ನವದೆಹಲಿ:ಡಿಜಿಟಲ್ ಸ್ವತ್ತುಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಈಗ ಹಣಕಾಸು ಅಕ್ರಮ ವರ್ಗಾವಣೆ ನಿಬಂಧನೆಗಳ ವ್ಯಾಪ್ತಿಗೆ ತರಲಾಗಿದೆ.
ಮಂಗಳವಾರ ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ, ಕ್ರಿಪ್ಟೋ ಕರೆನ್ಸಿಗಳನ್ನು ಹೊಂದಿರುವವರು, ಅವುಗಳ ವಿನಿಮಯ, ವ್ಯಾಲೆಟ್ ಪ್ರೊವೈಡರ್‌ಗಳು ಸೇರಿದಂತೆ ಎಲ್ಲ ರೀತಿಯ ಕ್ರಿಪ್ಟೋ ವಹಿವಾಟು ಕೂಡ ಹಣಕಾಸು ಅಕ್ರಮ ವರ್ಗಾವಣೆ ಕಾಯ್ದೆ, 2002ರ ವ್ಯಾಪ್ತಿಗೆ ತರಲಾಗಿದೆ.
ಹೀಗಾಗಿ, ಇನ್ನು ಮುಂದೆ ಡಿಜಿಟಲ್-ಅಸೆಟ್ ಪ್ಲಾಟ್‌ಫಾರಂಗಳು ಕೂಡ ಬ್ಯಾಂಕುಗಳು ಅಥವಾ ಷೇರು ಬ್ರೋಕರ್‌ಗಳ ಮಾದರಿಯಲ್ಲಿಯೇ ಹಣಕಾಸು ಅಕ್ರಮ ವರ್ಗಾವಣೆ ನಿಗ್ರಹ ನಿಯಮಗಳನ್ನು ಅನುಸರಿಸಬೇಕು.
ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಕ್ರಿಪ್ಟೋಗ್ರಾಫಿಕ್ ರೂಪದಲ್ಲಿ ಅಥವಾ ಬೇರೆ ರೂಪದಲ್ಲಿ ಉತ್ಪತ್ತಿ ಮಾಡಲಾದ ಯಾವುದೇ ಮಾಹಿತಿ, ಕೋಡ್, ಸಂಖ್ಯೆ ಅಥವಾ ಟೋಕನ್(ಭಾರತ ಅಥವಾ ವಿದೇಶಿ ಕರೆನ್ಸಿ ಅಲ್ಲದ) ಅನ್ನು “ವರ್ಚುವಲ್ ಡಿಜಿಟಲ್ ಆಸ್ತಿ’ ಎಂದು ಕರೆಯಲಾಗುತ್ತದೆ.
ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್‌ನಲ್ಲಿ, ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯದ ಮೇಲೆ ಶೇ.30 ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಲಾಗಿತ್ತು.