Advertisement

ನೆರೆ ರಾಜ್ಯದಿಂದ ಅಬಕಾರಿ ಆದಾಯ ಹೆಚ್ಚಳ

10:33 AM Jan 17, 2020 | Suhan S |

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷದ ಅಬಕಾರಿ ಆದಾಯದಲ್ಲಿ ನೆರೆಯ ಆಂಧ್ರಪ್ರದೇಶದ ಗ್ರಾಹಕರ ಪಾಲು ಸೇರಿದೆ. ಹೌದು, ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಶೇ.20 ರಿಂದ 40 ಹೆಚ್ಚಳ ಮಾಡಿರು ವುದರಿಂದ ಗಡಿ ಭಾಗದಲ್ಲಿ ಕರ್ನಾಟಕದ ಮದ್ಯದ ಮಳಿಗೆಗಳಲ್ಲಿ ಮಾರಾಟ ಪ್ರಮಾಣ ಹೆಚ್ಚಳಗೊಂಡಿದೆ. ಹೀಗಾಗಿ, ಈ ವರ್ಷದ ಅಬಕಾರಿ ಆದಾಯದ ಪ್ರಮಾಣವೂ ರಾಜ್ಯದಲ್ಲಿ ಹೆಚ್ಚಾಗಿದೆ.

Advertisement

ಆಂಧ್ರಪ್ರದೇಶದಲ್ಲಿ ವೈನ್ಸ್‌ ಹಾಗೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಬೆಲೆ ಶೇ.20 ರಿಂದ 40 ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ 180 ಎಂಎಲ್‌ಗೆ ಇದು ಅನ್ವಯ. ಇದರಿಂದ ಕರ್ನಾಟಕದಲ್ಲಿ 200 ರೂ. ಬೆಲೆಯ 180 ಎಂಎಲ್‌ ಮದ್ಯ ಆಂಧ್ರಪ್ರೇಶದಲ್ಲಿ 260 ರಿಂದ 280 ರೂ. ಬೆಲೆ ಹೆಚ್ಚಳದಿಂದ ಚಿತ್ತೂರು, ಪಲಮನೇರು, ಹಿಂದೂಪುರ, ಕುಪ್ಪಂ ಭಾಗದವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗಕ್ಕೆ ಬಂದು ಮದ್ಯ ಖರೀದಿ ಮಾಡುತ್ತಿದ್ದಾರೆ. ಮುಳಬಾಗಿಲು, ಗೌರಿಬಿದನೂರು, ಕೆಜಿಎಫ್, ಬಾಗೇಪಲ್ಲಿ ಗಡಿ ಭಾಗದಲ್ಲಿ ಮದ್ಯದ ಮಾರಾಟ ಹೆಚ್ಚಾಗಿದೆ. ಅದರಲ್ಲೂ ಡಿಸೆಂಬರ್‌ 30 ಹಾಗೂ 31 ರಂದು ಭರ್ಜರಿ ವ್ಯಾಪಾರವಾಗಿದ್ದು ಸಾಮಾನ್ಯಕ್ಕಿಂತ ಮೂರ್‍ನಾಲ್ಕು ಪಟ್ಟು ಇಂಡೆಂಟ್‌ ಹೆಚ್ಚಳವಾಗಿತ್ತು ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಅಬಕಾರಿ ಮೂಲದಿಂದ ಡಿಸೆಂಬರ್‌ ತಿಂಗಳಲ್ಲೇ 1700 ಕೋಟಿ ರೂ. ವರೆಗೆ ಆದಾಯ ಸಂಗ್ರಹವಾಗಿತ್ತು. ಡಿ.21 ರಿಂದ 31 ರವರೆಗೆ 516 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 32 ಅಬಕಾರಿ ಜಿಲ್ಲೆಗಳ ಪೈಕಿ ಬೆಂಗಳೂರು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿತ್ತು.

ಆಂಧ್ರದಲ್ಲೇನಾಗಿದೆ?: ಆಂಧ್ರಪ್ರದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮದ್ಯಪಾನ ನಿಷೇಧಿಸುವ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ನವೆಂಬರ್‌ನಲ್ಲಿ ಏಕಾಏಕಿ ಮದ್ಯದ ಬೆಲೆ ಶೇ.20 ರಿಂದ 40 ರಷ್ಟು ಹೆಚ್ಚಳ ಮಾಡಿತ್ತು. ಅಷ್ಟೇ ಅಲ್ಲದೆ ವೈನ್ಸ್‌ ಹಾಗೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲು ಮುಂದಾಗಿತ್ತು. ಪರವಾನಗಿ ಅವಧಿ ಮುಗಿದಿದ್ದ ವೈನ್ಸ್‌ ಮತ್ತು ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ಪರವಾನಗಿ ನವೀಕರಣ ಮಾಡಿರಲಿಲ್ಲ.

ಪರವಾನಗಿ ಅವಧಿ ಇದ್ದವರು ನ್ಯಾಯಲಯದ ಮೊರೆ ಹೋಗಿದ್ದರಿಂದ ಪರವಾನಗಿ ಅವಧಿ ಮುಗಿಯದವರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ. ಮುಂದಿನ ಹಂತದಲ್ಲಿ ಪರವಾನಗಿ ಅವಧಿ ಮುಗಿಯುತ್ತಿದ್ದಂತೆ ಸರ್ಕಾರದ ವ್ಯಾಪ್ತಿಗೆ ಎಲ್ಲ ವೈನ್ಸ್‌ ಹಾಗೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಬರಲಿವೆ. ನಂತರ ಸರ್ಕಾರ ಕೇವಲ ವೈನ್ಸ್‌ಗಳನ್ನು ಮಾತ್ರ ನಿರ್ವಹಿಸಲಿದ್ದು ಬೆಳಗ್ಗೆ 10 ರಿಂದ 6 ರವರೆಗೆ ಮಾತ್ರ ಖರೀದಿಗೆ ಅವಕಾಶ ಮಾಡಿಕೊಡುವುದು. ಅದಕ್ಕಾಗಿ 500 ರೂ. ಮೌಲ್ಯದ ರೀಚಾರ್ಜ್‌ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಿದೆ. ಅದರಿಂದ ಯಾರು ವರ್ಷದಲ್ಲಿ ಎಷ್ಟು ಪ್ರಮಾಣದ ಮದ್ಯ ಖರೀದಿ ಮಾಡುತ್ತಾರೆ, ಯಾವೆಲ್ಲಾ ಬ್ರಾಂಡ್‌ ಖರೀದಿ ಮಾಡಿದ್ದಾರೆ ಎಂಬುದರ ಮಾಹಿತಿಯೂ ಲಭ್ಯವಾಗಲಿದೆ. ಕ್ರಮೇಣ ಮದ್ಯಪಾನ ನಿಷೇಧ ಮಾಡುವುದು ಇದರ ಉದ್ದೇಶ ಎಂದು ಹೇಳಲಾಗಿದೆ.

Advertisement

ರೀಚಾರ್ಜ್‌ ಕೂಪನ್‌ ವ್ಯವಸ್ಥೆ ಜಾರಿಗೊಳಿಸಿದರೆ ಆಂಧ್ರಪ್ರದೇಶದಿಂದ ಬಂದು ಮದ್ಯ ಖರೀದಿಸುವವರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಗಡಿ ಭಾಗದ ವೈನ್ಸ್‌ ಮಳಿಗೆ ಮಾಲೀಕರು ಹೇಳುತ್ತಾರೆ.

ಒಂದು ಕಡೆ ಬೆಲೆ ಹೆಚ್ಚಳ ಇದ್ದಾಗ ಸಹಜವಾಗಿ ಬೆಲೆ ಕಡಿಮೆ ಇದ್ದ ಕಡೆ ಖರೀದಿ ಮಾಡುತ್ತಾರೆ. ರಾಜ್ಯದಲ್ಲಿ 2019-20 ನೇ ಸಾಲಿನಲ್ಲಿ ಅಬಕಾರಿ ಮೂಲದಿಂದ 20, 950 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು ಡಿಸೆಂಬರ್‌ ಅಂತ್ಯದವರೆಗೆ 16,187.95 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ಪ್ರಮಾಣ ಹೆಚ್ಚಳವಾಗಿದೆ. ಎಚ್‌.ನಾಗೇಶ್‌, ಅಬಕಾರಿ ಸಚಿವ

 

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next