ದಾವಣಗೆರೆ: ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಕಲಚೇತನ ಮತ್ತು ವಿಕಲಚೇತನರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರ್ಣ ಶುಲ್ಕ ವಿನಾಯತಿ ಕಲ್ಪಿಸಲು ಒತ್ತಾಯಿಸಿ ಮಂಗಳವಾರ ಜಿಲ್ಲಾ ಜೆಡಿಎಸ್ ವಿಕಲಚೇತನರ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ. ವಿಕಲಚೇತನರು ಜೀವನ ನಡೆಸಲು ತುಂಬ ಹೋರಾಟ ಮಾಡುವುದರ ಜೊತೆಗೆ ಆರ್ಥಿಕವಾಗಿ ಸ್ಥಿತಿವಂತರಿರುವುದಿಲ್ಲ.
ಮಕ್ಕಳಿಗೆ ವಿದ್ಯೆ ಕೊಡಿಸುವುಕ್ಕೆ ಹಣದ ತೊಂದರೆ ತುಂಬಾ ಇರುತ್ತದೆ. ಆದ ಕಾರಣ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಶುಲ್ಕ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈಗ ಸರ್ಕಾರಿ ಶಾಲೆಗಳಿಗಿಂತ ಹೆಚ್ಚು ಖಾಸಗಿ ಶಾಲೆಗಳು ಇವೆ.
2017-18ನೇ ಸಾಲಿಗೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭಿಸಿರುವ ಮತ್ತು ಪ್ರಾರಂಭಿಸದೇ ಇರುವ ಶಾಲೆಯಲ್ಲಿ ಸರ್ಕಾರದ ನೀತಿ-ನಿಯಮಗಳ ಮೀರಿ ಎಲ್ಲರಿಂದ ಅತಿ ಹೆಚ್ಚಿನ ವಂತಿಗೆ, ಶುಲ್ಕ ವಸೂಲು ಮಾಡಲಾಗುತ್ತಿದೆ. ವಿಕಲಚೇತನರು ಮತ್ತು ವಿಕಲಚೇತನರ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ, ಶುಲ್ಕ ಕಟ್ಟಿ, ವಿದ್ಯಾಭ್ಯಾಸ ಮಾಡುವುದು ಅಸಾಧ್ಯದ ಮಾತಾಗಿದೆ.
ಹಾಗಾಗಿ ವಿಕಲಚೇತನ ಮತ್ತು ವಿಕಲಚೇತನರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರ್ಣ ಶುಲ್ಕ ವಿನಾಯತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಶಿಕ್ಷಣ ಇಲಾಖೆ ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ ನಿಯಮಗಳ ಕುರಿತು ಅನೇಕ ಸುತ್ತೋಲೆ ಹೊರಡಿಸಿದ್ದರೂ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ, ವಂತಿಗೆ ಪಡೆಯುತ್ತಿವೆ.
ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ವರ್ಗದ ತಂಡಗಳಿಂದ ಪರಿಶೀಲಿಸಿಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದನ್ನ ನಿಯಂತ್ರಿಸಬೇಕು. ಜಿಲ್ಲೆಯ ಎಲ್ಲಾ ಬಡ ವರ್ಗದ ವಿದ್ಯಾರ್ಥಿಗಳು ಒಳಗೊಂಡಂತೆ ವಿಕಲಚೇತನರು ಮತ್ತು ವಿಕಲಚೇತನರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ವಿಕಲಚೇತನರ ಘಟಕದ ಅಧ್ಯಕ್ಷ ಟಿ. ವೆಂಕಟೇಶ್ ಕಣ್ಣಾಳರ್, ರಾಜ್ಯ ಹಿರಿಯ ಉಪಾಧ್ಯಕ್ಷ ಟಿ. ಮಹಮ್ಮದ್ ಗೌಸ್, ಟಿ. ಗಣೇಶ್, ಹೊಳಚ್ಚಿ ಹನುಮಂತಪ್ಪ, ಸಿಬತ್‌ವುಲ್ಲಾ, ಎಚ್.ಜೆ. ಹಾಲೇಶಪ್ಪ, ಪಿ. ಉಮೇಶ ಜೋಗಿ, ರಾಮಾಚಾರಿ, ನಾಗರಾಜ್ ಪಾಮೇನಹಳ್ಳಿ, ಐ.ಎಚ್. ಭೀಮೇಶ್‌ಕುಮಾರ್ ಇತರರಿದ್ದರು.