Advertisement

ಸಂಭ್ರಮದ ಕೊಂಚೂರು ಹನುಮಾನ ರಥೋತ್ಸವ

12:23 PM Dec 23, 2018 | Team Udayavani |

ವಾಡಿ: ಭಕ್ತ ಸಾಗರದ ಮಧ್ಯೆ ಶನಿವಾರ ಸಂಜೆ ಕೊಂಚೂರು ಶ್ರೀ ಹನುಮಾನ ರಥೋತ್ಸವ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆ ಭಕ್ತರು ತೇರಿಗೆ ಬಾರೆಕಾಯಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.

Advertisement

ದರ್ಶನಕ್ಕಾಗಿ ಬೆಳಗ್ಗೆಯಿಂದ ಶ್ರೀ ಹನುಮಾನ ಮಂದಿರದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಭಕ್ತರು, ಸಾಲುಗಟ್ಟಿ ಕಾಯಿ-ಕರ್ಪೂರ, ನೈವೇದ್ಯ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ವಿಶೇಷವಾಗಿ ಮಾರವಾಡಿ ಸಮಾಜದ ಭಕ್ತರು ಹನುಮಾನ ದೇವರ ಪಲ್ಲಕ್ಕಿ ಹೊತ್ತು ಸಂಪ್ರದಾಯ ಪಾಲಿಸಿದರು. ನಂದಿಕೋಲು ಮತ್ತು ಕೇಸರಿ ಧ್ವಜದ ಸಾಕ್ಷಿಯಾಗಿ ತೇರು ಸಾಗಿತು. 

ಲಾಟಿ ರುಚಿಯುಂಡ ಭಕ್ತರು: ದೇವಸ್ಥಾನದ ಎದುರಿನ ರಥ ಬೀದಿಯಲ್ಲಿ ತೇರು ಸಾಗುತ್ತಿದ್ದಂತೆ ಭಕ್ತರು ಬಾರೆಕಾಯಿ ಮತ್ತು ಬಾಳೆ ಹಣ್ಣಿನ ಸುರಿಮಳೆ ಸುರಿಸಿದರು. ನೂರಾರು ಜನ ಭಕ್ತರು ರಥದ ಚಕ್ರಗಳ ಹಿಂದೆ ಓಡುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು. ಈ ಮಧ್ಯೆ ಕೆಲ ಪುಂಡ ಹುಡುಗರು ತೇರಿಗೆ ಬಾಳೆಕಾಯಿ ಎಸೆಯುವ ಬದಲು ಕಬ್ಬಿನ ತುಂಡುಗಳನ್ನು ಎಸೆಯಲು ಶುರುಮಾಡಿದರು. ಕೆಲವರು ಕಬ್ಬಿನ ಏಟಿಗೆ ಗಾಯಗೊಂಡರು. ತಕ್ಷಣ ಜಾಗೃತರಾದ ರಥೋತ್ಸವದ ರಕ್ಷಣೆಗೆ ನಿಂತಿದ್ದ ಪೋಲಿಸರು ಭಕ್ತರನ್ನು ಚದುರಿಸಲು ಲಾಟಿ ಬೀಸಿದರು. ಅನೇಕ ಜನ ಭಕ್ತರು ಪೊಲೀಸರ ಲಾಟಿಯ ರುಚಿಯುಂಡ ಬಳಿಕ ತೇರಿನಿಂದ ದೂರ ಸರಿದ ಪ್ರಸಂಗ
ನಡೆಯಿತು. 

 ಏಲಾಂಬಿಕೆ ದೇವಿಗೆ ಹಡ್ಡಲಗಿ: ಕೊಂಚೂರು ಪಕ್ಕದ ಬಳವಡಗಿ ಗ್ರಾಮದಲ್ಲಿ ಇದೇ ವೇಳೆ ಏಕಕಾಲಕ್ಕೆ ಶ್ರೀ ಏಲಾಂಬಿಕೆ ದೇವಿ ಜಾತ್ರೆ ನಡೆಯಿತು. ಕೊಂಚೂರಿಗೆ ಬರುವ ಮುನ್ನ ಭಕ್ತರು, ಐತಿಹಾಸಿಕ ಶ್ರೀ ಏಲಾಂಬಿಕೆ ದೇವಿಗೆ ಜೋಳದ ಕಡಬು, ಪುಂಡಿಪಲ್ಲೆ, ಹೋಳಿಗೆ, ತರಕಾರಿ ಪಲ್ಲೆ ಮತ್ತು ಜೋಳದ ಬಾನವನ್ನು ನೈವೇದ್ಯವಾಗಿ ನೀಡಿ ಜೋಗುತಿಯರ ಕೈಯಿಂದ ಹಡ್ಡಲಗಿ ತುಂಬಿಸುವ ಮೂಲಕ
ಕೃತಾರ್ಥರಾದರು. ಬಳವಡಗಿಯಿಂದ ಕೊಂಚೂರು ವರೆಗೆ ಸಾವಿರಾರು ಜನ ಭಕ್ತರು ಕಾಲ್ನಡಿಗೆಯಲ್ಲಿ ಬಂದು ಹನುಮಾನ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ಸಂಪ್ರದಾಯ. ಒಟ್ಟಾರೆ ಬಳವಡಗಿ ಗ್ರಾಮದ ಶ್ರೀ ಏಲಾಂಬಿಕೆ ದೇವಿ ಜಾತ್ರೆ ಹಾಗೂ ಕೊಂಚೂರು ಗ್ರಾಮದ ಶ್ರೀ ಹನುಮಾನ ದೇವರ ರಥೋತ್ಸವ ಏಕಕಾಲಕ್ಕೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next