Advertisement

ಕರಾವಳಿ ಉತ್ಸವದ ಬದಲು ವಿಶ್ವ ತುಳುನಾಡ ಉತ್ಸವಕ್ಕೆ ಉತ್ಸುಕತೆ

11:17 AM Feb 27, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಆಯೋಜಿಸಲಾಗುವ ಕರಾವಳಿ ಉತ್ಸವವನ್ನು ಮುಂಬರುವ ದಿನಗಳಲ್ಲಿ “ವಿಶ್ವ ತುಳುನಾಡ ಉತ್ಸವ’ವಾಗಿ ಆಚರಿಸಬೇಕು ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಸರಕಾರದ ಗಮನ ಸೆಳೆದಿದೆ. ಈ ಮೂಲಕ ಕರಾವಳಿಯಲ್ಲಿ ತುಳುನಾಡಿನ ಉತ್ಸವ ಸಾಕಾರಗೊಳ್ಳುವ ನಿರೀಕ್ಷೆ ಮೂಡಿದೆ.

Advertisement

ಮಂಗಳೂರಿನಲ್ಲಿ ಸಾಮಾನ್ಯವಾಗಿ ಡಿಸೆಂಬರ್‌-ಜನವರಿ ತಿಂಗಳಿನಲ್ಲಿ ಜಿಲ್ಲಾಡಳಿತದಿಂದ ಕರಾವಳಿ ಉತ್ಸವ ಆಯೋಜಿಸಲಾಗುತ್ತದೆ. ಈ ಉತ್ಸವವನ್ನೇ ವಿಶ್ವ ತುಳುನಾಡ ಉತ್ಸವ ಮಾಡಬೇಕು ಎಂಬುವುದು ಅಕಾಡೆಮಿಯ ಉದ್ದೇಶ. ಹಾಗೂ ವಿಶ್ವದ ತುಳುವರನ್ನೆಲ್ಲ ಒಟ್ಟು ಸೇರಿಸುವ ಪ್ರಯತ್ನವಾಗಿ ವಿಶ್ವ ತುಳುನಾಡ ಉತ್ಸವ ನಡೆಯಲಿ ಎಂಬುದು ಆಶಯ.

ದಕ್ಷಿಣ ಕನ್ನಡ, ಉಡುಪಿ, ಕಾಸರ ಗೋಡು ಜಿಲ್ಲೆ ಸಹಿತ ಮತ್ತಿತರ ಭಾಗಗಳಲ್ಲಿ ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮಂದಿ ತುಳು ಭಾಷೆ ಮಾತನಾಡುತ್ತಾರೆ. ಹೀಗಿರುವಾಗ ತುಳು ಭಾಷಿಗರಿಗೆಂದೇ ಸೀಮಿತವಾಗಿ ಉತ್ಸವ ನಡೆಸಬೇಕು. ಅದರಲ್ಲಿಯೂ ಸದ್ಯ ನಡೆಯುತ್ತಿರುವ ಕರಾವಳಿ ಉತ್ಸವವನ್ನೇ ವಿಶ್ವ ತುಳುನಾಡ ಉತ್ಸವವಾಗಿ ಆಚರಣೆ ಮಾಡಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಶಿಲ್ಪಕಲೆಗಳ ಅನಾವರಣ
ತುಳುನಾಡ ಉತ್ಸವದಲ್ಲಿ ತುಳುನಾಡ ಶಿಲ್ಪಕಲೆಗಳ ಅನಾವರಣಗೊಳಿಸುವ ಉದ್ದೇಶವಿದ್ದು, ಇಲ್ಲಿ ಎಲ್ಲ ಗೋಷ್ಠಿಗಳು, ಕಾರ್ಯಕ್ರಮಗಳು ತುಳು ಭಾಷೆಯಲ್ಲೇ ಆಗಬೇಕಿದೆ.

ಅದೇ ರೀತಿ ತುಳುನಾಡಿನ ಮುಟ್ಟಾಳೆ, ಬೆತ್ತದಿಂದ ಮಾಡಿದ ಬುಟ್ಟಿಗಳು ಮಾರಾಟಕ್ಕೆ ಇರಬೇಕಿವೆ. ತುಳುನಾಡಿನ ಖಾದ್ಯಗಳಾದ ಕೋರಿ ರೊಟ್ಟಿ, ಪತ್ರೊಡೆ, ನೀರುದೋಸೆ ಸಿಗಬೇಕಿವೆ. ಇಲ್ಲಿನ ಮಂದಿಗೆ ಕಂಬಳ, ಕುಟ್ಟಿದೊಣ್ಣೆ, ಲಗೋರಿ ಪಂದ್ಯಾಟವಾಗಿ ಆಯೋಜಿಸಬೇಕಿದೆ. ತುಳುನಾಡಿನ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ ಮಂದಿಯ ಸ್ಮರಣೆ ಮಾಡಬೇಕಿದೆ. ಇದರೊಂದಿಗೆ ತುಳು ಭಾಷೆಗೆ ವಿಶ್ವದ ಮನ್ನಣೆ ಸಿಗಬೇಕು ಎಂಬ ಬೇಡಿಕೆ ಮತ್ತಷ್ಟು ಮನ್ನಣೆ ಬರಲಿದೆ ಎನ್ನುವ ಬೇಡಿಕೆಯನ್ನಿಟ್ಟು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.

Advertisement

ದೇಗುಲಗಳಲ್ಲೂ ತುಳು ಪ್ರಾರ್ಥನೆ
“ಕರಾವಳಿಯ ಜಿಲ್ಲೆಯಲ್ಲಿ ಹಲ ವಾರು ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿವೆ. ಇಲ್ಲಿನ ದೇವಾಲಯಗಳಲ್ಲಿ ಅರ್ಚಕರು ನಡೆಸುವ ಪ್ರಾರ್ಥನೆಗಳು ತುಳು ಭಾಷೆಯಲ್ಲಿಯೂ ಇರಲಿ. ಈ ಮುಖೇನ ತುಳು ಭಾಷೆಗೆ ಮತ್ತಷ್ಟು ಮಹತ್ವ ನೀಡಿದಂತಾಗುತ್ತದೆ. ವಿಶ್ವ ತುಳುನಾಡ ಉತ್ಸವಕ್ಕೆ ದೇವಾ ಲಯದ ವತಿಯಿಂದಲೂ ಪ್ರೋತ್ಸಾಹ ಬೇಕಾಗಿದೆ’ ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ “ಉದಯವಾಣಿ ಸುದಿನಕ್ಕೆ’ ತಿಳಿಸಿದ್ದಾರೆ.

ಯಾವುದೇ ಮನವಿ ಬಂದಿಲ್ಲ
ಕರಾವಳಿ ಉತ್ಸವದ ಬದಲಾಗಿ ವಿಶ್ವ ತುಳುನಾಡ ಉತ್ಸವ ಮಾಡಬೇಕೆಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಮನವಿ ಬಂದಿಲ್ಲ. ರಾಜ್ಯ ಸರಕಾರ ಮಟ್ಟದಲ್ಲಿ ಯಾವುದಾದರೂ ಮನವಿಗಳು ನೀಡಲಾಗಿದೆಯೇ ಎಂಬುವುದರ ಬಗ್ಗೆ ನನಗೆ ಮಾಹಿತಿ ಇಲ್ಲ.
 - ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

ಸಂಸ್ಕೃತಿಗೆ ಮನ್ನಣೆ
ತುಳುನಾಡಿನ ಸಂಸ್ಕೃತಿಗೆ ಮತ್ತಷ್ಟು ಮನ್ನಣೆ ನೀಡುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಕರಾವಳಿ ಉತ್ಸವದ ಬದಲಾಗಿ “ವಿಶ್ವ ತುಳುನಾಡ ಉತ್ಸವ’ ನಡೆಸಬೇಕು. ಇದರೊಂದಿಗೆ ಸಮಗ್ರ ಕರಾವಳಿ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.
 - ದಯಾನಂದ ಕತ್ತಲಸಾರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ತುಳುನಾಡಿನ ಕಲೆ ಪರಿಚಯಿಸುವ ಉದ್ದೇಶ
ಕನ್ನಡ ರಾಜ್ಯೋತ್ಸವ ವೇಳೆ ಯಾವ ರೀತಿ ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯ ಅನಾವರಣ ಆಗುತ್ತದೆಯೋ ಅದೇ ರೀತಿ ತುಳುನಾಡ ಉತ್ಸವದಲ್ಲಿ ಹೊರ ಜಗತ್ತಿಗೆ ಈ ಪ್ರದೇಶದ ಕಲೆ ಪರಿಚಿತವಾಗಬೇಕು. ಕರಾವಳಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಕರಾವಳಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನಕ್ಕೆ ಪ್ರಾಶಸ್ತ್ಯ ನೀಡಬೇಕಾಗಿದೆ. ಮುಖ್ಯ ಮಂತ್ರಿಗಳು ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next