ಚಾಮರಾಜನಗರ: ಸುಮಾರು 3 ವರ್ಷಗಳಿಂದ ಕುಟುಂಬವೊಂದನ್ನು ಅದೇ ಸಮುದಾಯದವರು ಬಹಿಷ್ಕರಿಸಿದ್ದು, ಆ ಕುಟುಂಬದಲ್ಲಿ ವೃದ್ಧರೊಬ್ಬರು ಮೃತಪಟ್ಟರೂ ಶವ ಸಂಸ್ಕಾರಕ್ಕೆ ಗ್ರಾಮದ ಅದೇ ಸಮುದಾಯದವರು ಬಾರದಿರುವ ಘಟನೆ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ನಾಗವಳ್ಳಿ ಗ್ರಾಮದ ರಂಗಶೆಟ್ಟಿ (65) ಅವರು ಭಾನುವಾರ ಮೃತ ಪಟ್ಟಿದ್ದು, ಗ್ರಾಮದಿಂದ ರಂಗಶೆಟ್ಟಿ ಅವರ ಕುಟುಂಬವನ್ನು ಬಹಿಷ್ಕರಿಸಿರುವ ಕಾರಣಕ್ಕಾಗಿ ಶವಸಂಸ್ಕಾರಕ್ಕೆ ಉಪ್ಪಾರ ಸಮುದಾಯದ ಜನರು ಬಾರದೇ ಇರುವ ಘಟನೆ ನಡೆದಿದೆ. ಮೃತರಿಗೆ ಇಬ್ಬರು ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ.
ರಂಗಶೆಟ್ಟಿ ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದು, ಜಮೀನಿನ ವಿಚಾರಕ್ಕೆ ಸಮುದಾಯದವರು ಅವರ ಕುಟುಂಬಕ್ಕೆ ನ್ಯಾಯಪಂಚಾಯಿತಿಯಲ್ಲಿ ಬಹಿಷ್ಕಾರ ಹಾಕಿದ್ದರು. ಸಮುದಾಯದ ಜನರು ಅವರ ಕುಟುಂಬದ ಜೊತೆ ಮಾತನಾಡದಂತೆ ನಿರ್ಬಂಧ ಹೇರಿದ್ದರು. ಈಗ ರಂಗಶೆಟ್ಟಿ ಮೃತಪಟ್ಟಿರುವ ಕಾರಣ ಆ ಸಮುದಾಯದ ಜನರು ಅಂತಿಮ ದರ್ಶನ ಪಡೆಯಲು ಹೋಗಿಲ್ಲ. ಶವ ಸಂಸ್ಕಾರ ದಲ್ಲಿ ಭಾಗವಹಿಸಿಲ್ಲ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮೃತರ ಪತ್ನಿ ಮಹದೇವಮ್ಮ ಅವರು ನಮ್ಮ ಕುಟುಂಬವನ್ನು 3 ವರ್ಷಗಳಿಂದ ಗ್ರಾಮದಲ್ಲಿ ಬಹಿಷ್ಕರಿಸಿರುವ ಕಾರಣ ನಾವು ತೋಟದ ಮನೆಯಲ್ಲಿ ಇದ್ದೆವು. ಈಗ ನನ್ನ ಪತಿ ಮೃತಪಟ್ಟಿದ್ದು, ಸಮುದಾಯದ ಜನರು ಶವ ಸಂಸ್ಕಾರಕ್ಕೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನಾಗವಳ್ಳಿ ಗ್ರಾಮದಲ್ಲಿ ಶಾಮಿಯಾನ ಬಾಡಿಗೆಗೆ ಪಡೆಯಲು ಅವಕಾಶ ಮಾಡಿ ಕೊಟ್ಟಿಲ್ಲ, 20-25 ಜನ ಸಂಬಂಧಿಕರನ್ನು ಬಿಟ್ಟರೆ ಯಾರು ಕೂಡ ಗ್ರಾಮಸ್ಥರು ಬಂದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.ಈ ಸಂಬಂಧ ಮೃತರ ತಮ್ಮ ಗುಂಡಶೆಟ್ಟಿ ನಗರದ ಪೂರ್ವಠಾಣೆಯಲ್ಲಿ ಗ್ರಾಮದ ಉಪ್ಪಾರ ಮುಖಂಡರ ವಿರುದ್ಧ ಶವ ಸಂಸ್ಕಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.