ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಜನರು ಭಾಗಿಯಾಗಲು ಅಣಿಯಾಗುತ್ತಿದ್ದಾರೆ. ದಲಿತ ಮುಖಂಡರು, ಕರಸೇವಕರು, ಸಾಧು, ಸಂತರು ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವ ಮುಖ್ಯಮಂತ್ರಿಯನ್ನೂ ಆಹ್ವಾನಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:AUSvsWI; ಆಸೀಸ್ ವಿರುದ್ಧದ ಸರಣಿಗೆ ವೆಸ್ಟ್ ಇಂಡೀಸ್ ಏಕದಿನ- ಟಿ20 ತಂಡ ಪ್ರಕಟ
ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾತ್ರ ಆಹ್ವಾನ ನೀಡಿದ್ದು, ಬೇರೆ ಯಾವ ಮುಖ್ಯಮಂತ್ರಿಗಳಿಗೂ ಆಹ್ವಾನ ಇಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಅಷ್ಟೇ ಅಲ್ಲ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಿಲ್ಲ ಎಂದು ಹೇಳಿದೆ.
ಜನವರಿ 22ರ ಕಾರ್ಯಕ್ರಮಕ್ಕೆ ಬಿಆರ್ ಅಂಬೇಡ್ಕರ್, ಜಗ್ ಜೀವನ್ ರಾಮ್, ಕಾನ್ಶಿ ರಾಮ್ ಕುಟುಂಬದ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ರಾಮಜನ್ಮಭೂಮಿ ಚಳವಳಿ ಸಂದರ್ಭದಲ್ಲಿ ಮಡಿದ ಕರಸೇವಕರ ಕುಟುಂಬದ ಸದಸ್ಯರನ್ನೂ ಆಹ್ವಾನಿಸಲಾಗಿದೆ ಎಂದು ವರದಿ ವಿವರಿಸಿದೆ.
ಸುಪ್ರೀಂಕೋರ್ಟ್ ನ ಮೂವರು ನಿವೃತ್ತ ಮುಖ್ಯ ನ್ಯಾಯಾಧೀಶರು, ಭೂ, ನೌಕಾಪಡೆ ಮತ್ತು ವೈಮಾನಿಕ ಪಡೆಯ ನಿವೃತ್ತ ಮುಖ್ಯಸ್ಥರು, ಮಾಜಿ ರಾಯಭಾರಿಗಳು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು, ನೋಬೆಲ್ ಪ್ರಶಸ್ತಿ ವಿಜೇತ ಕುಟುಂಬದ ಸಹೋದರ, ಸಹೋದರಿಯರಿಗೆ ಆಹ್ವಾನ ನೀಡಲಾಗಿದೆ.
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದ್ದು, ಏತನ್ಮಧ್ಯೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಅಧೀರ್ ರಂಜನ್ ಚೌಧುರಿ ಇದೊಂದು ರಾಜಕೀಯ ಪಕ್ಷದ ಕಾರ್ಯಕ್ರಮ ಎಂದು ಆರೋಪಿಸಿ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಹೇಳಿದೆ.