Advertisement

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

01:04 PM Apr 13, 2024 | Team Udayavani |

ಡಿಸ್ನಿ ಸಿನೆಮಾಗಳು ಯಾರಿಗೆ ಇಷ್ಟವಿಲ್ಲ? ಗೊಂಬೆಗಳೇ ಜೀವಂತವಾಗಿವೆಯೆನೋ ಎನ್ನುವಷ್ಟು ಚೆಂದದ ಅನಿಮೆಟೆಡ್‌ ಪಾತ್ರಗಳು, ಪ್ರಾಣಿಗಳಿಗೂ ಸಹ ಭಾಷೆಯನ್ನು ತುಂಬುವ ಕಲೆ, ನಾವು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಬೆರಗಿನ ಜಗತ್ತಿನೊಳಗೆ ನಡೆಯುವ ಕಥೆಗಳು. ಚಿಕ್ಕವರಷ್ಟೇ ಅಲ್ಲ, ವಯಸ್ಕ, ವಯಸ್ಸಾದವರನ್ನು ಸಹ ಈ ಸಿನೆಮಾಗಳ ಆಕರ್ಷಣೆ ಬಿಡಲಾರದು. 1923ರಲ್ಲಿ ವಾಲ್ಟ್ ಡಿಸ್ನಿ ಮತ್ತು ರಾಯ್‌ ಡಿಸ್ನಿ ಎಂಬ ಇಬ್ಬರು ಸಹೋದರರು ವಾಲ್ಟ್ ಡಿಸ್ನಿ ಸ್ಟುಡಿಯೋ ಕಂಪೆನಿಯನ್ನು ಹುಟ್ಟು ಹಾಕಿದರು.

Advertisement

ಅನಿಮೇಷನ್‌ ಚಿತ್ರಗಳಲ್ಲಿ ಲೀಡರ್‌ ಎಂದು ಗುರುತಿಸಿಕೊಂಡಿದ್ದ ವಾಲ್ಟ್ ಡಿಸ್ನಿ ಸ್ಟುಡಿಯೋ ಇಂದಿಗೂ ಆ ಪಟ್ಟವನ್ನು ಅಲಂಕರಿಸಿದೆ. ಇದರ ಮೂಲಕ ಬಂದ ಹಲವಾರು ಸಿನೆಮಾಗಳು ಜನಪ್ರಿಯತೆಗಳಿಸಿ ಡಿಸ್ನಿ ಸಿನೆಮಾ ಎಂದರೆ ಜನರು ಕಾಯುವಂತಾದರು. ಈ ಸಿನೆಮಾಗಳಲ್ಲಿ ಕಾಣಿಸುತ್ತಿದ್ದ ಅದ್ಭುತ ಜಗತ್ತನ್ನು ನಾವೂ ಕಣ್ಣಾರೆ ನೋಡಬೇಕು ಎಂದು ಜನ ಅಪೇಕ್ಷಿಸತೊಡಗಿದಾಗ ಹುಟ್ಟಿಕೊಂಡಿದ್ದು ಥೀಮ್‌ ಪಾರ್ಕ್‌ ಪರಿಕಲ್ಪನೆ. ಈ ಪಾರ್ಕ್‌ಗಳಲ್ಲಿ ಸಿನೆಮಾಗಳಲ್ಲಿ ಇರುವಂತಹದೇ ಸೆಟ್‌ಗಳನ್ನು ನಿರ್ಮಿಸಿ ಜನರಿಗೆ ಆ ಅನುಭವವನ್ನು ಪ್ರತ್ಯಕ್ಷವಾಗಿ ಕೊಡುವ ಇರಾದೆ ಡಿಸ್ನಿ ಕಂಪೆನಿಯದ್ದಾಗಿತ್ತು. ಡಿಸ್ನಿಲ್ಯಾಂಡ್‌ ಎಂಬ ಮೊದಲ ಥೀಮ್‌ ಪಾರ್ಕ್‌ ಶುರುವಾಗಿದ್ದು 1955 ರಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಅನಾಹೇಮ್‌ ಎಂಬಲ್ಲಿ. ಅದಾದ ಮೇಲೆ ಫ್ಲೊರಿಡಾ ರಾಜ್ಯದ ಬೇ ಲೇಕ್‌ ಎಂಬ ಹೆಸರಿನ ಊರಲ್ಲಿ ಡಿಸ್ನಿಲ್ಯಾಂಡ್‌ನ‌ ಬೇರೆ ಬೇರೆ ಪ್ರಕಾರದ ಪಾರ್ಕ್‌ಗಳನ್ನು ತೆರೆದರು.

ಅದರಲ್ಲಿ ಮೊದಲನೆಯದು ಹಾಲಿವುಡ್‌ ಸ್ಟುಡಿಯೋಸ್‌. ಹಾಲಿವುಡ್‌ ಸಿನೆಮಾಗಳ ಲೋಕ ಇಲ್ಲಿ ಪ್ರತ್ಯಕ್ಷವಾಗಿ ತೆರೆದುಕೊಳ್ಳುತ್ತದೆ. ದೂರದ ಅಂತರಿಕ್ಷದಲ್ಲಿ ಸವಾರಿ ಮಾಡಿಸುವ ಸ್ಟಾರ್‌ ವಾರ್ ಲೋಕ, ಟಾಯ್‌ ಸ್ಟೋರಿ ಲ್ಯಾಂಡ್‌ನ‌ಲ್ಲಿ ಕಾಣಿಸುವ ವುಡಿ, ಜೆಸ್ಸಿ, ಬಜ್‌ ಲೈಟ್‌ ಇಯರ್‌ ಪಾತ್ರಗಳು, ಟ್ವಿಲೈಟ್‌ ಝೊàನ್‌ನಲ್ಲಿ ಬೆಚ್ಚಿ ಬೀಳುಸುವಂತಹ ಭಯಾನಕತೆ, ಕಿವಿಗಿಂಪೆನ್ನಿಸುವ ಫ್ರೊಝನ್‌ ಹಾಡು, ಮಂಚದ ಮೇಲೆ ನಡೆಯುವ ಬ್ಯೂಟಿ ಆಂಡ್‌ ದಿ ಬೀಸ್ಟ್‌ ನಾಟಕ…. ಎಲ್ಲದರಿಂದಾಗಿ ಇದು ಬಹಳ ಜನಪ್ರಿಯವಾದ ಪಾರ್ಕ್‌.‌

ಎರಡನೇಯದು ಮ್ಯಾಜಿಕ್‌ ಕಿಂಗ್‌ಡಮ್‌ ಇದು ಸಹ ಮೊದಲಿನದ್ದಷ್ಟೇ ಜನಪ್ರಿಯವಾಗಿದೆ. ಇಲ್ಲಿರುವ ಸಿಂಡ್ರೆಲಾ ಕ್ಯಾಸಲ್‌ ಎಂತಹವರನ್ನು ಸಹ ಆಕರ್ಷಿಸುತ್ತದೆ. ಒಳಗಡೆ ತಿರುಗಾಡಿಕೊಂಡು ನಿಜವಾಗಿಯೂ ಸ್ಕಾಟ್‌ಲ್ಯಾಂಡಿನ ಭವ್ಯ ಕ್ಯಾಸಲ್‌ನಲ್ಲಿ ಓಡಾಡುತ್ತಿದ್ದವೇನೋ ಎಂಬ ಅನುಭವವನ್ನು ದಕ್ಕಿಸಿಕೊಳ್ಳಬಹುದು. ಡಿಸ್ನಿ ಸಿನೆಮಾದ ಹಲವಾರು ಪಾತ್ರಗಳ ವೇಷ ತೊಟ್ಟ ಕಲಾವಿದರು ಇಲ್ಲಿ ಓಡಾಡುತ್ತ ಎಲ್ಲರನ್ನು ಅದರಲ್ಲಿಯೂ ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುತ್ತಾರೆ. ಮಿಕ್ಕಿ ಮೌಸ್‌ ನೋಡಿದ ತತ್‌ಕ್ಷಣ ಓಡಿ ಹೋಗಿ ತಬ್ಬಿಕೊಳ್ಳಬೇಕು ಎನ್ನಿಸದೇ ಇರದು. ಇದರ ಜತೆಗೆ ಬೆಲ್ಲೆ, ಏರಿಯಲ್‌, ಅಲಾದಿನ್‌, ಸಿಂಡ್ರೆಲಾ ಇವರುಗಳನ್ನು ಸಹ ಕಾಣಬಹುದು. ತೆರೆಯ ಮೇಲೆ ನೋಡಿ ಇಷ್ಟ ಪಟ್ಟ ಪಾತ್ರಗಳು ಕಣ್ಣ ಮುಂದೆ ಬಂದಾಗ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಇವರುಗಳನ್ನು ಭೇಟಿಯಾಗಿ ಮಾತನಾಡಿಸುವ ಅವಕಾಶವೂ ಇರುತ್ತದೆ.

Advertisement

ಮಕ್ಕಳಂತೂ ತಮ್ಮಿಷ್ಟದ ಪಾತ್ರಗಳ ವೇಷ ಧರಿಸಿ ತಾವು ಯಾವಾಗ ಅವರನ್ನು ನೋಡುತ್ತೇವೋ ಎಂದು ಕಾಯುತ್ತಿರುತ್ತಾರೆ. ಪ್ರತೀ ದಿನವೂ ಈ ಎಲ್ಲ ಪಾತ್ರಗಳ ಪರೇಡ್‌ ನಡೆಯುತ್ತದೆ. ಎಲ್ಲರನ್ನು ಒಟ್ಟಾಗಿ ನೋಡುವುದು, ಬಗೆಬಗೆಯ ವಾಹನಗಳಲ್ಲಿ ನಿಂತಿರುವ ಅವರತ್ತ ಕೈ ಬೀಸುವುದು, ಸಿಂಡ್ರೆಲಾ ಹೂಮುತ್ತು ಬೀರಿದಾಗ ನಿಂತಲ್ಲೇ ಪುಳಕಗೊಳ್ಳುವುದೆಲ್ಲ ಇಲ್ಲಿ ನಿತ್ಯನೂತನ. ಇದರ ಜತೆಗೆ ಸಿಂಡ್ರೆಲಾ ಕ್ಯಾಸಲ್‌ ಮೇಲೆ ಪ್ರತೀ ಸಂಜೆ ನಿಗದಿತ ಸಮಯಕ್ಕೆ ಹ್ಯಾಪಿಲಿ ಎವರ್‌ ಆಫ್ಟರ್‌ ಎಂಬ ಹೆಸರಿನಲ್ಲಿ ಫೈರ್‌ ವರ್ಕ್ಸ್ ಮಾಡುತ್ತಾರೆ. ಕ್ಯಾಸಲ್‌ನ ಗೋಡೆಯ ಮೇಲೆ ಡಿಸ್ನಿ ಸಿನೆಮಾದ ಅನೇಕ ದೃಶ್ಯಗಳು ಹಾಯುತ್ತಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಕೇಳಿ ಬರುತ್ತಿರುವಾಗಲೇ ಕ್ಯಾಸಲ್‌ನ ತುತ್ತ ತುದಿಯಿಂದ ಪಟಾಕಿಗಳು ಸಿಡಿಯತೊಡಗಿ ಬಗೆಬಗೆಯ ಆಕಾರಗಳನ್ನು ಆಕಾಶದಲ್ಲಿ ಮೂಡಿಸಿ ಬಣ್ಣಗಳನ್ನು ತುಂಬುತ್ತವೆ. ಒಂದು ಕ್ಷಣವೂ ಬಿಡದಂತೆ ದೃಶ್ಯಗಳು ಬರುತ್ತಲೇ ಇದ್ದು ಬಾನೆಲ್ಲ ರಂಗಾಗುವ ಆ ಸಮಯವನ್ನು ಕತ್ತೆತ್ತಿ ನೋಡುತ್ತ ಕಣ್ಣು ತುಂಬಿಸಿಕೊಳ್ಳುವುದಷ್ಟೇ ಕೆಲಸ.

ಡಿಸ್ನಿಲ್ಯಾಂಡ್‌ ಸದಾಕಾಲ ಜನರಿಂದ ತುಂಬಿರುವುದರಿಂದ ಇಲ್ಲಿರುವ ಸವಾರಿಗಳಿಗೆ ಉದ್ದದ ಕ್ಯೂ ಇರುತ್ತದೆ. ನಾವು ಹೋಗಿದ್ದು ಬೇಸಗೆಯಲ್ಲಿ. ಆ ಸಮಯದಲ್ಲಂತೂ ಒಂದೊಂದು ಸವಾರಿಗೆ ಒಂದೊಂದು ಗಂಟೆ ಕಾಯಬೇಕಿತ್ತು. ನಿಂತು ಕಾಲುಗಳು ಸೋತು ಹೋಗಿದ್ದವು. ಬೆಳಗ್ಗಿನಿಂದ ಸಂಜೆಯವರೆಗೆ ದಣಿದಿದ್ದ ನಮಗೆ ಸಂಜೆಯ ಹೊತ್ತಿನಲ್ಲಿ ಈ ಹ್ಯಾಪಿಲಿ ಎವರ್‌ ಆಫ್ಟರ್‌ ಶೋ ನೋಡಿ ಇಡೀ ದಿನದ ಆಯಾಸವೆಲ್ಲ ಕರಗಿ ಹೋಗಿತ್ತು. 189 ಅಡಿಗಳ ಎತ್ತರದ ಆ ಅರಮನೆಯನ್ನು ನೋಡುವುದೇ ಚೆಂದ. ಅಂತಹದ್ದರಲ್ಲಿ ಅದರ ಮೇಲೆ ದೃಶ್ಯಗಳು ಕಾಣಿಸತೊಡಗಿದಾಗ ಜತೆಗೆ ಬಾನಿನಲ್ಲಿ ಮೂಡುತ್ತಿದ್ದ ಚಿತ್ತಾರವನ್ನು ನೋಡುವಾಗ ಅದೊಂದು ಅವಿಸ್ಮರಣೀಯ ಅನುಭವವಾಗಿತ್ತು. ಸಾವಿರಾರು ಜನ ಸೇರಿದ್ದರೂ ಅದು ಮುಗಿಯುವವರೆಗೂ ಗಾಢ ಮೌನ ಆವರಿಸಿತ್ತು.

ಮೂರನೇಯದು ಅನಿಮಲ್‌ ಕಿಂಗ್‌ಡಮ್‌ . ಡಿಸ್ನಿ ಸ್ಟುಡಿಯೋಸ್‌ನಿಂದ ಪ್ರಾಣಿಗಳ ಮೇಲೆ ಬಂದಿರುವ ಸಾಕಷ್ಟು ಅನಿಮೇಟೆಡ್‌ ಸಿನೆಮಾಗಳಿವೆ. ನಾಯಿಗಳು ಮುದ್ದಾಗಿ ಮಾತನಾಡುವ, ದೈತ್ಯ ಗಾತ್ರದ ಗೊರಿಲ್ಲಾಗಳು ದುಷ್ಟ ಮನುಷ್ಯರೊಂದಿಗೆ ಹೊಡೆದಾಡುವ, ದಟ್ಟ ಕಾಡಿನಲ್ಲಿ ಕಳೆದು ಹೋಗುವ ಪುಟ್ಟ ಹುಡುಗನನ್ನು ಪ್ರಾಣಿಗಳು ತಮ್ಮವನಂತೆಯೇ ಪಾಲಿಸಿ ಪೋಷಿಸುವ, ಮರಗಳು ಮಾತನಾಡುತ್ತ ಸಹಬಾಳ್ವೆಯಲ್ಲಿ ಬದುಕುವ ಇನ್ನೂ ಅನೇಕ ಹೊಸಬಗೆಯ ಕಲ್ಪನೆಗಳನ್ನು ಈ ಸಿನೆಮಾಗಳಲ್ಲಿ ಕಾಣಬಹುದು. ಅಂತಹ ಸಿನೆಮಾಗಳ ಅನುಭವವನ್ನು ನೀಡುತ್ತದೆ ಈ ಅನಿಮಲ್‌ ಕಿಂಗಡಮ್‌ ಪಾರ್ಕ್‌.

ಪ್ರಪಂಚದಲ್ಲಿರುವ ಎಲ್ಲ ಜೀವಿಗಳನ್ನು ಆರಾಧಿಸುವ ಕಲ್ಪನೆಯಲ್ಲಿ ನಿರ್ಮಿಸಿರುವ ಟ್ರೀ ಆಫ್ ಲೈಫ್, ಇಲ್ಲಿನ ಮರಗಳ ಮೇಲೆ ಮೂನ್ನೂರಕ್ಕು ಹೆಚ್ಚು ಪ್ರಾಣಿಗಳ ಕೆತ್ತನೆಯನ್ನು ಕಾಣಬಹುದು. ಫೈಂಡಿಂಗ್‌ ನೀಮೋ ಇದು ಡಿಸ್ನಿಯ ಬಹಳ ಜನಪ್ರಿಯ ಸಿನೆಮಾ. ಸಮುದ್ರದಲ್ಲಿ ತನ್ನ ತಂದೆ-ತಾಯಿಗಳಿಂದ ಬೇರೆಯಾಗುವ ನೀಮೋ ಎಂಬ ಪುಟ್ಟ ಮೀನನ್ನು ಹುಡುಕುವ ಈ ಸಿನೆಮಾದ ಅನುಭವವನ್ನು ಸಹ ಇಲ್ಲಿ ಪಡೆಯಬಹುದು. ಒಳಗೆ ಹೋದರೆ ಸಮುದ್ರದೊಳಗೆ ಇದ್ದೇವೇನೋ ಎನ್ನುವಂತಹ 3ಡಿ ಸೆಟ್‌, ನೀಮೋ ವೇಷ ಧರಿಸಿದ ವ್ಯಕ್ತಿ ಮತ್ತು ಅವನನ್ನು ಹುಡುಕುವ ಅವನ ತಂದೆ ತಾಯಿ ಮೀನುಗಳ ವೇಷ ಧರಿಸಿದ ವ್ಯಕ್ತಿಗಳು ಸಿನೆಮಾದಲ್ಲಿರುವಂತೆಯೇ ಭಾವಾಭಿನಯ ಮಾಡುತ್ತ ರಂಜಿಸುತ್ತಾರೆ. ರೈಡ್‌ ಒಂದರ ಮೂಲಕ ಅವತಾರ ಸಿನೆಮಾದ ಅನುಭವ, ಪ್ರಾಣಿಗಳನ್ನು ಕಾಣುವ ಸಫಾರಿಗಳು, ಜಲಪಾತಗಳ ವೀಕ್ಷಣೆ, ಗೊರಿಲ್ಲಾಗಳ ಜತೆ ಭೇಟಿ, ಕಾಡಿನಲ್ಲಿರುವ ಹುಲಿಯನ್ನು ನೋಡುವ ಅವಕಾಶ ಎಲ್ಲವೂ ಇಲ್ಲಿದೆ.

ಗಾರ್ಡಿಯನ್ಸ್‌ ಆಫ್ ಗೆಲಾಕ್ಸಿ ಸಿನೆಮಾದ ಅಭಿಮಾನಿಗಳು ಎಪ್ಕಾಟ್‌ ಪಾರ್ಕ್‌ಗೆ ಹೋಗಲೇಬೇಕು. ಸವಾರಿಯೊಂದು ಗ್ಯಾಲಾಕ್ಸಿಯಲ್ಲಿದ್ದೇನೋ ಎನ್ನುವಂತಹ ಅನುಭವ ನೀಡುತ್ತದೆ. ನೀರಿನ ಮೂಲವನ್ನು ಹುಡುಕಬಾರದಾದರೂ ಇಲ್ಲಿ ಸಿಗುವ ಜರ್ನಿ ಆಫ್ ವಾಟರ್‌ ಅನ್ನು ತಪ್ಪಿಸಿಕೊಳ್ಳಲಾಗದು. ಈಗೀಗ ಸ್ಪೆಸ್‌ಶಿಪ್‌ಗಳ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಇಂತಹ ಒಂದು ಸ್ಪೆಸ್‌ ಶಿಪ್‌ ಎಪ್ಕಾಟ್‌ನಲ್ಲಿ ಕಾಣಿಸುತ್ತದೆ. ಅಷ್ಟೇ ಅಲ್ಲ ಮಂಗಳ ಗ್ರಹಕ್ಕೂ ಇಲ್ಲಿ ಹೋಗಿಬರಬಹುದು!

ಪ್ರತೀಯೊಂದು ಪಾರ್ಕ್‌ಗೂ ಪ್ರತ್ಯೇಕವಾದ ಟಿಕೆಟ್‌ಗಳು. ಒಂದು ಪಾರ್ಕ್‌ನಲ್ಲಿರುವ ಎಲ್ಲ ಆಕರ್ಷಣೆಗಳನ್ನು, ಸವಾರಿಗಳನ್ನು ನೋಡಿ ಮುಗಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಸಮಯಕ್ಕೆ ತಕ್ಕಂತೆ, ಬಜೆಟ್‌ಗೆ ತಕ್ಕಂತೆ ಮತ್ತು ತಮ್ಮ ಅಭಿರುಚಿಗೆ ತಕ್ಕಂತೆ ಪಾರ್ಕ್‌ಗಳನ್ನು ಆಯ್ದುಕೊಂಡು ನೋಡಬಹುದು. ಒಂದು ವಾರದ ಕಾಲ ಬಿಡುವಿದ್ದರಂತೂ ಕುಟುಂಬದವರೊಂದಿಗೆ ಅನುಕೂಲ ಮಾಡಿಕೊಂಡು ಎಲ್ಲ ಪಾರ್ಕ್‌ಗಳನ್ನು ನೋಡಿಕೊಂಡು ಬರಬಹುದು.

*ಸಂಜೋತಾ ಪುರೋಹಿತ್‌

Advertisement

Udayavani is now on Telegram. Click here to join our channel and stay updated with the latest news.

Next