Advertisement
ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ಈಶ್ವರಪ್ಪ, “ನಾನು ಶೂ ಕೊಟ್ಟೆ, ಮೊಟ್ಟೆ ಕೊಟ್ಟೆ’ ಎನ್ನುವ ಸಿದ್ದರಾಮಯ್ಯ, ಅದನ್ನು ಸ್ವಂತ ಹಣದಲ್ಲೇನೂ ಕೊಟ್ಟಿಲ್ಲ. ಜನರ ತೆರಿಗೆ ಹಣದಲ್ಲಿ ನೀಡಿದ್ದಾರೆ. ಅದೇ ಮೊಟ್ಟೆ ಹಾಗೂ ಶೂಗಳಿಂದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನು ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಹೇಳಿಕೆಯಿಂದ ಕೆರಳಿದ ಸಿದ್ದರಾಮಯ್ಯ, ಬಾಗಲಕೋಟೆಯಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಮಾತನಾಡಿ, “ಈಶ್ವರಪ್ಪ ಮನುಷ್ಯನೇ ಅಲ್ಲ. ಅವನೇ ಕೈಯಲ್ಲಿ ಶೂ ಹಿಡಿದುಕೊಂಡಿದ್ದಾನೋ ಗೊತ್ತಿಲ್ಲ.
Related Articles
Advertisement
ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಜ್ಞಾನ ಬಂದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಜನ ಮತ ಹಾಕುತ್ತಿದ್ದರೇನೋ?. ಆದರೆ, 38 ಸ್ಥಾನ ಬಂದಿರುವ ಜೆಡಿಎಸ್‌ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡರು. ಇದು ರಾಜ್ಯದ ಜನರಿಗೆ ಇಷ್ಟವಾಗಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳೆಯಲು ಬಿಡಲ್ಲ ಎಂದಿದ್ದ ಕಾಂಗ್ರೆಸ್-ಜೆಡಿಎಸ್‌ನವರಿಗೆ ಕೇವಲ ಒಂದೊಂದು ಸ್ಥಾನದಲ್ಲಿ ಜನ ನಿಲ್ಲಿಸಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಬಿಜೆಪಿಯಿಂದ ಬೇಲಿ: ಮುಂದಿನ ಎಲ್ಲ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಯಿಂದ ಬೇಲಿ ಹಾಕುತ್ತೇವೆ. ದಕ್ಷಿಣ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಲು ನಾವು ತಯಾರಿದ್ದೇವೆ. ಕಾಂಗ್ರೆಸ್ ಎಲ್ಲೆ ಸ್ಪರ್ಧಿಸಿದರೂ, ಬಿಜೆಪಿಯಿಂದ ಬೇಲಿ ಹಾಕಿ ಸೋಲಿಸುತ್ತೇವೆ. ಸಿದ್ದರಾಮಯ್ಯ ಅವರ ಸೊಕ್ಕಿನ ಮಾತುಗಳಿಗೆ ಜನ ಬಿಜೆಪಿಗೆ ಮತ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿರುವಾಗ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಬೈಯುತ್ತಾರೆ. ಇಂತಹ ಸೊಕ್ಕಿನ ಮಾತುಗಳಿಗೆ ಜನ ಮುಂದೆಯೂ ಉತ್ತರ ಕೊಡುತ್ತಾರೆ ಎಂದರು.
ಸಿದ್ದು ನಿದ್ದೆ ಬಿಟ್ಟು ಬೇರೇನೂ ಮಾಡಲಿಲ್ಲ: ನಮ್ಮ ದೇಶದಲ್ಲಿ ಬ್ರಿಟಿಷ್ ಸಂತತಿ ಇನ್ನೂ ಇದೆ. ಸಿದ್ದರಾಮಯ್ಯ ಸಿಎಂ ಆಗಲು ಬ್ರಿಟಿಷರಿಗೆ ಬೆಂಬಲ ಕೊಟ್ಟಿದ್ದ ಸಂತತಿಯವರ ಸೆರಗು ಹಿಡಿದು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ. ಆದರೆ, ಬ್ರಿಟಿಷರಿಗೆ ಬೆಂಬಲ ಕೊಟ್ಟ ಸಂತತಿ ಯಾರದ್ದು ಎಂಬುದು ಜನತೆಗೆ ಗೊತ್ತಿದೆ. ಕೆಲಸ ಮಾಡುವವರಿಗೆ ಮತ ಕೊಡಿ, ನಿದ್ದೆ ಮಾಡುವವರಿಗೆ ಮತ ಕೊಡಬೇಡಿ ಎಂದ ಸಿದ್ದರಾಮಯ್ಯಗೆ ಐದು ವರ್ಷ ನಿದ್ದೆ ಮಾಡಿದ್ದರಿಂದಲೇ ಜನ ಮನೆಗೆ ಕಳುಹಿಸಿದ್ದಾರೆ ಎಂದರು.
ಐದು ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ನಿದ್ದೆ ಬಿಟ್ಟು ಬೇರೇನೂ ಮಾಡಲಿಲ್ಲ. ಕೆಲಸ ಮಾಡುವವರಿಗೆ ಮತ ಕೊಡಿ, ನಿದ್ದೆ ಮಾಡುವವರಿಗೆ ಮತ ಕೊಡಬೇಡಿ ಎಂದು ಅವರು ಹೇಳಿರುವುದು ಸತ್ಯವಾಗಿದೆ. ಕಾಂಗ್ರೆಸ್‌ನವರು ನಿದ್ದೆ ಮಾಡುವವರು. ಮೋದಿ ಕೆಲಸ ಮಾಡುವವರು. ಹೀಗಾಗಿಯೇ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದರು.
ತೊಡೆ ತಟ್ಟಿ ಚುನಾವಣೆ ಮಾಡ್ತೇವೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗೆ ಸದಾ ಸಿದ್ಧರಿರಬೇಕೆಂಬ ಸಿದ್ದರಾಮಯ್ಯ ಹೇಳಿಕೆ ಸ್ವೀಕರಿಸುತ್ತೇವೆ. ಚುನಾವಣೆ ಬಂದರೆ ಎದುರಿಸುವ ಹುಲಿಯಂತಹ ನಾಯಕರು ನಮ್ಮಲ್ಲಿದ್ದಾರೆ. ತೊಡೆ ತಟ್ಟಿ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಮುಗಿದ ಬಳಿಕ ಪಕ್ಷ ಸಂಘಟನೆ ಮಾಡುತ್ತೇವೆ. ಮುಂದೆ ಯಾವುದೇ ಚುನಾವಣೆ ನಡೆದರೂ ಸಿದ್ದರಾಮಯ್ಯನವರ ನಿದ್ದೆ ಮಾಡುವವರು, ಕೆಲಸ ಮಾಡುವವರು ಹೇಳಿಕೆಯೇ ನಮಗೆ ಪ್ರಚಾರದ ಅಸ್ತ್ರವಾಗಲಿದೆ ಎಂದರು.
4 ರೂ.ಕೊಟ್ಟು ನಾಲ್ಕಾರು ಮಾತು: ಉಚಿತ ಅಕ್ಕಿ ಕೊಟ್ಟಿದ್ದಾಗಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಒಂದು ಕೆಜಿ ಅಕ್ಕಿಗೆ ಒಟ್ಟು 32 ರೂ.ಇದೆ. ಅದರಲ್ಲಿ 28 ರೂ.ಕೇಂದ್ರ ಸರ್ಕಾರ ಕೊಡುತ್ತದೆ. ನಾಲ್ಕು ರೂ.ಮಾತ್ರ ರಾಜ್ಯ ಸರ್ಕಾರ ಕೊಡುತ್ತದೆ. ನಾಲ್ಕು ರೂ.ಕೊಟ್ಟು, ಅವರು ನಾಲ್ಕಾರು ಮಾತುಗಳನ್ನು ಆಡುತ್ತಿದ್ದಾರೆ. “ಉಚಿತ ಅಕ್ಕಿ’ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಲ್ಕು ಸ್ಥಾನವೂ ಬರದಂತೆ ಜನ ಮಾಡುತ್ತಾರೆ ಎಂದು ಈಶ್ವರಪ್ಪ ಟೀಕಿಸಿದರು.