Advertisement

ಜಿಲ್ಲೆಯಾದ್ಯಂತ ಸಂಭ್ರಮದ ಕಾರಹುಣ್ಣಿಮೆ

11:32 AM Jun 29, 2018 | |

ವಿಜಯಪುರ: ಜಿಲ್ಲೆಯ ರೈತರ ಮೊಗದಲ್ಲಿ ಎಲ್ಲಿಲ್ಲದ ಸಂಭ್ರಮ. ಮೋಡ ಕವಿದ ತುಂತುರು ಮಳೆಯ ತಣ್ಣನೆಯ ವಾತಾವರಣದಲ್ಲಿ ಗುರುವಾರ ತಮ್ಮ ನೆಚ್ಚಿನ ಎತ್ತು-ಹೋರಿಗಳಿಂದ ಕರಿ ಹರಿಯುವ ಮೂಲಕ ಕಾರಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

Advertisement

ಕಾರಹುಣ್ಣಿಮೆ ಹಬ್ಬಕ್ಕಾಗಿ ಬೆಳಿಗ್ಗೆಯೇ ಎದ್ದು ರೈತರು ತಮ್ಮ ಆಕಳು, ಎತ್ತು, ಹೋರಿ, ಕರುಗಳನ್ನು ಮೈತೊಳೆದು ಕೊಂಬು, ಬೆನ್ನು-ಹೊಟ್ಟೆ ಬಾಲಕ್ಕೆ ಬಣ್ಣ ಹಚ್ಚಿ, ಕೊರಳಿಗೆ ಬಗೆ ಬಗೆಯ ಸದ್ದು ಮಾಡುವ ಗಂಟೆ, ದೊಡ್ಡ ಗೆಜ್ಜೆ ಕಟ್ಟಿದ್ದರೆ, ಕಾಲಿಗೆ ಗೆಜ್ಜೆಗಳ ಸರ ಕಟ್ಟಿ ಶೃಂಗಾರಗೊಳಿಸಿ ಪೂಜೆ ಸಲ್ಲಿಸಿದರು.
 
ನಗರದ ಕನಕದಾಸ ಬಡಾವಣೆ ವಿಶಾಲ ಮೈದಾನದಲ್ಲಿ ಗೋಧೂಳಿ ಸಂಜೆಯಲ್ಲಿ ಜೋಡು ಎತ್ತುಗಳ ಚಕ್ಕಡಿ,
ಒಂಟೆತ್ತಿನ ಚಕ್ಕಡಿ, ಎತ್ತು-ಕುದುರೆಗಳ ಚಕ್ಕಡಿ ಜೋಡಿ ಹೀಗೆ ವಿವಿಧ ರೀತಿಯಲ್ಲಿ ಎತ್ತುಗಳ ಓಟದ ಸ್ಪರ್ಧೆಯ
ಮೂಲಕ ಕಾರಹುಣ್ಣಿಮೆಯ ಕರಿ ಹರಿಯುವ ಹಬ್ಬವನ್ನು ಆಚರಿಸಿದರು. ಒಂದು ಎತ್ತು-ಒಂದು ಕುದುರೆ
ಕಟ್ಟಿ ಜೋಡೆತ್ತಿನ ಚಕ್ಕಡಿ ಸ್ಪರ್ಧೆಯಲ್ಲಿ ಪಾಲ್ಗೊಂಡ ರೈತರೊಬ್ಬರು ಗಮನ ಸೆಳೆದರು. ಮತ್ತೂಬ್ಬ ರೈತ ಜೋಡಿ
ಕುದುರೆ ಚಕ್ಕಡಿ ಓಡಿಸುವ ಮೂಲಕ ನೆರೆದ ಪ್ರೇಕ್ಷಕರ ಇಮ್ಮಡಿಗೊಳಿಸಿದರು.

ಮತ್ತೂಂದೆಡೆ ಎತ್ತುಗಳ ಮಾಲೀಕರ ಚಕ್ಕಡಿ ಸ್ಪರ್ಧೆಗಳಿಗೆ ನೆರೆದ ಪ್ರೇಕ್ಷಕರು ಕೇಕೆ ಹಾಕಿ, ಸಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ರೈತರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದರು. ಬಣ್ಣ-ಬಣ್ಣಗಳಿಂದ ಅಲಂಕೃತಗೊಂಡ ಎತ್ತುಗಳು
ಉತ್ಸಾಹದಲ್ಲಿ ಮಿಂದೆದ್ದು ಓಟದಲ್ಲಿ ತಲ್ಲೀನವಾಗಿದ್ದವು. ಈ ಓಟವನ್ನು ಅತ್ಯಂತ ರೋಚಕತೆಯಿಂದ ವೀಕ್ಷಿಸಲು
ಕೆಲವು ಯುವಕರಂತೂ ಸುತ್ತಮುತ್ತಲಿನ ಗಿಡ-ಮರವೇರಿ ರೋಮಾಂಚನ ಮೂಡಿಸುವ ಚಕ್ಕಡಿ ಕರಿ ಓಟದ ಸ್ಪರ್ಧೆ
ವೀಕ್ಷಿಸಿದರು. ಕಳೆದ ಹಲವಾರು ವರ್ಷಗಳಿಂದ ಕಾರಹುಣ್ಣಿಮೆಯಲ್ಲಿ ನನ್ನ ನೆಚ್ಚಿನ ಎತ್ತುಗಳೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ರೈತರಿಗೆ ತನ್ನ ಜೀವಕ್ಕೆ ಜೀವ ಎನಿಸಿರುವ ಎತ್ತುಗಳಿಗೂ ಸಂತಸ ನೀಡುವ ಓಟದ ಸ್ಪರ್ಧೆ ಆಯೋಜಿಸುವ ಏಕೈಕ ಹಬ್ಬ ಕಾರಹುಣ್ಣಿಮೆ ಎಂದು ಜೋರಾಪುರ ಪೇಟೆಯ ರೈತ ತನ್ನ ಸಂತಸ ಹಂಚಿಕೊಂಡ.

ಸಂಭ್ರಮದ ಕಾರ ಹುಣ್ಣಿಮೆ: ವಿಜಯಪುರದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಕಾರ ಹುಣ್ಣಿಮೆ ಆಚರಿಸಿದರು. ಈ
ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿರುವ ರೈತ ಹೊಸ ಉತ್ಸಾಹದಿಂದ ಕಾರ ಹುಣ್ಣಿಮೆಯ ಸಂಭ್ರಮದಲ್ಲಿ
ತೊಡಗಿದರು.

ಚೈತ್ರ ಮಾಸದ ಮೊದಲ ದಿನ ಗುರುವಾರ ಜಿಲ್ಲೆಯಾದ್ಯಂತ ರೈತರು ಕಾರಹುಣ್ಣಿಮೆ ಕರಿ ಹರಿಯುವ
ಕೃಷಿಕರ ಸಾಂಪ್ರಾದಾಯಿಕ ಹಬ್ಬದ ಆಚರಣೆಗಾಗಿ ಎತ್ತುಗಳನ್ನು ಪೂಜಿಸಿ, ಸಿಂಗರಿಸಿ ಕರಿ ಹರಿಯುವ ಹಬ್ಬವನ್ನು
ಸಂಭ್ರಮಿಂದ ವಿಶಿಷ್ಟವಾಗಿ ಆಚರಿಸಿದರು. ಕೃಷಿ ಬದುಕಿನಲ್ಲಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ತಮ್ಮ ಸಂತಸ-ಸಂಕಷ್ಟಗಳನ್ನೆಲ್ಲ ಕಂಡಿರುವ ಜಾರುವಾರುಗಳು ಅದರಲ್ಲೂ ಎತ್ತು-ಹೋರಿಗಳನ್ನು ಕಾರಹುಣ್ಣಿಮೆ ದಿನ ಮೈತೊಳೆದು, ಸಿಂಗರಿಸಿ, ಪೂಜಿಸಿ, ಕರಿ ಹರಿಯುವ ಮೂಲಕ ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಮುಂದಾದರು.

Advertisement

ಆಲಮೇಲದಲ್ಲಿ ಜೋಡೆತ್ತಿನ ಬಂಡಿಯಿಂದ ಕರಿ ಹರಿಯುವ ಸಂಭ್ರಮ 
ಆಲಮೇಲ: ರೈತರ ವರ್ಷದ ಮೊದಲನೇ ಹಬ್ಬ ಕಾರಹುಣ್ಣಿಮೆಯನ್ನು ರೈತರು ಸಂಭ್ರಮ ಸಡಗರದಿಂದ ಜೋಡೆತ್ತಿನ
ಬಂಡಿ ಓಡಿಸುವ ಮೂಲಕ ಆಚರಣೆ ಮಾಡಿದರು.

ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದಲ್ಲಿ ಪಂಚ ಲೋಹಗಳ ಬಂಡಿಗಳು ಓಡಿಸಿ ಕರಿ ಹರಿಯುವ ಆಚರಣೆ ನಡೆಯುತ್ತಿದೆ.
ಎರಡು ಬಂಡಿಗಳು 5 ಸುತ್ತು ಸುರಳಿತವಾಗಿ ಕರಿ ಹರಿದರೆ ಗ್ರಾಮಕ್ಕೆ ಮತ್ತು ರೈತರಿಗೆ ಮಳೆ ಬೆಳೆ ಉತ್ತಮವಾಗಿ ಆಗುತ್ತದೆ ಎಂದು ಇಲ್ಲಿನ ಜನರ ನಂಬಿಕೆ. ಆಲಮೇಲದಲ್ಲಿ ನಡೆಯಲಿರುವ ಕಾರಹುಣ್ಣಿಮೆಯ ಕರಿಹರಿಯು
ಸಾಂಪ್ರದಾಯವನ್ನು ಇಲ್ಲಿನ ಪ್ರಮುಖ ಮನೆತನಗಳಾದ ದೇಶಮುಖ ಮತ್ತು ದೇಶಪಾಂಡೆಯವರ ಮನೆತನದ
ಸಹೋದರಿಯರ ಲಕ್ಷ್ಮೀ ಬಂಡಿಗಳ ಮೂಲಕ ಕರಿ ಹರಿಯುವ ಆಚರಣೆ ಇಲ್ಲಿನ ಸಂಪ್ರದಾಯ. ಪೀರ ಗಾಲೀಬ
ಸಾಬ ದರ್ಗಾದ ಎದುರು ಮೈದಾನದಲ್ಲಿ 5 ಸುತ್ತು ಓಡಿಸಿ ನಂತರ ಮನೆಗೆ ಹೋಗುವಾಗ ಗ್ರಾಮದ ದಕ್ಷಿಣ ದಿಕ್ಕಿನ
ದೇವರ ಅಗಸಿ ಬಾಗಿಲಿನಲ್ಲಿ ಸಾಂಕೇತಿಕ ಕರಿ ಹರಿಯಲಾಯಿತು.

ಪ್ರಮುಖ ಎರಡು ಮನೆತನದ ಒಡೆಯರುಗಳು ಆಗಮಿಸಿ ಬಂಡಿ ಓಡಿಸಲು ಚಾಲನೆ ನೀಡಿದರು. ಈ ಎರಡು ಜೋಡಿ
ಎತ್ತಿನ ಬಂಡಿಗಳಿಗೆ ಗ್ರಾಮಸ್ಥರೆ ಎತ್ತುಗಳನ್ನು ಕಟ್ಟುತ್ತಾರೆ. ಈ ವರ್ಷ ದೇಶಮುಖರ ಮನೆತನದ ಲಕ್ಷ್ಮೀ ಬಂಡಿಗೆ ಚಂದ್ರಕಾಂತ ಜಮಾದಾರ ಎತ್ತುಗಳನ್ನು ಕಟ್ಟಿದ್ದಾರೆ. ದೇಶಪಾಂಡೆಯವರ ಬಂಡಿಗೆ ಗಾಲೀಬ ಚಂದ್ರಾಮ ಭೋವಿ ಅವರ ಎತ್ತುಗಳು ಕಟ್ಟಿದ್ದಾರೆ.

ಎರಡು ಬಂಡಿಗಳು ಮೆರವಣಿಗೆ ಮುಖಾಂತರ ದೇಶಮುಖರ ಮನೆಗೆ ಎತ್ತುಗಳನ್ನು ಕರೆ ತಂದು ನಂತರ ವಾಲೀಕಾರರು, ತಳವಾರರು, ಯಂಟಮಾನರು ಹಾಗೂ ಗ್ರಾಮಸ್ಥರು ಬಂಡಿ ಕಟ್ಟಿ ದುರಸ್ತಿಗೊಳಿಸಿದ ನಂತರ
ದೇಶಮುಖ ಮನೆತನದ ಲಕ್ಷ್ಮೀ ಬೆಳಗ್ಗೆ ಗ್ರಾಮದ ಹಳ್ಳಕ್ಕೆ ಹೋಗಿ ಸ್ನಾನ ಮಾಡಿಸಿಕೊಂಡು ಪೂರ್ವ ದಿಕ್ಕಿಗಿರುವ
ದೇವಣಗಾಂವ ರಸ್ತೆಗೆ ಹೊಂದಿರುವ ಅಗಸಿಯಲ್ಲಿ ಮೀಸಲು ಕರಿ ಹರಿಯುವ ಮುಖಾಂತರ ಆರಂಭಗೊಂಡಿತು. ಬೆಳಗ್ಗೆ
ಮೀಸಲು ಕರಿಹರಿದು ಬರುವಾಗ ಗ್ರಾಮದ ಪ್ರತಿ ಮನೆಯಿಂದಲು ಬಂಡಿಗೆ ಪೂಜೆ ಪುನಸ್ಕಾರ ಕೈಗೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next