Advertisement

ಸುದೀಪ್‌ ಶಿಸ್ತಿನ ನಟ; ಬಾಲಿವುಡ್ ನಟ ಸುನೀಲ್ ಶೆಟ್ಟಿ ಎಕ್ಸ್ ಕ್ಲೂಸಿವ್ ಮಾತು

10:02 AM Sep 05, 2019 | Nagendra Trasi |

ಬಾಲಿವುಡ್‌ನಿಂದ ಸುನೀಲ್‌ ಶೆಟ್ಟಿಯವರನ್ನು ತಮ್ಮ ಸಿನಿಮಾಕ್ಕೆ ಕರೆಸಬೇಕು, ಅವರಿಗೊಂದು ಪ್ರಮುಖ ಪಾತ್ರ ಕೊಡಬೇಕೆಂದು ಅದೆಷ್ಟೋ ಸಿನಿಮಾ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ, ಸುನೀಲ್‌ ಶೆಟ್ಟಿ ಯಾವ ಸಿನಿಮಾವನ್ನು ಒಪ್ಪಿರಲಿಲ್ಲ. ಆದರೆ, ಸುನೀಲ್‌ ಶೆಟ್ಟಿ ಹೆಸರು ಅಧಿಕೃತವಾಗಿ ಕೇಳಿಬಂದಿದ್ದು ಸುದೀಪ್‌ ನಟನೆಯ “ಪೈಲ್ವಾನ್‌’ ಚಿತ್ರದಲ್ಲಿ. ಈ ಚಿತ್ರದಲ್ಲಿ ಸುನೀಲ್‌ ಶೆಟ್ಟಿ ಪ್ರಮುಖ ಪಾತ್ರ ಮಾಡಿದ್ದಾರೆ. ತಮ್ಮ ಪಾತ್ರ, ಸುದೀಪ್‌ ಜೊತೆಗಿನ ಸ್ನೇಹ, ಕನ್ನಡ, ತುಳು ಚಿತ್ರರಂಗದ ಬಗ್ಗೆ ಸುನೀಲ್‌ ಶೆಟ್ಟಿ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ….

Advertisement

*ಕನ್ನಡದಿಂದ ಸಾಕಷ್ಟು ಅವಕಾಶಗಳು ಬಂದರೂ ನೀವು “ಪೈಲ್ವಾನ್‌’ ಚಿತ್ರವನ್ನೇ ಒಪ್ಪಲು ಕಾರಣವೇನು?
– ಮುಖ್ಯವಾಗಿ ಸುದೀಪ್‌ ಜೊತೆಗಿನ ಸ್ನೇಹ. ಅವರೊಟ್ಟಿಗೆ ನನಗೆ ಒಳ್ಳೆಯ ಸಂಬಂಧವಿದೆ. ಸಿನಿಮಾವನ್ನು ತುಂಬಾ ಪ್ರೀತಿಸುವ ವ್ಯಕ್ತಿ ಸುದೀಪ್‌. ಆ ಒಂದು ಕಾರಣವಾದರೆ, ನಾನು ಕೂಡಾ ಸಿನಿಮಾ ಮಾಡದೇ ಗ್ಯಾಪ್‌ ಆಗಿತ್ತು. ಈ ಕಥೆ ಇಷ್ಟವಾಯಿತು ಮತ್ತು ಸರಿಯಾದ ಆಯ್ಕೆ ಎನಿಸಿ ಒಪ್ಪಿದೆ.

*ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ಸುದೀಪ್‌ ಅವರ -ಮೆಂಟರ್‌ ಆಗಿ ನಟಿಸಿದ್ದೇನೆ. ಸುದೀಪ್‌ ಅವರೊಳಗಿನ ಪ್ರತಿಭೆ, ಶಕ್ತಿಯನ್ನು ಗುರುತಿಸಿ ಅವರನ್ನು ತರಬೇತು ಮಾಡುವ ಪಾತ್ರ. ಅದರಾಚೆಗೂ ನಮ್ಮಿಬ್ಬರ ಪಾತ್ರ ತುಂಬಾ ಆಸಕ್ತಿಕರವಾಗಿ ಸಾಗುತ್ತದೆ.

*ಪಾತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?
-ಇಲ್ಲಿ ತಯಾರಿ ಅನ್ನುವುದಕ್ಕಿಂತ ನಾನು ತುಂಬಾ ರಫ್ ಅಂಡ್‌ ಟಫ್ ಆಗಿ ರೆಸ್ಲರ್‌ ತರಹ ಕಾಣಬೇಕಿತ್ತು. ಅದು ಕೇವಲ ಕುಸ್ತಿ ಅಖಾಡದಲ್ಲಷ್ಟೇ ಅಲ್ಲ, ಸಂಭಾಷಣೆ ಇಲ್ಲದಿರುವ ದೃಶ್ಯಗಳಲ್ಲೂ ಖಡಕ್‌ ಆಗಿ ಇರಬೇಕಿತ್ತು.

*ನಿರ್ದೇಶಕ ಕೃಷ್ಣ ಕೆಲಸದ ಬಗ್ಗೆ ಹೇಳಿ?
-ಬ್ರಿಲಿಯಂಟ್‌ ಡೈರೆಕ್ಟರ್‌. ತುಂಬಾ ಪ್ರೀತಿಯಿಂದ  ನಡೆಸಿಕೊಂಡರು. ನಾನು ಕನ್ನಡ ಮಾತನಾಡುವುದಿಲ್ಲ, ತುಳು ಎಂದು ಅವರಿಗೆ ಗೊತ್ತಿತ್ತು. ಅವೆಲ್ಲವನ್ನು ಚೆನ್ನಾಗಿ ಮ್ಯಾನೇಜ್‌ ಮಾಡಿದರು. ಒಳ್ಳೆಯ ನಿರ್ಮಾಣ ಸಂಸ್ಥೆ, ತುಂಬಾ ಖರ್ಚು ಮಾಡಿ ಸಿನಿಮಾ ಮಾಡಿದ್ದಾರೆ. ಅವರಿಗೆ
ಒಳ್ಳೆಯದಾಗಲಿ.

Advertisement

*ಕನ್ನಡದಿಂದ ಬೇರೆ ಆಫ‌ರ್‌ ಬರುತ್ತಿವೆಯಾ?
-ಸಾಕಷ್ಟು ಆಫ‌ರ್‌ ಬರುತ್ತಿವೆ. ಯಾವುದನ್ನು ಒಪ್ಪಿಲ್ಲ. ಎಲ್ಲವನ್ನು ನೋಡಿಕೊಂಡು ಒಪ್ಪುತ್ತೇನೆ. ನನಗೆ ಹಿಂದಿ ಜೊತೆಗೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಬೇಕೆಂಬ  ಆಸೆ. ಆದರೆ, ಆ ಸಿನಿಮಾಗಳು ಹಿಂದಿಯಲ್ಲೂ ಬಿಡುಗಡೆಯಾಗಬೇಕು.

*”ಪೈಲ್ವಾನ್‌’ ಪ್ಯಾನ್‌ ಇಂಡಿಯಾ ರಿಲೀಸ್‌ ಬಗ್ಗೆ?
-ದಕ್ಷಿಣ ಸಿನಿಮಾಗಳು ಎಲ್ಲಾ ಕಡೆಗೆ ಸಲ್ಲುತ್ತವೆ ಎಂಬುದು ಖುಷಿಯ ವಿಚಾರ. ದೇಶದ ಎಲ್ಲಾ ಭಾಗದ ಜನರು ಸೌತ್‌ ಫಿಲಂಗಳನ್ನು ಖುಷಿಯಿಂದ ನೋಡುತ್ತಾರೆ. ಹಾಗಾಗಿಯೇ ಅಷ್ಟೊಂದು ಬಿಝಿನೆಸ್‌ ಆಗುತ್ತದೆ. “ಪೈಲ್ವಾನ್‌’ ಕೂಡಾ ಎಲ್ಲರಿಗೂ ಇಷ್ಟವಾಗುವ ಸಿನಿಮಾ. ಚಿತ್ರದಲ್ಲಿ ಗುರು-ಶಿಷ್ಯರ ಸಂಬಂಧವನ್ನು ಭಾವನಾತ್ಮಕವಾಗಿ ಹೇಳಲಾಗಿದೆ. ಕ್ರೀಡೆ ಬಗ್ಗೆಯೂ ಇದೆ. ಎಲ್ಲಾ ಭಾಗದ ಜನ ಒಪ್ಪುತ್ತಾರೆಂಬ ವಿಶ್ವಾಸವಿದೆ.

* ಮೂಲ ತುಳುನಾಡಿನವರಾದ ನಿಮಗೆ ತುಳು ಸಿನಿಮಾಗಳ ಆಸಕ್ತಿ ಇದೆಯೇ?
ಖಂಡಿತಾ ಇದೆ. ನಾವು ಎಷ್ಟೇ ಬೆಳೆದರೂ ತುಳು ನಮ್ಮ ಹೃದಯಲ್ಲಿರುತ್ತದೆ. ಈಗ ತುಳು ಚಿತ್ರರಂಗ ಕೂಡಾ ಚೆನ್ನಾಗಿ ಬೆಳೆಯುತ್ತಿದೆ ಎಂಬ ವಿಷಯ ನನಗೆ ಖುಷಿ ಕೊಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ತುಳು ಚಿತ್ರ “ಗಿರ್‌ಗಿಟ್‌’ ಚೆನ್ನಾಗಿ ಹೋಗುತ್ತಿದೆ ಎಂಬುದು ಖುಷಿಯ ವಿಚಾರ. ಆ ತಂಡಕ್ಕೆ ನನ್ನ
ಶುಭಾಶಯಗಳು.

*ನಿಮ್ಮ ಮಕ್ಕಳಿಬ್ಬರು ಮುಂದೆ ತುಳು, ಕನ್ನಡದಲ್ಲಿ ನಟಿಸುತ್ತಾರಾ?
-ಮೊದಲು ಅವರು ಹಿಂದಿಯಲ್ಲಿ ಗಟ್ಟಿನೆಲೆ ಕಂಡುಕೊಳ್ಳಬೇಕು. ಅವರದೇ ಆದ ಒಂದು ಆಡಿಯನ್ಸ್‌ ಸೃಷ್ಟಿಯಾಗಬೇಕು. ಆ ನಂತರ ನಾವು ಬೇರೆ ಕಡೆ ಪ್ರಯತ್ನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next