Advertisement

ಅದ್ವಿತೀಯ ರಾಜಕೀಯ –ಸಾಮಾಜಿಕ ಸಾಧಕ: ಎ.ಬಿ. ಶೆಟ್ಟಿ

12:45 PM Apr 07, 2018 | Team Udayavani |

ಅತ್ತಾವರ ಬಾಲಕೃಷ್ಣ ಶೆಟ್ಟಿ- ರಾಜ್ಯ, ರಾಷ್ಟ್ರ ರಾಜಕಾರಣ ಮತ್ತು ಆಡಳಿತದಲ್ಲಿ ಸರ್ವಾದರ್ಶ ವ್ಯಕ್ತಿತ್ವದ ಅಪೂರ್ವ ಸಾಧಕ; ಅವಿಭಜಿತ ದ. ಕ. ಜಿಲ್ಲೆಯ ಈ ಹೆಮ್ಮೆಯ ಮುತ್ಸದ್ದಿ ಎ. ಬಿ. ಶೆಟ್ಟಿ ಎಂದು ಪ್ರಖ್ಯಾತರು.

Advertisement

ಕರ್ನಾಟಕದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಮರಣ ಔಚಿತ್ಯಪೂರ್ಣ. ಏಕೆಂದರೆ, ರಾಜಕೀಯ ರಂಗ, ಶಿಕ್ಷಣ, ಬ್ಯಾಂಕಿಂಗ್‌, ಆಡಳಿತ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಔನ್ನತ್ಯಗಳನ್ನು ಸಾಧಿಸಿದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಅವರೆಂದೂ ಅಧಿಕಾರದ ಹಿಂದೆ ಹೋಗಿರಲಿಲ್ಲ; ಆದರೆ ಮಹತ್ವದ ಹೊಣೆಗಾರಿಕೆಯು ಅವರನ್ನೇ ಹುಡುಕಿಕೊಂಡು ಬಂತು. ಈ ಹೊಣೆಗಾರಿಕೆಗಳಿಗೆಲ್ಲ ಅವರು ಪರಿಪೂರ್ಣ ನ್ಯಾಯ ಒದಗಿಸಿದರು.

ಎ. ಬಿ. ಶೆಟ್ಟಿ ಅವರು 15-11-1882ರಂದು ಮೂಲ್ಕಿ ದೊಡ್ಡಮನೆಯಲ್ಲಿ ಜನಿಸಿದರು. ಮಂಗಳೂರಿನ ಕೆನರಾ ಮತ್ತು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 1936ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಮದ್ರಾಸ್‌ ವಿಧಾನಸಭೆಗೆ ಆಯ್ಕೆಯಾದರು. 1937ರಲ್ಲಿ ಮದ್ರಾಸ್‌ನ ಸಂಸದೀಯ ಕಾರ್ಯದರ್ಶಿಯಾದರು. 1943ರಲ್ಲಿ ಮತ್ತೆ ಮದ್ರಾಸ್‌ ವಿಧಾನಸಭೆಗೆ ಆಯ್ಕೆಗೊಂಡರು. 1947ರಲ್ಲಿ ಆಗಿನ ಅಲ್ಲಿನ ಮುಖ್ಯಮಂತ್ರಿ ಓಮಂದೂರು ಅವರ ಮಂತ್ರಿಮಂಡಲದಲ್ಲಿ ಆರೋಗ್ಯ ಸಚಿವ; 1949ರಲ್ಲಿ ಅಲ್ಲಿನ ಕುಮಾರಸ್ವಾಮಿ ಸಂಪುಟದಲ್ಲಿ ಕೃಷಿ- ಬಳಿಕ ಶಿಕ್ಷಣ ಮತ್ತು ವಿತ್ತ ಸಚಿವರಾಗಿ, 1952ರಲ್ಲಿ ಚಕ್ರವರ್ತಿ ರಾಜ ಗೋಪಾಲ್‌ ಸಂಪುಟ ಮತ್ತು 1954ರಲ್ಲಿ ಕಾಮರಾಜ್‌ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ; 1956ರಲ್ಲಿ ಮೈಸೂರು ರಾಜ್ಯ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು.

1957ರಲ್ಲಿ ಮಂಗಳೂರಿನ ಕದ್ರಿ ಮನೆಗೆ ಬಂದು ನೆಲೆಸಿದ ಅವರು 12-1-1960ರಂದು ನಿಧನರಾದರು.

ವಿಜಯ ಬ್ಯಾಂಕಿನ ಸ್ಥಾಪನೆಗೆ ಎ.ಬಿ. ಶೆಟ್ಟಿ ಅವರು ಸ್ಫೂರ್ತಿಯಾದರು. ಮದ್ರಾಸ್‌ ಸರಕಾರದ ಮೂಲಕ ಕರಾವಳಿಗೆ, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಅಪಾರ ಅನುದಾನ ದೊರೆಯಲು ಅವರು ಕಾರಣರಾದರು.

Advertisement

ಬಂಟ್ಸ್‌ಹಾಸ್ಟೆಲ್‌ನಲ್ಲಿ ಅವರ ಹೆಸರಿನ ಸಭಾಭವನ, ನೆಹರೂ ಮೈದಾನ ಬಳಿ ಸರ್ಕಲ್‌, ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ವೈದ್ಯಕೀಯ ಆಸ್ಪತ್ರೆ ಮುಂತಾದ ಕೊಡುಗೆಗಳಿವೆ.

2 ರಾಜ್ಯಗಳಲ್ಲಿ ಸಚಿವ!
ಮದ್ರಾಸ್‌ (ತಮಿಳ್ನಾಡು) ಮತ್ತು ಮೈಸೂರು (ಕರ್ನಾಟಕ) ರಾಜ್ಯಗಳೆರಡರಲ್ಲೂ ಮಂತ್ರಿಗಳಾದ ವಿಶೇಷ ಸಾಧನೆ ಎ. ಬಿ. ಶೆಟ್ಟಿ ಅವರದ್ದು. 1952ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾರ್ಕಳ ಕ್ಷೇತ್ರದಿಂದ (ಕಾಂಗ್ರೆಸ್‌) ಮದ್ರಾಸ್‌ ವಿಧಾನಸಭೆಗೆ ಆಯ್ಕೆಯಾದರು. 1956ರಲ್ಲಿ ಮೈಸೂರು ರಾಜ್ಯದ ಏಕೀಕರಣದ ನಂತರ ಈ ಭಾಗದ ಶಾಸಕರೆಲ್ಲ ಮೈಸೂರಿನ ಶಾಸಕರಾದರು. 1957ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಬಂದರೂ ಸ್ವೀಕರಿಸದ ಅವರು ಹುಟ್ಟೂರಿನಲ್ಲಿ ಸಮಾಜಸೇವೆಯ ವಿಶ್ರಾಂತ ಜೀವನವನ್ನು ಆಯ್ಕೆ ಮಾಡಿಕೊಂಡರು.

 ಮನೋಹರ ಪ್ರಸಾದ್ 

Advertisement

Udayavani is now on Telegram. Click here to join our channel and stay updated with the latest news.

Next