Advertisement

ವೀರಶೈವ ಮಹಾಸಭೆ ಕಾರ್ಯಕಾರಿ ಸಭೆ ಇಂದು

02:05 AM Aug 02, 2017 | Harsha Rao |

ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತಂತೆ ರಾಜ್ಯದಲ್ಲಿ ವಿವಾದ ಭುಗಿಲೆದ್ದಿರುವ ನಡುವೆಯೇ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ವೀರಶೈವ ಮಹಾಸಭಾ ಇಂದು (ಬುಧವಾರ) ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಯಲಿದ್ದು, ಪ್ರತ್ಯೇಕ ಧರ್ಮ ಹೋರಾಟ
ಕುರಿತಂತೆ ಮಹತ್ವದ ಚರ್ಚೆ ಈ ಸಭೆಯಲ್ಲಿ ನಡೆಯಲಿದೆ.ಈ ಸಭೆಯಲ್ಲಿ ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯವಿರುವ ಆರು ರಾಜ್ಯಗಳಾದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ. ತಮಿಳುನಾಡು, ಕೇರಳ ರಾಜ್ಯಗಳ ವೀರಶೈವ ಮಹಾಸಭಾದ 61 ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Advertisement

ಪ್ರತ್ಯೇಕ ಧರ್ಮ ಕುರಿತಂತೆ ಪರ-ವಿರೋಧ ಚರ್ಚೆಗಳು, ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ವೀರಶೈವ ಮಹಾಸಭೆ ಕರೆದಿರುವ ಈ ಸಭೆಯು ವೀರಶೈವ, ಲಿಂಗಾಯತ ಧರ್ಮ ಸ್ಥಾಪನೆ ಕುರಿತಂತೆ ನಡೆಸುವ ಚರ್ಚೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ, ಎಲ್ಲಾ ಜಿಲ್ಲಾ ವೀರಶೈವ ಮಹಾಸಭ ಘಟಕಗಳ ಅಧ್ಯಕ್ಷರು, ರಾಜ್ಯ
ಪದಾಧಿಕಾರಿಗಳು, ಹೊರ ರಾಜ್ಯಗಳಲ್ಲಿನ ವೀರಶೈವ ಮಹಾಸಭಾದ ಅಧ್ಯಕ್ಷರು ಧರ್ಮ ಸ್ಥಾಪನೆ ಕುರಿತ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು ವೀರಶೈವರನ್ನು ಹೊರತು ಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮವನ್ನು ರಚಿಸಬೇಕೆಂದು ಧ್ವನಿ ಎತ್ತಿರುವುದು, ಇನ್ನೊಂದೆಡೆ ವೀರಶೈವ ಮತ್ತು ಲಿಂಗಾಯತ ಸೇರಿ ಪ್ರತ್ಯೇಕ ಧರ್ಮ ಸ್ಥಾಪಿಸಬೇಕೆನ್ನುವುದು, ಪ್ರತ್ಯೇಕ ಧರ್ಮ ಸ್ಥಾಪನೆಯೇ ಬೇಡ ಎನ್ನುವ ಮತ್ತೂಂದು ವರ್ಗದ ಅಭಿಪ್ರಾಯ ಪ್ರಮುಖವಾಗಿ ಇಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.

ವೀರಶೈವ ಮಹಾಸಭಾದಲ್ಲಿನ ಹೆಚ್ಚಿನ ಪದಾಧಿಕಾರಿಗಳು ವೀರಶೈವ ಮತ್ತು ಲಿಂಗಾಯತವನ್ನು ಒಳಗೊಂಡಂತೆ ಪ್ರತ್ಯೇಕ ಧರ್ಮ ಸ್ಥಾಪಿಸಬೇಕೆನ್ನುವ ತಾತ್ವಿಕ ನಿರ್ಧಾರಕ್ಕೆ ಈಗಾಗಲೇ ಬಂದಿದ್ದಾರೆ. ಹೊರ ರಾಜ್ಯಗಳಲ್ಲಿಯೂ ಸಹ ಅಲ್ಲಿನ ಸಮುದಾಯವನ್ನು ಒಳಗೊಂಡಂತೆ ವೀರಶೈವ ಅಥವಾ ಲಿಂಗಾಯತ ಧರ್ಮ ಸ್ಥಾಪನೆಗೆ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿಯಾಗಿದೆ. ಕರ್ನಾಕಟವೂ ಸೇರಿ ವೀರಶೈವ ಮತ್ತು ಲಿಂಗಾಯತ ಸಮುದಾಯಇರುವ ರಾಜ್ಯಗಳಲ್ಲಿ ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ನಿರ್ಣಯವನ್ನು ಅಂಗೀಕರಿಸಿ ಆಯಾ ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಕೇಂದ್ರ ಸರ್ಕಾರದಲ್ಲಿ ಧರ್ಮ ಸ್ಥಾಪನೆಗಾಗಿ ಬಲವಾದ ಒತ್ತಡ ಹಾಕುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ರಾಜಕೀಯದಿಂದ ದೂರ: ಲಿಂಗಾಯತ ಧರ್ಮ ಸ್ಥಾಪನೆ ಸೂಕ್ಷ್ಮ ವಿಚಾರವಾಗಿರುವುದರಿಂದ ಕರ್ನಾಟಕದಲ್ಲಿ ವೀರಶೈವ
ಲಿಂಗಾಯತ ಸಮುದಾಯ ಅತ್ಯಧಿಕ ಸಂಖ್ಯೆಯಲ್ಲಿರುವುದರಿಂದ ಧರ್ಮದ ರಾಜಕೀಯ ಲಾಭ ಪಡೆಯಲು ಪಕ್ಷಗಳು ತಂತ್ರಗಾರಿಕೆ ಹೆಣೆಯತೊಡಗಿವೆ. ಧರ್ಮದ ಹೋರಾಟದಲ್ಲಿ ರಾಜಕೀಯಕ್ಕೆ ಅವಕಾಶ ನೀಡದೇ ಸಮುದಾಯದ ಹಿತ ದೃಷ್ಠಿಯನ್ನಷ್ಠೆ ಗಮನದಲ್ಲಿಟ್ಟುಕೊಂಡು ಸಭೆ ಚರ್ಚೆ ನಡೆಸಲಿದೆ ಎಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್‌. ತಿಪ್ಪಣ್ಣ ತಿಳಿಸಿದ್ದಾರೆ.
**
ಕೊಪ್ಪಳದಲ್ಲಿ 12 ಸ್ವಾಮೀಜಿಗಳ ನೇತೃತ್ವದಲ್ಲಿ ಚಿಂತನ-ಮಂಥನ

ಕೊಪ್ಪಳ: ವೀರಶೈವ-ಲಿಂಗಾಯತ ಒಂದೇ ಧರ್ಮವಾಗಿದೆ. ಆದರೆ ಈಚೆಗೆ ಇದರಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಮುಂದೆ ನಡೆಯುವ ವೀರಶೈವ ಮಹಾಸಭೆಯಲ್ಲಿ ಒಂದೇ ಧರ್ಮದ ಕುರಿತು ಸಮರ್ಥ ನಿರ್ಣಯ ಪ್ರತಿಪಾದನೆ ಮಾಡಬೇಕು ಎಂದು ನಾಡೋಜ ಡಾ| ಅನ್ನದಾನೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ವೀರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ 12 ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಚಿಂತನ-ಮಂಥನ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಈ ಹಿಂದೆ ಕೇಂದ್ರ ಸರ್ಕಾರಕ್ಕೆ ವೀರಶೈವ ಮಹಾಸಭೆ ತನ್ನ ಪ್ರಸ್ತಾವನೆ ಸಲ್ಲಿಸಿತ್ತು. ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿತ್ತೇ ವಿನಃ ಮತ್ಯಾವ ಕಾರಣದಿಂದಲೂ ಅಲ್ಲ. ಇನ್ನು ಮುಂದಾದರೂ ವೀರಶೈವ ಮಹಾಸಭೆಯು ವೀರಶೈವ-ಲಿಂಗಾಯತ ಎನ್ನುವುದು ಒಂದೇ ಧರ್ಮ ಎನ್ನುವುದನ್ನು ಸಮರ್ಥ ರೀತಿಯಲ್ಲಿ
ಪ್ರತಿಪಾದನೆ ಮಾಡಲಿ. ಹೋಮ, ಯಾಗ, ಹವನ ಎನ್ನುವುದು ವೀರಶೈವದಲ್ಲಿ ಆಚರಣೆಯಲ್ಲಿಲ್ಲ. ನಾವು ಸಂಘಟಿತರಾಗದ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next