Advertisement

ಟಿಬಿ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ

10:43 PM Oct 08, 2019 | Team Udayavani |

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಿಂದ 10 ಕ್ರಸ್ಟ್ ಗೇಟ್‌ಗಳ ಮೂಲಕ 35 ಸಾವಿರ ಕ್ಯೂಸೆಕ್ ನೀರನ್ನು ಮಂಗಳವಾರ ನದಿಗೆ ಹರಿ ಬಿಡಲಾಗಿದೆ.

Advertisement

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣ ದ್ವಿಗುಣವಾಗಿದೆ. ಜಲಾಶಯದ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತುಂಗಭದ್ರಾಾ ಮಂಡಳಿ ನದಿಗೆ ನೀರು ಹರಿಸುತ್ತಿದೆ. ಹೀಗಾಗಿ ನದಿ ಪಾತ್ರದ ಜನ-ಜಾನುವಾರುಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಈ ಬಾರಿ ಜುಲೈ ಕಳೆದರೂ ಜಲಾಶಯ ಭರ್ತಿಯಾಗದೇ ಇರುವುದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆಗಸ್ಟ್ ಎರಡನೇ ವಾರದ ಆರಂಭದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಯಿತು. ಇದೀಗ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಆಧಿಕ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮಿಂಚು, ಸಿಡಿಲು ಸಹಿತ ಉತ್ತಮ ಮಳೆ: ಕರಾವಳಿಯ ಹಲವು ಕಡೆ ಮಂಗಳವಾರ ಮಿಂಚು, ಸಿಡಿಲು-ಗುಡುಗಿನಿಂದ ಕೂಡಿದ ಉತ್ತಮ ಮಳೆಯಾದ ವರದಿಯಾಗಿದೆ. ಮಂಗಳೂರು ನಗರದಲ್ಲಿ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಬಂಟ್ವಾಳ, ವೇಣೂರು ಪರಿಸರದಲ್ಲಿ ಮಿಂಚು- ಸಿಡಿಲು ಸಹಿತ ಮಳೆಯಾಗಿದೆ.ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆ ಸುರಿದಿದೆ.

ಕುಂದಾಪುರ, ಕಾರ್ಕಳ, ಪಡುಬಿದ್ರಿ, ಕೋಟೇಶ್ವರ, ಕೊಲ್ಲೂರು, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಅಂಪಾರು, ಕಾಪು, ಬ್ರಹ್ಮಾವರ, ಶಿರ್ವ ಭಾಗಗಳ ಗುಡುಗು ಸಹಿತ ಮಳೆ ಸುರಿದಿದೆ. ಬೆಳಗ್ಗೆ ಬಿಸಿಲಿನಿಂದ ಕೂಡಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಮಳೆ ಸುರಿಯಲಾರಂಭಿಸಿತು. ಉಡುಪಿ ನಗರದಲ್ಲೂ ಮಧ್ಯಾಹ್ನದ ಅನಂತರ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಉಡುಪಿ ಕುಕ್ಕಿಕಟ್ಟೆ ಸಮೀಪದ ಮಂಚಿ ಮೂಲಸ್ಥಾನಕ್ಕೆ ಹೋಗುವ ದಾರಿ ವಿದ್ಯುತ್‌ ಕಂಬ ಮತ್ತು ಡಾಂಬರು ರಸ್ತೆಗೆ ಸಿಡಿಲು ಬಡಿದಿದೆ. ಈ ವೇಳೆ ಭೂಮಿ ಕಂಪಿಸಿದ ಅನುಭವವಾಗಿದ್ದು, ವಿದ್ಯುತ್‌ ಕಂಬ, ಸಮೀಪದಲ್ಲಿರುವ ನಾಗಬನಕ್ಕೆ ಹಾನಿಯುಂಟಾಗಿದೆ.

Advertisement

ಮಳವಳ್ಳಿ, ಮದ್ದೂರಿನಲ್ಲಿ 8 ಸೆಂ.ಮೀ. ವರ್ಷಧಾರೆ
ಬೆಂಗಳೂರು: ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು. ಮಳವಳ್ಳಿ ಮತ್ತು ಮದ್ದೂರಿನಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 8 ಸೆಂ.ಮೀ. ಮಳೆ ಸುರಿಯಿತು. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿದೆ.

(ಸೆಂ.ಮೀ.ಗಳಲ್ಲಿ): ಮಂಡ್ಯ 7, ಚಾಮರಾಜನಗರ, ಕಂಪ್ಲಿ, ಬೇಗೂರು ತಲಾ 5, ಇಳಕಲ್‌, ಯೆಳಂದೂರು, ಮಲೆಮಹದೇಶ್ವರ ಬೆಟ್ಟ ತಲಾ 4, ನಂಜನಗೂಡು, ಹುಣಸೂರು, ವಿರಾಜಪೇಟೆ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ 3, ಪಿರಿಯಾಪಟ್ಟಣ, ಸೊರಬ, ಬೇಲೂರು, ಲಿಂಗದಹಳ್ಳಿ 2, ಯಲ್ಲಾಪುರ, ಯಲಬುರ್ಗಾ, ಕೊಳ್ಳೇಗಾಲ, ಹುಂಚದಕಟ್ಟೆ, ಮೈಸೂರು, ಹಾಸನ, ಗುಡಿಬಂಡೆ, ಮೂಡಿಗೆರೆ ತಲಾ 1 ಸೆಂ.ಮೀ.ಮಳೆಯಾಗಿದೆ. ಶಿರಾಲಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 33.9ಡಿ.ಸೆ. ಮತ್ತು ಬೀದರ್‌ನಲ್ಲಿ ಅತಿ ಕನಿಷ್ಠ 18.6 ಡಿ.ಸೆ. ತಾಪಮಾನ ದಾಖಲಾಯಿತು. ಗುರುವಾರ ಮುಂಜಾನೆವರೆ ಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next