ಬೆಂಗಳೂರು : ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಏಕ ಪರದೆ ಚಲನಚಿತ್ರ ಮಂದಿರಗಳಿಗೆ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವುದಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಕಳೆದ ಸಾಲಿನಿಂದ ಕೋವಿಡ್ ಹಿನ್ನಲೆಯಲ್ಲಿ ಕನ್ನಡ ಚಲನಚಿತ್ರರಂಗ ಸಂಕಷ್ಟದಲ್ಲಿದ್ದು ಸೂಕ್ತ ಸಹಾಯ ನೀಡಬೇಕು ಎನ್ನುವ ಚಿತ್ರರಂಗದ ಬೇಡಿಕೆಗೆ ಸ್ಪಂದಿಸಿರುವ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ಚಲನಚಿತ್ರರಂಗದ 22,000 ಕಾರ್ಮಿಕರಿಗೆ ತಲಾ ರೂ. 3,000/- ಧನಸಹಾಯ ಘೋಷಿಸಿದ್ದರು. ಪ್ರಸ್ತುತ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿಗೆ ಮತ್ತೊಮ್ಮೆ ಸ್ಪಂದಿಸಿರುವ ರಾಜ್ಯ ಸರ್ಕಾರ ಏಕ ಪರದೆ ಚಲನಚಿತ್ರ ಮಂದಿರಗಳಿಗೆ ತೆರಿಗೆ ವಿನಾಯಿತಿ ಘೋಷಿಸಿದೆ.
ಸರ್ಕಾರದ ತೆರಿಗೆ ವಿನಾಯಿತಿಯನ್ನು ಸ್ವಾಗತಿಸಿರುವ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ವಾರ್ತಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದೆ.
ಈ ಕುರಿತು ಮಾತನಾಡಿರುವ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಅವರು ರಾಜ್ಯದಲ್ಲಿ ಕೋವಿಡ್-19 ಮಹಾಮಾರಿಯ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚಲನಚಿತ್ರ ಮಂದಿರಗಳನ್ನು ಸುಮಾರು 14 ತಿಂಗಳುಗಳ ಕಾಲ ಮುಚ್ಚಲಾಗಿದ್ದು, ಇದನ್ನೇ ಜೀವನಾಧಾರವಾಗಿಸಿಕೊಂಡ ಮಾಲೀಕರು ಹಾಗೂ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.
ದೇಶದ ಅನೇಕ ರಾಜ್ಯ ಸರ್ಕಾರಗಳು ಆಸ್ತಿ ತೆರಿಗೆ ಪಾವತಿಯನ್ನು ಮನ್ನಾ ಮಾಡಿವೆ. ಮುಂಬರುವ ತಿಂಗಳುಗಳಲ್ಲಿ ಕೋವಿಡ್ 3ನೇ ಅಲೆಯ ಮುನ್ಸೂಚನೆಯ ಎಚ್ಚರಿಕೆಯನ್ನು ನೀಡಿರುವ ಕಾರಣ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ಸಾಧ್ಯತೆಗಳು ತೀರ ಕಡಿಮೆಯಾಗಿದ್ದು, ಈಗಾಗಲೇ ನಷ್ಟದಿಂದ ಅನೇಕ ಚಿತ್ರಮಂದಿರಗಳು ಮುಚ್ಚಿರುತ್ತವೆ.
ರಾಜ್ಯದಲ್ಲಿ ಪ್ರಸ್ತುತ 630 ಏಕಪರದೆ ಚಿತ್ರಮಂದಿರಗಳು ಅಸ್ತಿತ್ವದಲ್ಲಿದ್ದು ಅವರಿಗೆ ಸರ್ಕಾರದ ಈ ತೆರಿಗೆ ವಿನಾಯಿತಿ ಆದೇಶದಿಂದ ಸಹಾಯವಾಗಲಿದೆ ಎಂದು ತಿಳಿಸಿದ ಸಚಿವರು ಕನ್ನಡ ಚಲನಚಿತ್ರರಂಗದ ಮೇಲಿನ ಮುಖ್ಯಮಂತ್ರಿಗಳ ಕಾಳಜಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.