Advertisement

ಎಕ್ಸಾಮ್‌ ವಾರಿಯರ್: ಮಕ್ಕಳಿಗೆ ಮೋದಿ ಸೂತ್ರ 

01:04 PM Feb 04, 2018 | Team Udayavani |

ಹೊಸದಿಲ್ಲಿ: ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ, ಮಕ್ಕಳಲ್ಲಿ ಪರೀಕ್ಷೆ ಭೀತಿಯನ್ನು ಹೋಗಲಾಡಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಎಕ್ಸಾಮ್‌ ವಾರಿಯರ್ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಸ್ವಂತ ಜೀವನದ ಹಲವು ಉದಾಹರಣೆಗಳನ್ನು ನೀಡುವ ಮೂಲಕ, ಮಕ್ಕಳಲ್ಲಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಇವೆಲ್ಲವೂ ಮನ್‌ ಕಿ ಬಾತ್‌ನಲ್ಲಿ ಈ ಹಿಂದೆ ಮೋದಿ ಮಕ್ಕಳಿಗೆ ನೀಡಿದ ಸಲಹೆಗಳಾಗಿದ್ದು, ಇದನ್ನೇ ಕೃತಿ ರೂಪದಲ್ಲಿ ಹೊರತರಲಾಗಿದೆ. ಇದರ ಜೊತೆಗೆ, ಶಿಕ್ಷಕರು ಹಾಗೂ ಹೆತ್ತವರಿಗೂ ಹಲವು ಸಲಹೆಗಳನ್ನು ಮೋದಿ ನೀಡಿದ್ದಾರೆ.

Advertisement

ಮೋದಿ ಪುಸ್ತಕದಲ್ಲಿ ಉಲ್ಲೇಖೀಸಿದ ಕೆಲವು ಸ್ವಯಂ ಉದಾಹರಣೆಗಳು ಇಲ್ಲಿವೆ.

ನಾಟಕದ ಅನುಭವ
ನಾನು ಶಾಲೆಗೆ ಹೋಗುತ್ತಿದ್ದಾಗ ನಾಟಕವೊಂದರಲ್ಲಿ ಅಭಿನಯಿಸಬೇಕಿತ್ತು. ನಿರ್ದೇಶಕರಿಗೆ ಬೇಕಾದ ರೀತಿಯಲ್ಲಿ ಸಂಭಾಷಣೆ ಹೇಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ  ನಿರ್ದೇಶಕರು ನನ್ನ ಮೇಲೆ ಸಿಟ್ಟಾಗಿದ್ದರು. ನಾನು ಅದೇ ತಪ್ಪನ್ನು ಪುನಃ ಮಾಡುತ್ತಿದ್ದೆ. ಮರುದಿನ ನನ್ನಂತೆಯೇ ನಟಿಸುವಂತೆ ಹಾಗೂ ನಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂದು ತೋರಿಸುವಂತೆ ಅವರನ್ನು ಕೇಳಿಕೊಂಡೆ. ಅವರು ಹಾಗೆ ಮಾಡಿದಾಗ ನನಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಯಿತು.

ಪ್ರಧಾನ ಕಾರ್ಯದರ್ಶಿಯಾಗಿದ್ದಾಗಿನ ಅನುಭವ
  ಪರೀಕ್ಷೆಗೆ ತಯಾರಿ ಅತ್ಯಂತ ಮುಖ್ಯ. ಒಂದು ವಿಷಯವನ್ನು ಚರ್ಚಿಸುವುದು ತಯಾರಿಯಲ್ಲಿ ಮಹತ್ವದ್ದಾಗಿರುತ್ತದೆ. ಹಿಂದೊಮ್ಮೆ ನಾನು ಬಿಜೆಪಿಯಲ್ಲಿ ಸಂಘಟನೆಯ ಹೊಣೆ ಹೊತ್ತಿದ್ದೆ. ಆಗ ನಾವು ಕಾರ್ಯಕರ್ತರನ್ನು ವಿವಿಧ ತಂಡಗಳನ್ನಾಗಿ ವಿಂಗಡಿಸಿ, ಚರ್ಚೆ ನಡೆಸುತ್ತಿದ್ದೆವು. ಈ ಪೈಕಿ ಒಂದು ತಂಡ ವಿರೋಧ ಪಕ್ಷದವರ ಪಾತ್ರ ನಿರ್ವಹಿಸುತ್ತಿತ್ತು. ಅವರು ವಿಭಿನ್ನ ದೃಷ್ಟಿಕೋನದಲ್ಲಿ ಸಮಸ್ಯೆಯನ್ನು ನೋಡುತ್ತಿದ್ದರು. ಇದರಿಂದ ನಮ್ಮ ಸಿದ್ಧತೆ ಹೇಗಿದೆ ಎಂಬುದು ತಿಳಿಯುತ್ತದೆ.

2012ರ ಚುನಾವಣೆ ಕಲಿಸಿದ್ದು
 ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಯ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಬಾರದು. ನಿಮ್ಮಂತೆಯೇ ನನಗೆ 2012ರಲ್ಲೂ ಪರೀಕ್ಷೆ ಎದುರಾಗಿತ್ತು.  ಮತದಾನದ ಅನಂತರ ನಾನು ಇತರ ಕೆಲಸಗಳಿಗೆ ಸಾಗಿದೆ. ಚುನಾವಣೆ ಮರುದಿನವೇ ನಾನು ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮ್ಮೇಳನದ ತಯಾರಿ ಹಾಗೂ ನೀರಾವರಿ ಯೋಜನೆಯ ಮರುಪರಿಶೀಲನೆಗೆ ತೆರಳಿದ್ದೆ.

Advertisement

ಪ್ರಕೃತಿಯೊಂದಿಗೆ ಸಮಯ ಕಳೆಯಿರಿ
 ನಾನು ಬಾಲ್ಯದಲ್ಲಿ ಹಳ್ಳಿಯಲ್ಲಿನ ಕೆರೆಯಲ್ಲಿ ಈಜುವ ಮೂಲಕ ಸಮಯ ಕಳೆಯುವ ಅಭ್ಯಾಸ ಹೊಂದಿದ್ದೆ. ಪ್ರಕೃತಿಯೊಂದಿಗೆ ಸಮಯ ಕಳೆದರೆ ಮನಸು ಆಹ್ಲಾದಕರವಾಗಿರುತ್ತದೆ.

ಚೆನ್ನಾಗಿ ನಿದ್ರೆ ಮಾಡಿ
ಉತ್ತಮ ನಿದ್ರೆ ಅತ್ಯಂತ ಪ್ರಮುಖ. ಹಲವರು ನನ್ನ ಬಳಿ ಹೇಗೆ ನೀವು ನಿದ್ರೆ ಮತ್ತು ಕೆಲಸವನ್ನು ನಿರ್ವಹಿಸುತ್ತೀರಿ ಎಂದು ಕೇಳುತ್ತಾರೆ. ನಿದ್ರೆ ಆಳವಾಗಿಲ್ಲದಿದ್ದರೆ, ಎಷ್ಟು ಹೊತ್ತು ನಿದ್ರಿಸಿದರೂ ನಿಷ್ಪ್ರಯೋಜಕ. ನಿದ್ರೆಗೆ ಜಾರುವಾಗ ಎಲ್ಲ ಚಿಂತೆಗಳನ್ನೂ ದೂರ ಸರಿಸುತ್ತೇನೆ. ಹೀಗಾಗಿ ನಾನು ನಾಲ್ಕರಿಂದ ಆರು ಗಂಟೆಗಳವರೆಗೆ ನಿದ್ರೆ ಮಾಡಿದರೂ ಆಳವಾಗಿರುತ್ತದೆ. ಮರುದಿನ ಇದು ನನ್ನನ್ನು ಉಲ್ಲಾಸಭರಿತವಾಗಿರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next