ಬೆಂಗಳೂರು: ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯದ ವಿದ್ಯಾರ್ಥಿಗಳಿಗೂ ಅನುಕೂಲ ಆಗುವಂತೆ ಸರ್ಕಾರ ಒಂದಾವರ್ತಿ ವಿನಾಯ್ತಿ (ಒನ್‌ಟೈಮ್ ರಿಲ್ಯಾಕ್ಸೇಷನ್) ನೀಡಿದೆ.
2023-24ನೇ ಸಾಲಿನ ಬಿಎಸ್ಸಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸಿಇಟಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಿಕ್ಕೂ ವಿದ್ಯಾರ್ಥಿಗಳಿಗೆ ಸರಿಯಾದ ಕಾಲಾವಕಾಶ ಸಿಕ್ಕಿಲ್ಲ. ಇದರಿಂದ ಸಾವಿರಾರು ಅಭ್ಯರ್ಥಿಗಳು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಇಟಿ ಬರೆದವರಿಗೆ ಮತ್ತು ಬರೆಯದವರಿಗೆ ಎರಡೂ ವರ್ಗಗಳಿಗೆ ಅನ್ಯಾಯವಾಗದಂತೆ ಒಂದಾವರ್ತಿ ವಿನಾಯ್ತಿ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಅದರಂತೆ ಸಿಇಟಿ ಬರೆದ ಅಭ್ಯರ್ಥಿಗಳ ಪ್ರವೇಶಕ್ಕೆ ಮೆರಿಟ್ ಆಧಾರದಲ್ಲಿ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು. ನಂತರ ಉಳಿಯುವ ಸೀಟುಗಳಿಗೆ ಆಯಾ ಕಾಲೇಜುಗಳಿಗೆ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಹಂತದಲ್ಲಿ ಸಿಇಟಿ ಬರೆಯದ ವಿದ್ಯಾರ್ಥಿಗಳೂ ಪ್ರವೇಶ ಪಡೆಯಬಹುದಾಗಿದೆ. ಆದರೆ, ಕಡ್ಡಾಯವಾಗಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನದಂಡಗಳನ್ನು ಅನುಸರಿಸಬೇಕು. ಅದರಂತೆ ಪಿಯುಸಿ ವಿಜ್ಞಾನದಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಪಿಸಿಎಂಬಿಯಲ್ಲಿ ಶೇ. 45ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶೇ. 40ರಷ್ಟು ಅಂಕ ಗಳಿಸಿರಬೇಕು ಎಂದು ಹೇಳಿದರು.
ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎಸ್.ವಿ. ಸಂಕನೂರ, ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗೆ ಸಿಇಟಿ ಪರೀಕ್ಷೆಯ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವಸಿದ್ಧತೆಗೂ ಕಾಲಾವಕಾಶ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಮಾಹಿತಿ ಕೂಡ ಇಲ್ಲ. ಈ ಕ್ರಮದಿಂದ ಸಾವಿರಾರು ಅಭ್ಯರ್ಥಿಗಳು ವಂಚಿತರಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಲಾಗಿದೆ. ಅದೇನೇ ಇರಲಿ, ತರಾತುರಿ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ, ಒನ್‌ಟೈಮ್ ವಿನಾಯ್ತಿ ನೀಡಲಾಗಿದೆ. ಎರಡು ಸುತ್ತಿನ ಕೌನ್ಸೆಲಿಂಗ್ ನಂತರ ಉಳಿಯುವ ಸೀಟುಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಾಲೇಜುಗಳು ಹೆಚ್ಚು ಶುಲ್ಕ ನಿಗದಿಪಡಿಸಲು ಬೇಡಿಕೆ ಇಡುತ್ತಿವೆ. 2ರಿಂದ 3 ಲಕ್ಷ ರೂ. ಶುಲ್ಕಕ್ಕೆ ಅನುಮತಿ ಕೇಳುತ್ತಿವೆ. ಇದರಿಂದ ಪೋಷಕರಿಗೆ ಹೊರೆ ಆಗಲಿದ್ದು, ಶುಲ್ಕ ನಿಗದಿಪಡಿಸುವ ಸಂಬಂಧ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಏಪ್ರಿಲ್‌ನಲ್ಲಿ ಪ್ರಕಟಣೆ ಹೊರಡಿಸಿ, ಮೇನಲ್ಲಿ ಈ ಸಂಬಂಧ ಸಿಇಟಿ ನಡೆಸಲಾಗಿತ್ತು. ರಾಜ್ಯದಲ್ಲಿ 33 ಸಾವಿರ ನರ್ಸಿಂಗ್ ಸೀಟುಗಳು ಲಭ್ಯವಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ ಒಟ್ಟು 1.75 ಲಕ್ಷ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.