Advertisement

ಹೆಚ್ಚುವರಿ ಭೂ ಮಂಜೂರಾತಿ ಪರಿಶೀಲನೆ

10:56 AM Mar 23, 2017 | Harsha Rao |

ವಿಧಾನ ಪರಿಷತ್ತು: ನಗರ ಹಾಗೂ ಗ್ರಾಮಾಂತರ ಪ್ರದೇಶದ ಸರ್ಕಾರಿ ಭೂಮಿಯನ್ನು ನಿಗದಿಪಡಿಸಿರುವ ವಿಸ್ತೀರ್ಣಕ್ಕಿಂತ
ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ವಾಸವಿರುವ ಜಾಗವನ್ನು ಮಂಜೂರು ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಭಾನುಪ್ರಕಾಶ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಹೊರವಲಯದಲ್ಲಿ 20-30 ಚದರ ಅಡಿ ವಿಸ್ತೀರ್ಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 50-80 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಮನೆಗಳನ್ನು ಕ್ರಮವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 94ಸಿಸಿ ಹಾಗೂ 94ಸಿ ಅಡಿ ಸಕ್ರಮಕ್ಕೆ ಅವಕಾಶವಿದೆ. ಆದರೆ, ಈ ವಿಸ್ತೀರ್ಣ ಹೊರತಾಗಿ ಒತ್ತುವರಿಯಾದ ಭೂಮಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ ಅದನ್ನು ಕಾಯ್ದೆಯ ಕಲಂ 94ಎ, 94ಬಿ ಅಡಿ ಮಂಜೂರು ಮಾಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡ ವಾಸದ ಮನೆಗಳ ಸಕ್ರಮಕ್ಕೆ ಕೋರಿ 2017ರ ಫೆಬ್ರವರಿವರೆಗೆ 5,37,245 ಅರ್ಜಿ ಸಲ್ಲಿಕೆಯಾಗಿದ್ದು, 2,37,710 ಅರ್ಜಿ ವಿಲೇವಾರಿಯಾಗಿದೆ. ನಗರದ ಪ್ರದೇಶಗಳಲ್ಲಿ ಒಟ್ಟು 1,64,609 ಅರ್ಜಿ ಸಲ್ಲಿಕೆಯಾಗಿದ್ದು, 45,640 ವಿಲೇವಾರಿಯಾಗಿವೆ. ಅರ್ಜಿ ಸಲ್ಲಿಕೆ ಅವಧಿಯನ್ನು 2019 ಫೆಬ್ರವರಿ 27ರವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದೇ ಸರ್ವೇ ನಂಬರ್‌ನಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯಿದ್ದರೆ ಪಕ್ಕಾಪೋಡಿ ಮಾಡಿಸಿ ಅರಣ್ಯ ಭಾಗ ಹೊರತುಪಡಿಸಿ ಉಳಿದ ಭೂಮಿಯನ್ನು ಮಂಜೂರು ಮಾಡಲು ತಹಶೀಲ್ದಾರ್‌ರವರಿಗೆ ಅಧಿಕಾರ ನೀಡಲಾಗಿದೆ. ಹಾಗೆಯೇ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಗ್ರಾಮಗಳಿಗೆ ತೆರಳಿ ನಕ್ಷೆ ಪ್ರಕಾರ ಪರಿಶೀಲಿಸಲು ಸೂಚಿಸಲಾಗಿದೆ.

ಈ ವೇಳೆಯಲ್ಲಿಯೇ ಅರ್ಜಿ ಸ್ವೀಕರಿಸಲೂ ಸೂಚಿಸಲಾಗಿದೆ. ಹುಟ್ಟಿದ ಮನುಷ್ಯ ಬಾಳಿ ಬದುಕಿದ ಮನೆಯಲ್ಲಿ ಜೀವನ ನಡೆಸಲು ಅವಕಾಶ ನೀಡುವ ಉದ್ದೇಶದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ಭಾನುಪ್ರಕಾಶ್‌, ನಗರ ಮತ್ತು ಗ್ರಾಮಾಂತರ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಜನರು ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಅಳತೆ ಹೊರತುಪಡಿಸಿ ಉಳಿಕೆ ವಿಸ್ತೀರ್ಣದ ಜಾಗದಲ್ಲಿ ನೆಲೆಸಿದವರಿಗೆ ಉಚಿತವಾಗಿ ಇಲ್ಲವೇ ಶುಲ್ಕ ಸಂಗ್ರಹಿಸಿ ಸದರಿ ಜಾಗವನ್ನು ಮಂಜೂರು
ಮಾಡುವುದು ಸೂಕ್ತ. ಈ ಸಂಬಂಧ ತಿದ್ದುಪಡಿ ತರುವತ್ತ ಚಿಂತಿಸಬಹುದು ಎಂದು ಸಲಹೆ ನೀಡಿದರು.

Advertisement

ಜುಲೈನೊಳಗೆ 800 ಪರವಾನಗಿ ಭೂಮಾಪಕರ ನೇಮಕ
ವಿಧಾನ ಪರಿಷತ್ತು: ಮುಂದಿನ ಜುಲೈ ವೇಳೆಗೆ 800 ಮಂದಿ ಪರವಾನಗಿ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, “ಭೂಮಾಪನ ಇಲಾಖೆಯಲ್ಲಿ ಒಟ್ಟು 4,012 ಭೂಮಾಪಕರ ಹುದ್ದೆಗಳಿದ್ದು, ಈ ಪೈಕಿ 1,098 ಹುದ್ದೆ ಖಾಲಿ ಇದೆ. 1067 ಭೂಮಾಪಕರ ಹುದ್ದೆ ಭರ್ತಿಗೆ ಕಳೆದ ನವೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು . ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಶೀಘ್ರ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಸದನಕ್ಕೆ ತಿಳಿಸಿದರು. ಪೋಡಿ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ತಿಂಗಳಲ್ಲಿ 400 ಮಂದಿ ಪರವಾನಗಿ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಜುಲೈನಲ್ಲೂ 400 ಮಂದಿ ಪರವಾನಗಿ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಜತೆಗೆ ನಿವೃತ್ತ ಭೂಮಾಪಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

ಪಂಜಾಬ್‌, ಹರಿಯಾಣದಿಂದ ಮೇವು ಖರೀದಿ
ವಿಧಾನಸಭೆ: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಹಣಕಾಸು ಒದಗಿಸಲಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿದ್ದು ಪಂಜಾಬ್‌ ಮತ್ತು ಹರಿಯಾಣದಿಂದ ಖರೀದಿ ಮಾಡಿ ರೈಲಿನಲ್ಲಿ ಮೇವು ಸಾಗಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಸದನದಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಅವರು, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಣ ನೀಡದೆ ತೊಂದರೆಯಾಗುತ್ತಿದೆ ಎಂಬುದಾಗಿ ಸಚಿವರ ಗಮನ ಸೆಳೆದರು. ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಕಾಗೋಡು, ಕುಡಿಯಲು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಸೂಚನೆ ಕೊಡಲಾಗಿದೆ. ಅಗತ್ಯ ಬಿದ್ದಲ್ಲಿ ಕೊಳವೆ
ಬಾವಿ ಕೊರೆಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಈಗಾಗಲೇ ಪಂಜಾಬ್‌ ಮತ್ತು ಹರಿಯಾಣದಲ್ಲಿ ಮೇವು ದೊರೆಯುತ್ತದೆ ಎಂದು ತಿಳಿದು ಬಂದಿದೆ. ಅಲ್ಲಿ ಮೇವು ಖರೀದಿ ಮಾಡಿ ರೈಲಿನ ಮೂಲಕ ರಾಜ್ಯಕ್ಕೆ ತರುವಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next