ನಾವು ಪತ್ರಿಕೋದ್ಯಮದ ವಿದ್ಯಾರ್ಥಿನಿಯರು. ಹಾಸ್ಟೆಲ್‌ನಲ್ಲಿ, ಎಲ್ಲರಿಗಿಂತ ಮುಂಚೆ ಕಾಲೇಜ್‌ಗೆ ಹೋದರೆ, ಬರುವುದು ಎಲ್ಲರಿಗಿಂತ ಲೇಟಾಗಿ. ಅಂದರೆ ರಾತ್ರಿಯೇ. ಎಷ್ಟೋ ಸಲ, ಮನಸಿಗೆ ಬೇಜಾರಾದಾಗ ಅಥವಾ ಕೆಲಸದ ಒತ್ತಡ ಇದ್ದಾಗ ನಮ್ಮಲ್ಲಿ ಏನೋ ಒಂದು ತರಹದ ದುಗುಡ ಮನೆ ಮಾಡುತ್ತಿತ್ತು.
ಸದಾ ನಮ್ಮ ತೋರುಬೆರಳು, ಮೊಬೈಲ್ ಸವರುತ್ತಾ, ಅತ್ತ ಲ್ಯಾಪ್‌ಟಾಪ್ ಕೂಡ ಮ್ಯಾನೇಜ್ ಮಾಡುತ್ತಾ, ಇತ್ತ ಕ್ಲಾಸ್ ಮುಗಿಸುತ್ತಾ ಒಂದು ವರ್ಷದ ಜೀವನಸಾಗಿ ಬಿಟ್ಟಿದ್ದು ತಿಳಿಯಲೇ ಇಲ್ಲ. ಮಾಹಿತಿಗಾಗಿ ಹಲವು ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಇದ್ದೆ. ಇದರ ಮಧ್ಯೆ ನನ್ನ ಆಪ್ತ ಗೆಳೆತಿಯರೊಂದಿಗೆ ಮಾತಕತೆ ನಡೆಸಲೆಂದೇ ಶುರುಮಾಡಿದ್ದು ಈ ತಾಜಾಬ್ರೆಡ್ ಅನ್ನೋ ವ್ಯಾಟ್ಸಾಪ್ ಗ್ರೂಪ್.
ಇದೇ ಮೊದಲ ಬಾರಿ ನಾನು ಗ್ರೂಪ್ ಅಡ್ಮಿನ್ ಆದೆ. ಇದರ ಮೂಲ ಉದ್ದೇಶ ಮನರಂಜನೆ. ಯಾವಾಗಲೂ ಓದು, ಬರಿ ಅನ್ನೋದು ಇದ್ದದ್ದೇ. ಇದರ ಮಧ್ಯೆ, ನಮಗೆ ಮನರಂಜನೆ ಇರಲಿ ಅಂತ ಸಮಾನ ಮನಸ್ಕರನ್ನು ಸೇರಿಸಿಕೊಂಡೆ. ಇದಕ್ಕೆ ಯಾವ ರೀತಿ ಹೆಸರಿಡಬೇಕು ಎಂಬ ಯಕ್ಷಪ್ರಶ್ನೆ ಮೂಡಿದಾಗ ಥಟ್ ಎಂದು ನೆನಪಿಗೆ ಬಂದ ಹೆಸರು ತಾಜಾ ಬ್ರೆಡ್. ಅಂದರೆ, ಹೊಸ ಹೊಸ ಕಾಮಿಡಿ ವಿಚಾರಗಳ ಬಿಸಿ ಬಿಸಿ ಚರ್ಚೆ ಮಾಡೋದು.
ಈ ಗ್ರೂಪ್ ನಲ್ಲಿ ಹತ್ತಾರು ಜನರಿಲ್ಲ. ನೂರಾರು ಪ್ರಶ್ನೆ ಕೇಳುವವರಿಲ್ಲ, ನಾನು ಮತ್ತೆ ನನ್ನಿಬ್ಬರು ಆಪ್ತ ಸ್ನೇಹಿತೆಯರು ಮಾತ್ರ ಇದ್ದೀವಿ. ಗ್ರೂಪ್ ಅಂದಮೇಲೆ, ಹಾಯ್,ಬಾಯ್ ಮೆಸೇಜ್ ಕಾಮನ್ ಅಲ್ವಾ? ಹೀಗಾಗಿ, ಅದೂ ನಡೆಯುತ್ತಿರುತ್ತದೆ. ಈ ಗ್ರೂಪ್‌ನ ಇನ್ನೊಂದು ವಿಶೇಷ ಅಂದರೆ, ಇರುವ ಮೂವರಲ್ಲಿ ಯಾರಿಗೆ ಬೇಜಾರ್ ಆದರೂ ಅರೆಕ್ಷಣದಲ್ಲಿ ಮೂಡ್ ಬದಲಿಸಲು ಉಳಿದ ಸದಸ್ಯರು ಪ್ರಯತ್ನಿಸುತ್ತಾರೆ.
ಕ್ಲಾಸ್ ರೂಂನ ಕಿತ್ತಾಟದಿಂದ ಹಿಡಿದು, ನಮ್ಮ ನಮ್ಮ ಸೆಲ್ಫಿಗಳ ತನಕ ಎಲ್ಲ ರೀತಿಯ ಫೋಟೋಗಳು ಹರಿದಾಡುತ್ತವೆ. ಅದಕ್ಕೆ ವೈವಿಧ್ಯಮಯವಾದ ಕಾಮೆಂಟ್‌ಗಳೂ ಬರುತ್ತವೆ. ಚಿನ್ನಿ, ಬಂಗಾರ, ಮುದ್ದು ಎಂದು ಮನಸಿಗೆ ಮುದ ನೀಡುವ ಸ್ನೇಹಿತೆಯರನ್ನು ಈ ತಾಜಾ ಬ್ರೆಡ್ ಎಂಬ ಸಂಬಂಧಗಳ ಸಂಕೋಲೆಯಲ್ಲಿ ಸೆರೆ ಹಿಡಿದಿದೆ. ಎಷ್ಟೇ ಬ್ಯುಸಿ ಇದ್ದರೂ, ಇದಕ್ಕಾಗಿ ಸ್ವಲ್ಪ ಸಮಯವಾದರೂ ಮೀಸಲಿಡುವಂತೆ ಮಾಡಿದೆ. ದೂರ, ದೂರವಾದ ನಮ್ಮ ಸ್ನೇಹಕ್ಕೆ ಹೊಸ ಆಯಾಮವನ್ನು ನೀಡಿದೆ.
ಗ್ರೂಪ್: ತಾಜಾ ಬ್ರೆಡ್
ಅಡ್ಮಿನ್: ಸವಿತಾ ಆರ್. ವಾಸನದ
ಸದಸ್ಯರು: ಪಲ್ಲ (ಗುಂಡಮ್ಮ), ಶ್ವೇತಾ ಜಂಗಳಿ