ಕಲಬುರಗಿ: ಕಳೆದ 71 ವರ್ಷಗಳಲ್ಲಿ ದೇಶ ಯಾವ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಿಬೇಕಾಗಿತ್ತೋ, ಅದನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ, ಸಾಕಷ್ಟು ಸಾಧನೆಗಳು ಆಗಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಎಲ್ಲವನ್ನು ಸಾಧಿಸಿ ಬಿಟ್ಟಿದ್ದೇವೆ ಎನ್ನುವುದಕ್ಕೆ ಸಾಧ್ಯವಿಲ್ಲ. ಆದರೆ, ಇದೆಲ್ಲವನ್ನು ಸಾಧಿಸಿದ್ದೇವೆ, ಮಾಡಿದ್ದೇವೆ. ಅಭಿವೃದ್ಧಿಯಾಗಿದೆ ಎಂದು ಹೇಳಿಕೊಳ್ಳುವ ಸಮಯ ಇದಾಗಿದೆ. ಇವತ್ತು ಪ್ರಜಾಪ್ರಭುತ್ವ ಉಳಿದುಕೊಂಡಿದೆ ಎನ್ನುವುದಾದ್ರೆ, ರಾಜಕಾರಣ ನಡೆಯುತ್ತಿದೆ ಎನ್ನುವುದಾದ್ರೆ ಮತ್ತು ಜನರಿಗೆ ಅವರ ಇಚ್ಛೆಯಂತೆ ಎಲ್ಲವೂ ಸಿಗುತ್ತಿದೆ ಎಂದಾದರೆ ಅಲ್ಲಿ ಸಾಧನೆಯಾಗಿದೆ ಎಂತಲೇ ಅರ್ಥ. ಅದನ್ನು ನಾವು 90ರಿಂದ 100 ವರ್ಷದ ಹಿರಿಯರನ್ನು ಕೇಳಬೇಕಾಗುತ್ತದೆ. ನಿಮ್ಮ ಕಾಲದಲ್ಲಿ ಹೇಗಿತು, ಈಗ ಹೇಗಿದೆ ಎಂದು ಕೇಳಿದಾಗ ಅವರು ಹೇಳುತ್ತಾರಲ್ಲ. ಅದು ನಮ್ಮ ಸಾಧನೆಗೆ ಉತ್ತರ ಮತ್ತು ಗುರಿಯ ಸೌಧ ಎಂದರು. 1947ರಲ್ಲಿ ಉದ್ದೇಶವಿತ್ತು: 1947ರಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಹುತಾತ್ಮರಲ್ಲಿ ಸ್ವಾತಂತ್ರ್ಯ ಸಿಗುತ್ತದೆಯೋ ಇಲ್ಲವೋ ಎನ್ನುವ ಭರವಸೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ವಾಭಿಮಾನ, ದೇಶಾಭಿಮಾನ, ಪ್ರಾಮಾಣಿಕತೆ ಹಾಗೂ ಒಂದು ದೊಡ್ಡ ಉದ್ದೇಶವಂತೂ ಇತ್ತು. ಅದಕ್ಕಾಗಿ ಹಲವಾರು ಮಹನೀಯರು ತಮ್ಮ ನೆತ್ತರು ಚೆಲ್ಲಿ ನಮಗೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದಾರೆ. ಗುಲಾಮಗಿರಿಯಿಂದ ನಮ್ಮನ್ನು ಮುಕ್ತರನ್ನಾಗಿಸಿದ್ದಾರೆ ಎಂದರು. ಸಹೋದರತ್ವ, ಸೌಹಾರ್ದತೆ ಮತ್ತು ಸ್ವಾಭಿಮಾನ, ದೇಶಾಭಿಮಾನದಿಂದ ದೇಶವನ್ನು ರಕ್ಷಣೆ ಮಾಡಬೇಕಿದೆ. ಮಹಾತ್ಮಾ ಗಾಂಧೀಜಿ, ನೆಹರು, ಲಾಲಬಹದ್ದೂರ್ ಶಾಸ್ತ್ರೀ, ಭಗತ್‌ಸಿಂಗ್, ಸುಭಾಷಚಂದ್ರ ಭೋಸ್ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ನೆನಪಾಗುತ್ತಾರೆ. ಅವರ ಸ್ಮರಣೆ ನಮ್ಮಲ್ಲಿ ದೇಶಾಭಿಮಾನ ಉಕ್ಕುವಂತೆ ಮಾಡಬೇಕು. ಇಂದಿನ ಯುವಕರಲ್ಲಿ ಇದು ಪ್ರಜ್ವಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಧಜ್ವ ಹಿಡಿದರಷ್ಟೆ ಅಲ್ಲ: ಕೇವಲ ಧ್ವಜ ಹಿಡಿದು ಓಡಾಡುವುದು, ಕೂಗಾಡುವುದರಿಂದ ದೇಶಾಭಿಮಾನ ಹೆಚ್ಚಾಗುವುದಿಲ್ಲ. ಯಾವುದೋ ಒಂದು ಭಾವನೆ ಕೆರಳಿಸಿಕೊಂಡು ಹೊರಟು ನಿಲ್ಲುವುದರಿಂದ ದೇಶ ಬೆಳೆಯುವುದಿಲ್ಲ. ನಮ್ಮ ನಡೆ ನುಡಿಗಳಲ್ಲಿ, ಆಚಾರ, ವಿಚಾರಗಳಲ್ಲಿ ದೇಶಾಭಿಮಾನ ಇರಬೇಕು. ನಮ್ಮವರನ್ನು ಪ್ರೀತಿಯಿಂದ ಕಾಣುವ ಗುಣಬೇಕು. ಕೇವಲ ರಾಜಕಾರಣಿಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಬೇಕು. ಮನುಷ್ಯತ್ವದಿಂದ, ಸ್ವಾಭಿಮಾನದಿಂದ ದೇಶ ರಕ್ಷಣೆ ಹೊಣೆ ಹೊರಬೇಕು ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಹಲವಾರು ಅಭಿವೃದ್ಧಿಗಳಾಗಿವೆ. ಹಸಿದ ಹೊಟ್ಟೆಗಳು ತುಂಬುತ್ತಿವೆ. ಬರಗಾಲದಲ್ಲೂ ಗುಳೆಹೋಗದಂತೆ ರೈತರಿಗೆ, ಕೃಷಿಕೂಲಿ ಕಾರ್ಮಿಕರಿಗೆ, ದುಡಿಯವ ವರ್ಗಕ್ಕೆ ಅನ್ನ ದೊರೆಯುವಂತೆ ಮಾಡಲಾಗಿದೆ. ನೀರಾವರಿ ಯೋಜನೆಗಳಿಗೆ ಹಣ ನೀಡಿ ಕಾಯಕಲ್ಪ ಮಾಡಲಾಗಿದೆ. ಆರೋಗ್ಯ ವಿಚಾರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಲಾಗುವುದು. ಅಲ್ಲದೆ, ಮುಲ್ಲಾಮಾರಿ, ಗಂಡೋರಿ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ. ಶೀಘ್ರವೇ ಕಲಬುರಗಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದರು. ಶಾಸಕ ಶರಣಪ್ಪ ಮಟ್ಟೂರ್, ದಕ್ಷಿಣ ಮತ ಕ್ಷೇತ್ರ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್, ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಡಿಎ ಅಧ್ಯಕ್ಷ ಅಸಗರ್ ಚುಲಬುಲ್, ಮೇಯರ್ ಶರಣಕುಮಾರ ಮೊದಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಪ್ರಾದೇಶಿಕ ಆಯುಕ್ತ ಹರ್ಷಾ ಗುಪ್ತಾ, ಐಜಿಪಿ ಅಲೋಕಕುಮಾರ, ಜಿಲ್ಲಾಧಿಕಾರಿ ವೆಂಕಟೇಶಕುಮಾರ, ಪಾಲಿಕೆ ಆಯುಕ್ತ ಸುನೀಲಕುಮಾರ, ಜಿಪಂ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಐಎಎಸ್ ಅಧಿಕಾರಿ ಡಾ| ರಾಘಪ್ರಿಯಾ, ಎಸ್ಪಿ ಎನ್.ಶಶಿಕುಮಾರ,ಐಎಎಸ್ ಪ್ರೋಭೆಷನರಿ ಆಕೃತಿ ಸಾಗರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ, ಡಿವೈಎಸ್ಪಿ ಜಾಹ್ನವಿ ಹಾಗೂ ಇನ್ನಿತರ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಶಾಲೆಗಳ ವಿದ್ಯಾರ್ಥಿನಿಯರು, ಶಿಕ್ಷಕರು ಹಾಜರಿದ್ದರು