ಕುಮಟಾ: ಸುತ್ತಲಿನ ಪರಿಸರವನ್ನು ಸ್ವತ್ಛವಾಗಿ ಕಾಪಾಡಿಕೊಂಡು ಹೋಗುವುದೇ ನಾವು ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳಿಗೆ ನೀಡುವ ನಿಜವಾದ ಗೌರವ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಹಾತ್ಮಾ ಗಾಂಧಿ ಜಯಂತಿ ನಿಮಿತ್ತ ವನ್ನಳ್ಳಿ ಬೀಚ್‌ನಲ್ಲಿ ಹಮ್ಮಿಕೊಂಡಿದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಪರೀಮಿತವಾದ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದ್ದು, ಪ್ಲಾಸ್ಟಿಕ್ ಬಳಸದಿರುವ ಕುರಿತು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಾಗಿದೆ. ಹಾಗೆಯೇ ಅಂಗಡಿ, ಮಾಲ್ ಗಳಿಗೆ ಹೋಗುವಾಗ ಸ್ವಯಂ ಪ್ರೇರಿತವಾಗಿ ಕೈ ಚೀಲವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಲು ಅವರು ಸೂಚಿಸಿದರು.
ಪ್ರವರ್ತಕ ಕೆನರಾ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ತಮ್ಮ ಬ್ಯಾಂಕ್ ಸ್ವಚ್ಛತಾ ಕಾರ್ಯಕ್ರಮವನ್ನು ಅಕ್ಟೋಬರ್ ಇಡೀ ತಿಂಗಳು ವಿವಿಧೆಡೆ ಆಚರಿಸಲಿದೆ. ಕಾರ್ಯಕ್ರಮದ ಮೂಲ ಉದ್ದೇಶ ಸ್ವಚ್ಛತೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಆಗಿದೆ ಎಂದ ಅವರು, ಗ್ರಾಮೀಣ ಬ್ಯಾಂಕ್ ಕೂಡ ಅಕ್ಟೋಬರ್ ತಿಂಗಳಿನಲ್ಲೇ ಜನ್ಮ ಪಡೆದಿದ್ದು, ಈಗ 48ನೇ ವರ್ಷಕ್ಕೆ ಪದಾರ್ಪಣೆ ಮಾಡಿವೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಸ್ತುತ 9 ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 629 ಶಾಖೆಗಳ ಮೂಲಕ 30500 ಕೋಟಿ ರೂ. ಗಳಿಗೂ ಮಿಕ್ಕಿದ ವಹಿವಾಟು ನಡೆಸುತ್ತಿದ್ದು, ಸಾಮಾಜಿಕವಾಗಿಯೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಬ್ಯಾಂಕ್‌ನ ಕುಮಟಾ ಪ್ರಾದೇಶಿಕ ವ್ಯವಸ್ಥಾಪಕ ಜಿ.ಪಿ. ಭಟ್ ಮಾತನಾಡಿ, ಬ್ಯಾಂಕ್‌ನ ಕುಮಟಾ ಪ್ರಾದೇಶಿಕ ಕಾರ್ಯಾಲಯ 55 ಶಾಖೆಗಳನ್ನು ಹೊಂದಿದ್ದು, ಗ್ರಾಮ, ಕುಗ್ರಾಮಗಳಲ್ಲೂ ಸೇವೆ ನೀಡುತ್ತಲಿದೆ. ಪ್ರತಿಯೊಬ್ಬರಿಗೂ ಖಾತೆ ಮಾಡಿಸಿಕೊಡುವ ಸಂಬಂಧ ಖಾತೆ ತೆರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಮನೆ ಮನೆಯನ್ನೂ ತಲುಪಲಾಗುವುದು ಎಂದರು.
ಬ್ಯಾಂಕ್ ಸಿಬ್ಬಂದಿಗಳು ಉತ್ಸಾಹದಿಂದ ಸ್ವಚ್ಛತಾ ಕಾರ್ಯ ಕೈಗೊಂಡರು. ಬ್ಯಾಂಕ್‌ನ ಹಿರಿಯ ಪ್ರಬಂಧಕ ಶಿವಕುಮಾರ, ಅಧಿಕಾರಿಗಳಾದ ಶಿವಾನಂದ ಭಟ್, ರವೀಂದ್ರ ಪೈ, ಶಿಲ್ಪಾ ಮಹಾಲೆ, ಶಂಭು ಭಟ್, ಕಿರಣ ಮೊದಲಾದವರು ಇದ್ದರು.