Advertisement
ಈ ಪರಿಕಲ್ಪನೆಗಳನ್ನು ದಿನನಿತ್ಯದ ಬದುಕಿನಲ್ಲಿ ಅನುಸರಿಸುವ ತತ್ವಗಳಾಗಿ ಅನುಷ್ಠಾನಕ್ಕೆ ತರುವ ಮೂಲಕ ಮೋಹನದಾಸರು ಗಾಂಧಿಯಾಗಿ ಬದಲಾದರೆ, ಕನಸುಗಳೇ ಇಲ್ಲದ, ದನಿಯಿಲ್ಲದ ಸಮುದಾಯ ತನ್ನ ನೋವಿಗೆ ಸತ್ಯಾಗ್ರಹ, ಅಹಿಂಸೆ ಮತ್ತು ಧರ್ಮದ ಮೂಲಕ ಗಂಟಲಾದ ರೀತಿಗೆ ದೇಶವೇ ಬೆರಗಾಗಿ ಹೋಗಿತ್ತು.
Related Articles
Advertisement
ಕಾಲದ ಪ್ರಭಾವವನ್ನು ತಿಳಿದು ಬದಲಾದ ಪರಿಸ್ಥಿತಿಯ ಬೆಳಕಲ್ಲಿ ಪ್ರಸ್ತುತವಾಗಿರಿಸಿಕೊಂಡು ಪುರುಷಾರ್ಥದ ಪರಿಕಲ್ಪನೆಯನ್ನು ಮರುನಿರೂಪಿಸುತ್ತಾ ಇರಬೇಕು ಎನ್ನುವುದು ಅನ್ವೇಷಕ ಮನೋಭಾವದ ಗಾಂಧಿಯ ನಿಲುವಾಗಿತ್ತು. ಇಂತಹ ತಿಳಿವಿನ ಕಾರಣದಿಂದಲೇ ಗಾಂಧಿ ಅಧಿಕಾರದ ಮೂಲಕ ಜಗತ್ತನ್ನು ಆಳುವ ಶಕ್ತಿ ಹೊಂದಿದ ಬ್ರಿಟಿಷ್ ಸಾಮ್ರಾಜ್ಯಶಾಹಿಯ ದೈತ್ಯ ಬಲವನ್ನು ಹಳೆಕಾಲದ ತಿಳಿವಳಿಕೆಯ ಮೂಲಕ ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಕೊಂಡರು.
ನಮ್ಮನ್ನು ಆಳುತ್ತಿದ್ದ, ಆಧಿಕಾರ ಚಲಾಯಿಸುತ್ತಿದ್ದ ಸಾಮ್ರಾಜ್ಯಶಾಹೀ ಶಕ್ತಿಯನ್ನು ಎದುರಿಸಲು ಹೊಸ ಅಸ್ತ್ರವೊಂದರ ಅಗತ್ಯ ತುಂಬಾ ಇದೆ ಎನ್ನುವ ವಿಷಯ ಗಾಂಧಿಗೆ ಮನವರಿಕೆಯಾಗಿತ್ತು ಎಂದು ತಿಳಿದು ಬರುತ್ತದೆ. ಈ ಕಾರಣದಿಂದಲೇ ನಮ್ಮ ಪಾರಂಪರಿಕ ತಿಳಿವಳಿಕೆಗಳ ಮರುಚಿಂತನೆ ನಡೆಸುವ ಅಗತ್ಯ ಎದುರಾಗಿ ಅರ್ಥ ಮತ್ತು ಮೋಕ್ಷ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎನ್ನುವ ಹುಡುಕಾಟ ಅನ್ವೇಷಕ ಗಾಂಧಿಯೊಳಗೆ ಶುರುವಾದದ್ದು. ಹೀಗಾಗಿಯೇ ವರ್ತಮಾನದ ಅನುಭವದ ಆಧಾರದಲ್ಲಿ ಪುರುಷಾರ್ಥದ ಹೊಸ ವ್ಯಾಖ್ಯಾನ ಬರೆಯಲು ಗಾಂಧಿಗೆ ಕಾರಣ ಮತ್ತು ಪ್ರೇರಣೆ ದೊರೆತಿರಬೇಕು.
ವ್ಯಕ್ತಿಯೊಬ್ಬ ತನ್ನ ಅಂತಃಶಕ್ತಿಯನ್ನು ಉತ್ಕರ್ಷಿಸುವ ಮೂಲಕ ಬದುಕಿನಲ್ಲಿ ತಾನು ಸಾಧಿಸಬೇಕಿರುವ ಗುರಿಯನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಅದರ ಸಾಧನೆಗೆ ಸಾಗಬೇಕಿರುವ ದಾರಿಯಲ್ಲಿ ಬೇಕಿರುವ ಕೌಶಲ, ಬುದ್ಧಿವಂತಿಕೆ, ಛಲವೇ ಪುರುಷಾರ್ಥ. ಗುರಿಸಾಧನೆಯ ಹಾದಿಯಲ್ಲಿ ನಮ್ಮೊಳಗಿರಬಹುದಾದ ದೌರ್ಬಲ್ಯಗಳನ್ನು ಮೀರಿ, ಎದುರಾಗಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸಿ ಛಲ ಮತ್ತು ಬಲವನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೇ ಪುರುಷಾರ್ಥ ಸಾಧನೆ ಆಗಿದೆ. ಈ ಪರಿಷ್ಕರಿತ ಪುರುಷಾರ್ಥದ ಪರಿಕಲ್ಪನೆಯಲ್ಲಿ ಲಿಂಗ ತಾರತಮ್ಯವಿಲ್ಲದ, ಜಾತೀಯತೆಯಿಲ್ಲದ, ವಿಧಿಲಿಖೀತವನ್ನು ಮೀರಿ ಆಧ್ಯಾತ್ಮಿಕ, ಭೌದ್ಧಿಕ ಹಾಗೂ ಭೌತಿಕ ಸಾಧನೆ ಮಾಡುವ ಅವಕಾಶಗಳು ಎಲ್ಲರಿಗೂ ಮುಕ್ತವಾಗಿರುತ್ತದೆ.
ಬದಲಾದ ಸನ್ನಿವೇಷದಲ್ಲಿ ಪುರುಷಾರ್ಥದ ನಾಲ್ಕು ಹಂತಗಳಾಗಿರುವ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು ಪರಸ್ಪರ ವಿರೋಧಿಯಾದ ಮತ್ತು ಒಂದು ಇನ್ನೊಂದರಿಂದ ಹೊರತಾದ ಅಂಶಗಳಾಗಿರದೆ ಪರಸ್ಪರ ಪೂರಕವಾದ ಆಂಶಗಳೆಂದು ಅವರ ತಿಳಿವಳಿಕೆ ಆಗಿತ್ತು ಎನ್ನಬಹುದು. ಅರ್ಥದ ಪುನರ್ ವ್ಯಾಖ್ಯಾನ ಮಡುವ ಹಂತದಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಚಿಂತನೆಯಲ್ಲಿ ವ್ಯಕ್ತವಾದ ಅಧಿಕಾರದ ಪರಿಕಲ್ಪನೆಯನ್ನು ಪರಿಷ್ಕರಿಸಿ ಅವೆರಡನ್ನೂ ಸಾಮಾಜಿಕ ಹಿತದ ದೃಷ್ಟಿಯಿಂದ ಮರುನಿರೂಪಿಸುತ್ತಾ ಹೋದರು. ಅದರಂತೆ, ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರವೆಂದರೆ ಒಂದು ನ್ಯಾಯಯುತವಾದ, ಶಾಂತಿಯುತವಾದ ಹಾಗೂ ಸಹಬಾಳ್ವೆ ಸಾಧ್ಯವಾಗುವ ಸಮುದಾಯ ನಿರ್ಮಿಸುವ ಪ್ರಕ್ರಿಯೆಯಾಗಿದೆ ಎಂದು ಕಂಡುಕೊಂಡರು.
ನಾಗರಿಕರಿಗೆ ಯಾ ಪ್ರಜೆಗಳಿಗೆ ಅನ್ವಯಿಸಿ ಹೇಳುವುದಾದರೆ ರಾಜಕೀಯ ಅಧಿಕಾರವೆನ್ನುವುದು, ಒಂದು ಸಮುದಾಯದಲ್ಲಿ ಸಾರ್ವಜನಿಕ ಜವಾಬ್ದಾರಿ ಯಾ ಹೊಣೆಗಾರಿಕೆಯ ಆಧಾರದ ಮೇಲೆ ವೈಯಕ್ತಿಕ ನಡವಳಿಕೆಗಳನ್ನು ರೂಪಿಸಿ ಅದರಂತೆ ನಡೆಯಲು ಸಾಧ್ಯವಾಗುವ ಸಮಾಜ ನಿರ್ಮಾಣ ಮಾಡುವುದಾಗಿದೆ. ವಿವೇಚನಾ ರಹಿತವಾಗಿ ಅಧಿಕಾರದ ಬಳಕೆಯಾಗಿ ನೊಂದವರು ಯಾ ಶೋಷಿತರ ದೃಷ್ಟಿಯಲ್ಲಿ ರಾಜಕೀಯ ವ್ಯವಸ್ಥೆ ಎಂದರೆ, ಶೋಷಣೆಯ ವಿರುದ್ಧ ಪ್ರತಿಭಟಿಸುವ, ಮತ್ತು ತಮಗಾಗುತ್ತಿರುವ ನೋವು ಅವಮಾನಗಳನ್ನು ವಿರೋಧಿಸಿ ನ್ಯಾಯ ಪಡೆಯುವ ಅವಕಾಶವಾಗಿದೆ.
ಈ ರೀತಿಯಾಗಿ ರಾಜಕೀಯ ಅಧಿಕಾರದ ಪರಿಕಲ್ಪನೆಯನ್ನು ಹೊಸ ವಿವೇಕದ ನೆಲೆಯಿಂದ ಬಹುತ್ವದ ಬೆಳಕಲ್ಲಿ ಕಾಣುವ ಮೂಲಕ “ಅಧಿಕಾರ ಹಾಗೂ ರಾಜಕೀಯ ವ್ಯವಸ್ಥೆಯ ಪರಿಕಲ್ಪನೆ’ಯ ನೆರಳಾಗಿದ್ದ “ಹಿಂಸೆ’ಯನ್ನು ಅವುಗಳಿಂದ ಪ್ರತ್ಯೇಕಿಸುವ ಬಹಳ ಮಹತ್ವದ ಹಾಗೆಯೇ ನಾಜೂಕಿನ ಕೆಲಸವನ್ನು ಗಾಂಧಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು ಎಂದೇ ಹೇಳಬಹುದು.
ಅಷ್ಟು ಮಾತ್ರವಲ್ಲ ಇದು ಭಾರತೀಯ ಚಿಂತನಾ ಪರಂಪರೆಗೆ ಗಾಂಧಿ ನೀಡಿದ ಅನನ್ಯ ಕೊಡುಗೆಯೂ ಹೌದು. ಆ ರೀತಿಯ ಹೊಸ ವ್ಯಾಖ್ಯಾನದ ಅನ್ವಯ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಅಂಶಕ್ಕೆ ಸಾಮಾಜಿಕ ಉತ್ತರದಾಯಿತ್ವದ ನೆಲೆಯಲ್ಲಿ ಅವಕಾಶದ ಹೆಬ್ಟಾಗಿಲನ್ನು ತೆರೆಯಲಾಯಿತು. ಗಾಂಧಿಮಾರ್ಗದ ಇಂದಿನ ಹೊಸ ವಿಳಾಸ ಮೇಲಿನ ಹಿನ್ನೆಲೆಯಲ್ಲಿ ಹುಡುಕುವ ಕೆಲಸ ನಮ್ಮ ಮುಂದಿರುವ ಇಂದಿನ ತುರ್ತು.
-ಡಾ.ಉದಯಕುಮಾರ ಇರ್ವತ್ತೂರು