ಬೆಂಗಳೂರು: ನಾವು ಆರಿಸಿಕೊಳ್ಳುವ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡುವುದು ಮುಖ್ಯವಾಗುತ್ತದೆ. ಇದಕ್ಕೆ ನಾಯಕರಾದ ಡಿ.ಎಚ್ ಶಂಕರಮೂರ್ತಿ ಅವರು ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಗತ್ತು ಯಾವಾಗಲೂ ಸ್ಪರ್ಧಾತ್ಮಕವಾಗಿರುತ್ತದೆ. 21ನೇ ಶತಮಾನದಲ್ಲಂತೂ ಇದು ತೀವ್ರವಾಗಿದೆ. ಆದ್ದರಿಂದ ನಾವು ಸದಾ ಖಚಿತತೆ, ಪರಿಣತಿ ಮತ್ತು ಉತ್ಕೃಷ್ಟತೆ ಸಾಧಿಸುವ ಗುರುಗಳನ್ನು ಇಟ್ಟುಕೊಂಡಿರಬೇಕು ಎಂದು ಅವರು ಆಶಿಸಿದರು.
ರಾಜ್ಯ ರಾಜಕಾರಣದಲ್ಲಿ ಶಂಕರಮೂರ್ತಿಯವರು ಆರು ದಶಕಗಳ ಕಾಲ ನಿಷ್ಠೆಯಿಂದ ದುಡಿದಿದ್ದಾರೆ. ಅವರು ಈ ವಿಷಯದಲ್ಲಿ ನಮ್ಮೆಲ್ಲರಿಗೂ ಆದರ್ಶ ಮತ್ತು ಮೌಲ್ಯಗಳಿಂದ ಕೂಡಿರುವ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ ಎಂದು ಅವರು ಬಣ್ಣಿಸಿದರು
ಮನುಕುಲದಲ್ಲಿ ಸಾಧನೆಯನ್ನು ಮಾಡಿದವರು ಶಾಶ್ವತವಾಗಿ ಉಳಿಯುತ್ತಾರೆ. ಸುದ್ದಿ ವಾಹಿನಿಗಳು ಮತ್ತು ಮಾಧ್ಯಮಗಳು ಇಂಥವರನ್ನು ಗುರುತಿಸುವುದು ಒಳ್ಳೆಯದು ಎಂದು ಅವರು ಹೇಳಿದರು.
ಸಮಾಜಸೇವೆ ಉದ್ಯಮಶೀಲತೆ ರಾಜಕಾರಣ ಮತ್ತು ಸಮುದಾಯದ ಹಿತ ಹೀಗೆ ಎಲ್ಲವನ್ನೂ ಬೆಳೆಸಿಕೊಂಡಿರುವ ಶಂಕರ ಮೂರ್ತಿಯವರು ತಮ್ಮ ಅನುಪಮ ಮತ್ತು ಸಮಾಜಮುಖಿ ವ್ಯಕ್ತಿತ್ವದಿಂದ ಚಿರಂತನವಾಗಿ ಉಳಿಯಲಿದ್ದಾರೆ. ಸಾರ್ವಜನಿಕ ಬದುಕಿಗೆ ಬರುವವರು ಇಂಥವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಸಚಿವರು ನುಡಿದರು.