ಗಾಜಿಯಾಬಾದ್: ಆರ್ಥಿಕ ಮುಗ್ಗಟ್ಟಿನಿಂದಾಗಿ ದೆಹಲಿಯ ಸಾಫ್ಟ್ ವೇರ್ ಇಂಜಿನಿಯರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆಗೈದು. ಬಳಿಕ ತನ್ನ ತಪ್ಪೊಪ್ಪಿಗೆಯ ವೀಡಿಯೋವನ್ನು ಕುಟುಂಬದ ವಾಟ್ಸಪ್ ಆ್ಯಪ್ ಗ್ರೂಪ್ ಗೆ ಕಳುಹಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆಗೈದಿರುವುದಾಗಿ ಮಾಹಿತಿ ನೀಡಿರುವ ವೀಡಿಯೋದಲ್ಲಿ ತಾನು ಕೂಡಾ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿರುವ ಪತಿ ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಗಾಜಿಯಾಬಾದ್ ನಲ್ಲಿ ವಾಸವಾಗಿರುವ ಸುಮಿತ್ ಭಾನುವಾರ ಬೆಳಗ್ಗಿನ ಜಾವ 3ಗಂಟೆಗೆ 32 ವರ್ಷದ ಪತ್ನಿ, ಐದು ವರ್ಷದ ದೊಡ್ಡ ಮಗು ಹಾಗೂ ನಾಲ್ಕು ವರ್ಷದ ಅವಳಿ-ಜವಳಿ ಮಕ್ಕಳನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದ. ಪೊಲೀಸರ ಮಾಹಿತಿ ಪ್ರಕಾರ, ಸುಮಿತ್ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಜನವರಿ ಬಳಿಕ ಆತ ಕೆಲಸ ಬಿಟ್ಟಿದ್ದ. ಇದರಿಂದ ತೀವ್ರವಾಗಿ ಹಣಕಾಸು ತೊಂದರೆ ಒಳಗಾಗಿದ್ದ ಎಂದು ತಿಳಿಸಿದ್ದಾರೆ.
ಹತ್ಯೆಯ ಘಟನೆ ಬಗ್ಗೆ ತಪ್ಪೊಪ್ಪಿಕೊಂಡ ವಿಡಿಯೋವನ್ನು ಕುಟುಂಬದ ವಾಟ್ಸಪ್ ಗ್ರೂಪ್ ಗೆ ಕಳುಹಿಸಿದ್ದ. ತದನಂತರ ಪತ್ನಿಯ ಸಹೋದರನಿಗೆ ಮೊಬೈಲ್ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವುದಾಗಿ ತಿಳಿಸಿದ್ದ. ಈವರೆಗೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪತ್ನಿ ಹಾಗೂ ಮೂವರು ಮಕ್ಕಳ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.