“ಮೊದಲು ಈಗ ಕ್ಯೂನಲ್ಲಿರುವ ಸಿನಿಮಾಗಳು ರಿಲೀಸ್ ಆಗಲಿ, ಆ ನಂತರ ಚಿತ್ರೀಕರಣದ ಬಗ್ಗೆ ಯೋಚಿಸುವ ….’ -ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ನೇರವಾಗಿ ಹೇಳಿದರು. ಅವರ ಮಾತಲ್ಲಿ ಚಿತ್ರರಂಗದ ಬಗೆಗಿನಕಾಳಜಿ ಎದ್ದು ಕಾಣುತ್ತಿತ್ತು.
ಸಿನಿಮಾ ಚಿತ್ರೀಕರಣ ಆರಂಭಿಸುವುದು ದೊಡ್ಡ ವಿಷಯವಲ್ಲ. ಆದರೆ, ಈಗ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಮೊದಲು ರಿಲೀಸ್ ಆಗಿ ಚೆನ್ನಾಗಿ ಹೋಗಲಿ ಎಂಬ ಕಳಕಳಿ ಇತ್ತು. ಏಕೆಂದರೆ ವರ್ಷಾರಂಭದಲ್ಲಿ ಬಿಡುಗಡೆಯಾಗಬೇಕಾಗಿದ್ದ ಸಾಕಷ್ಟು ಸಿನಿಮಾಗಳು ಕೊರೊನಾದಿಂದ ಮುಂದಕ್ಕೆ ಹೋಗುತ್ತಲೇ ಇವೆ. ಯಾವಾಗ ಆ ಸಿನಿಮಾಗಳು ರಿಲೀಸ್ ಆಗುತ್ತವೆ ಎಂಬ ಸ್ಪಷ್ಟತೆ ಇಲ್ಲ. ಬಂಡವಾಳ ಹೂಡಿದ ನಿರ್ಮಾಪಕನಿಗೆ ಹಾಕಿದ ಹಣ ಯಾವಾಗ ವಾಪಾಸ್ ಬರುತ್ತದೆಂದು ಗೊತ್ತಿಲ್ಲ. ಅ ದೇಕಾರಣದಿಂದ ದರ್ಶನ್, “ಮೊದಲು ಸಿನಿಮಾ ರಿಲೀಸ್ ಆಗಲಿ, ಆ ಮೇಲೆ ನೋಡೋಣ’ ಎಂದಿದ್ದು.
ಇದನ್ನೂ ಓದಿ:ಬರ್ತ್‌ಡೇ ಸಂಭ್ರಮದಲ್ಲಿ ಗಣೇಶ್ : ಟೀಸರ್, ಮೋಶನ್ ಪೋಸ್ಟರ್ ಗಿಫ್ಟ್
ನಿಮಗೆ ಗೊತ್ತಿರುವಂತೆ ದರ್ಶನ್ ಅವರ “ರಾಬರ್ಟ್’ ಚಿತ್ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಹಾಗಾದರೆ, ದರ್ಶನ್ ಮತ್ತೆ ಹೊಸ ಸಿನಿಮಾದ ಚಿತ್ರೀಕರಣ ಯಾವಾಗ ಆರಂಭಿಸುತ್ತಾರೆ, ಮತ್ತೆ ಅಖಾಡಕ್ಕೆ ಯಾವಾಗ ಇಳಿಯುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಇದಕ್ಕೆ ಉತ್ತರಿಸುವ ದರ್ಶನ್, “ಚಿತ್ರೀಕರಣ ಆರಂಭಿಸೋದು ದೊಡ್ಡ ವಿಚಾರವಲ್ಲ. ಆದರೆ, ಸದ್ಯಕ್ಕೆ ಚಿತ್ರಮಂದಿರ ಓಪನ್ ಆಗಿಲ್ಲ. ಜೊತೆಗೆ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಆಗಿಲ್ಲ. ಹೀಗಿರುವಾಗ ಚಿತ್ರೀಕರಣ ಆರಂಭಿಸಿ, ನಿರ್ಮಾಪಕರ ಹಣವನ್ನು ಪೋಲು ಮಾಡುವುದು ಸರಿಯಲ್ಲ. ಅವರು ಕೂಡಾ ಕಷ್ಟ ಪಟ್ಟೇ ಸಂಪಾದಿಸಿರುತ್ತಾರೆ. ಅವರದ್ದೇ ದುಡ್ಡು ಆಗಿರಬಹುದು. ಅದಕ್ಕೂ ಒಂದಷ್ಟು ಬಡ್ಡಿ ಬರುತ್ತಲ್ಲ. ಮೊದಲು ಬಿಡುಗಡೆಗೆ ಸಿದ್ಧವಿರುವ ಚಿತ್ರಗಳು ರಿಲೀಸ್ ಆಗಲಿ, ಚಿತ್ರಮಂದಿರ ಓಪನ್ ಆಗಿ, ಜನ ಬರಲಿ. ಆ ನಂತರ ಶೂಟಿಂಗ್ ಬಗ್ಗೆ ನೋಡೋಣ…’ ಎಂಬುದು ದರ್ಶನ್ ಅವರ ಮಾತು.
Related Articles
ದರ್ಶನ್ ಮುಂದಿನ ಚಿತ್ರ ರಾಕ್‌ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ. ಆದರೆ, ಚಿತ್ರಕ್ಕೆ ನಿರ್ದೇಶಕ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ.
ಅದು ಅವರ ದೊಡ್ಡಗುಣ
ರಾಜ್ಯದ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ದರ್ಶನ್ ಅವರು ಇತ್ತೀ ಚೆಗೆ ಮಾಡಿದ ಒಂದೇ ಒಂದು ಮನ ವಿಗೆ ಮೂರೂವರೆ ಕೋಟಿಗೂ ಅಧಿಕ ಹಣ ಹರಿದು ಬಂದಿದ್ದು, ನಿಮಗೆ ಗೊತ್ತೇ ಇದೆ. ದರ್ಶನ್ ಅವರ ಮನವಿಗೆ ಸ್ಪಂದಿಸಿದ ಬಹುತೇಕರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪ್ರಾಣಿ, ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಬಗ್ಗೆ ದರ್ಶನ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಈ ಬಗ್ಗೆ ಮಾತನಾಡುವ ದರ್ಶನ್, “ಇದರಲ್ಲಿ ನನ್ನದೇನು ಇಲ್ಲ, ಎಲ್ಲಾ ಜನರ ದೊಡ್ಡ ಗುಣ. ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ, ಕಾಳಜಿಯಿಂದ ದತ್ತು ತಗೊಂಡಿದ್ದಾರೆ. ಇವತ್ತು ಪ್ರಾಣಿ ಪಕ್ಷಿಗಳು ಅಳಿವಿನಂಚಿನಲ್ಲಿದೆ. ಇರುವುದನ್ನು ಉಳಿಸಿಕೊಳ್ಳೋದು ನಮ್ಮಕರ್ತವ್ಯ. ನನ್ನ ಮಾತಿನಿಂದ ತಗೊಂಡರು ಅನ್ನೋದಕ್ಕಿಂತ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಇತ್ತು. “ದರ್ಶನ್ ನಮಗೆ ಗೊತ್ತು, ಅವರ ಮನವಿಯಂತೆ ತಗೊಳುವ’ ಎಂದು ಒಂದಷ್ಟು ಮಂದಿ ತಗೊಂಡರೆ, ಅದರಾಚೆ ಸಾಕಷ್ಟು ಮಂದಿ ಪ್ರಾಣಿ-ಪಕ್ಷಿಗಳನ್ನು ತಮ್ಮ ಶಕ್ತಿಯಾನುಸಾರ ದತ್ತು ತೆಗೆದುಕೊಂಡಿದ್ದಾರೆ. ಅವರ ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಿಲ್ಲ. ಇದು ಅವರ ಪ್ರಾಣಿ-ಪಕ್ಷಿಗಳ ಮೇಲಿನಕಾಳಜಿಯನ್ನು ತೋರಿಸುತ್ತದೆ’ ಎನ್ನುವುದು ದರ್ಶನ್ ಮಾತು
ರವಿಪ್ರಕಾಶ್ ರೈ