ್ಸ್‌ ಬಿಜೆಪಿ 24, ಕಾಂಗ್ರೆಸ್‌ 49 ಸ್ಥಾನ ಗೆಲ್ಲಲಿದೆ ಎಂದು ಹೇಳಿವೆ.

2019ರ ಸಮೀಕ್ಷೆ ನಿಜ: 2019ರ ಮತಗಟ್ಟೆ ಸಮೀಕ್ಷೆ ಗಳು ಬಹುಪಾಲು ನಿಜವಾಗಿದ್ದವು. 8 ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಅಂದಾಜಿಸಿದ್ದವು. ಆದರೆ ಬಿಜೆಪಿ 61 ಸ್ಥಾನಗಳ ಅಂದಾಜಿನ ಬದಲು 40 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಜೆಜೆಪಿ 10, ಕಾಂಗ್ರೆಸ್‌ 31ರಲ್ಲಿ ಗೆದ್ದಿದ್ದವು.

10 ವರ್ಷಗಳಿಂದ ಎಲ್ಲ ವರ್ಗಗಳಿಗಾಗಿ ಕೆಲಸ ಮಾಡಿದ್ದೇವೆ. ಈ ಬಾರಿಯೂ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.
-ನಯಾಬ್‌ ಸಿಂಗ್‌ ಸೈನಿ, ಹರಿಯಾಣ ಸಿಎಂ

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆಯಿದೆ. ಭರ್ಜರಿ ಬಹುಮತದೊಂ ದಿಗೆ ಕಾಂಗ್ರೆಸ್‌ ಸರಕಾರ‌ ರಚಿ ಸಲಿದೆ. ಸಿಎಂ ಹುದ್ದೆ ಹೈಕ­ ಮಾಂಡ್‌ ನಿರ್ಧರಿಸಲಿದೆ.
-ಭೂಪಿಂದರ್‌ ಹೂಡಾ, ಕಾಂಗ್ರೆಸ್‌ ನಾಯಕ

ಜಮ್ಮು-ಕಾಶ್ಮೀರದಲ್ಲಿ ಅತಂತ್ರ ವಿಧಾನ ಸಭೆ ?
ದಶಕದ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನ ಸಭೆ ರಚನೆಯಾಗಲಿದೆ ಎಂದಿವೆ. ಏಕೈಕ ಸಮೀಕ್ಷೆ ಮಾತ್ರ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದಿದೆ.

ಈ ಬಾರಿ ಕಾಂಗ್ರೆಸ್‌- ಎನ್‌ಸಿ ಮೈತ್ರಿಯಲ್ಲಿ ಸ್ಪರ್ಧಿಸಿ­ದ್ದರೆ, ಬಿಜೆಪಿ ಹಾಗೂ ಪಿಡಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ಗೆ ಸಿ ವೋಟರ್‌ (40-48), ಪೀಪಲ್ಸ್‌ ಪಲ್ಸ್‌ (46-50) ಬಹುಮತ ಸಿಗಬಹುದು ಎಂದಿವೆ. ಉಳಿದಂತೆ ದೈನಿಕ್‌ ಭಾಸ್ಕರ್‌ 35-40, ಗಲಿಸ್ಥಾನ್‌ ನ್ಯೂಸ್‌ 31-36, ಆ್ಯಕ್ಸಿಸ್‌ ಮೈ ಇಂಡಿಯಾ 35-45 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿವೆ. ಬಿಜೆಪಿ ಸಿ ವೋಟರ್‌ ಪ್ರಕಾರ 27-32, ದೈನಿಕ್‌ ಭಾಸ್ಕರ್‌ ಪ್ರಕಾರ 22-26, ಗಲಿಸ್ಥಾನ್‌ ನ್ಯೂಸ್‌ 28-30, ಪೀಪಲ್ಸ್‌ ಪಲ್ಸ್‌ 23-27 ಮತ್ತು ಆ್ಯಕ್ಸಿಸ್‌ ಮೈ ಇಂಡಿಯಾ ಪ್ರಕಾರ 23-27 ಸ್ಥಾನ ದೊರೆಯಬಹುದು ಎನ್ನಲಾಗಿದೆ.

ನಿಜವಾಗಿದ್ದ 2014ರ ಸಮೀಕ್ಷೆ: 2014ರಲ್ಲಿ ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದವು. ಪಿಡಿಪಿ ಅಧಿಕಾರ ಹಿಡಿಯಲಿದೆ ಎಂದು ಬಹಳಷ್ಟು ಸಮೀಕ್ಷೆಗಳು ಹೇಳಿದ್ದವು. ಆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ಎನ್‌ಸಿ 15, ಕಾಂಗ್ರೆಸ್‌ 12ರಲ್ಲಿ ಜಯ ಗಳಿಸಿತ್ತು.

ಈ ಎಕ್ಸಿಟ್‌ ಪೋಲ್‌ಗಳನ್ನು ನಂಬಲ್ಲ. ಅ.8ರಂದು ಹೊರಬೀಳುವ ಸಂಖ್ಯೆಯನ್ನಷ್ಟೇ ನಾನು ನಂಬುತ್ತೇನೆ. ಉಳಿದವೆಲ್ಲವೂ ಜಸ್ಟ್‌ ಟೈಂ ಪಾಸ್‌ ಅಷ್ಟೆ.
-ಒಮರ್‌ ಅಬ್ದುಲ್ಲಾ, ಎನ್‌ಸಿ ನಾಯಕ

ಬಿಜೆಪಿಯ ಜನ ವಿರೋಧಿ ಧೋರಣೆ ವಿರುದ್ಧ ಮತ ಚಲಾವಣೆ ಆಗಿದೆ. ಸಮೀಕ್ಷೆಗಿಂತಲೂ ಅ.8ರ ಫ‌ಲಿತಾಂಶ ಮತ್ತಷ್ಟು ರೋಚಕವಾಗಿರಲಿದೆ.
-ತಾರೀಖ್‌ ಹಮೀದ್‌ , ಕಾಶ್ಮೀರ ಕಾಂಗ್ರೆಸ್‌ ಅಧ್ಯಕ್ಷ

ಹರಿಯಾಣ ಚುನಾವಣೆ: ಶೇ.65ರಷ್ಟು ಮತದಾನ

ಚಂಡೀಗಢ: ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಶೇ.65 ಮತದಾನ ದಾಖಲಾಗಿದೆ. 2019ರಲ್ಲಿ ಒಟ್ಟಾರೆ ಶೇ.68.20 ಮತದಾನವಾಗಿತ್ತು. ಅಂದರೆ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಈ ಬಾರಿ ಒಟ್ಟು 1,031 ಅಭ್ಯರ್ಥಿಗಳು ಕಣದಲ್ಲಿದ್ದರು. ಒಂದೆರಡು ಅಹಿತಕರ ಘಟನೆ ಹೊರತುಪಡಿಸಿದರೆ, ರಾಜ್ಯಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. 8ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಆಡಳಿತಾರೂಢ ಬಿಜೆಪಿ ಸತತ 3ನೇ ಅವಧಿಗೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದ್ದು, ದಶಕಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಶತಪ್ರಯತ್ನ ನಡೆಸಿದೆ. ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ, ಬಿಜೆಪಿಯ ಅನಿಲ್‌ ವಿಜ್‌, ಕಾಂಗ್ರೆಸ್‌ನ ಭೂಪಿಂದರ್‌ ಸಿಂಗ್‌ ಹೂಡಾ, ವಿನೇಶ್‌ ಫೋಗಾಟ್‌, ಐಎನ್‌ಎಲ್‌ಡಿಯ ಅಭಯ್‌ ಸಿಂಗ್‌ ಚೌಟಾಲ, ಜೆಜೆಪಿಯ ದುಶ್ಯಂತ್‌ ಚೌಟಾಲ ಸೇರಿದಂತೆ ಪ್ರಮುಖರು ಕಣದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next